ತುಮಕೂರು: ನಗರದ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವತಿಯಿಂದ ಜನವರಿ 12, 13 ಮತ್ತು 14 ರಂದು ಶ್ರೀ ತ್ಯಾಗರಾಜರ ಮತ್ತು ಶ್ರೀ ಪುರಂದರದಾಸರ ಆರಾಧನೋತ್ಸವ ಆಯೋಜಿಸಲಾಗಿದೆ.
ನಗರದ ವಿವೇಕಾನಂದ ರಸ್ತೆಯ ಮಾ.ಕಂ. ಕಲ್ಯಾಣ ಮಂದಿರದಲ್ಲಿ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ 3 ದಿನಗಳ ಕಾಲ ಗೋಷ್ಠಿಗಾಯನ, ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ- ವ್ಯಾಖ್ಯಾನ, ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ, ವಿದ್ವಾಂಸರಿಂದ ಸಂಗೀತ ಕಛೇರಿ ಆಯೋಜನೆಗೊಂಡಿದೆ.
ಜ.12 ರಂದು ಸಂಜೆ 5.30 ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳು ದೇವರನಾಮ ಹಾಡುವ ಮೂಲಕ ಸಂಗೀತ ಆರಾಧನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 6ಕ್ಕೆ ಹಿರಿಯ ವಿದ್ಯಾರ್ಥಿಗಳಾದ ಮೀನಾ ಕಾಂತ, ಪ್ರಭಾ ವೇಣುಗೋಪಾಲ, ಸಂಧ್ಯಾ ದಿವಾಕರ್, ಕುಸುಮಾ ಕರುಣಾಕರ ಮತ್ತು ಶಾಂತಲಾ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಸಂಜೆ 6.30ಕ್ಕೆ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಸದ್ಗುರು ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳ ಗೋಷ್ಠಿ ನಡೆಯಲಿದ್ದು, ಹಿರಿಯ ಗಾಯಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕಲಾವಿದರು ಏಕ ಕಂಠದಲ್ಲಿ ಪಂಚರತ್ನ ಕೃತಿಗಳನ್ನು ಹಾಡಲಿದ್ದಾರೆ. ಲೇಖಕ ಶಿವಮೊಗ್ಗ ರಘುರಾಮ ಪಂಚರತ್ನ ಕೃತಿಗಳಿಗೆ ವ್ಯಾಖ್ಯಾನ ನೀಡಲಿದ್ದಾರೆ.
ಜ. 13 ರಂದು ಸಂಜೆ 5.30ಕ್ಕೆ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ದಾಸರ ಕೃತಿಗಳ ಗೋಷ್ಠಿ ಗಾಯನವಿದೆ. ಸಂಜೆ 6ಕ್ಕೆ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಮಹಿಳಾ ಸಂಘದ ಕಲಾವಿದರಾದ ಶೈಲಾ ಕುಮಾರಿ, ಟಿ.ಎಲ್. ಪದ್ಮಜಾ, ಸಪ್ನಾ, ಪದ್ಮಜಾ ಅರುಣ್ ಮತ್ತು ಮಮತಾ ದೇವರನಾಮ ಗಾಯನ ಪ್ರಸ್ತುತಪಡಿಸಲಿದ್ದಾರೆ. ಸಂಜೆ 6.30 ಕ್ಕೆ ಹಿರಿಯ ವಿದ್ಯಾರ್ಥಿಗಳಾದ ತನ್ಯಾ, ಕೋಮಲ, ಪ್ರೇರಣಾ, ಸಮನ್ವಿತಾ ಮತ್ತು ತನಿಷ್ಕಾ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ. ನಂತರ ಬೆಂಗಳೂರಿನ ವಿದ್ವಾನ್ ಸುಬ್ಬುಕೃಷ್ಣ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಡಿಸಲಾಗಿದೆ.
ಜ.14 ರಂದು ಬೆಳಗ್ಗೆ 8.30ಕ್ಕೆ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಗಾಯನ, 10ಕ್ಕೆ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನವಿದ್ದು, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು, ಸಂಗೀತ ಶಿಕ್ಷಕರು ಭಾಗವಹಿಸಲಿದ್ದಾರೆ.
ಶಿಬಿರ ಸಮಾರೋಪ
ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ತುಮಕೂರಿನಲ್ಲಿ 15 ದಿನಗಳಕಾಲ ಮಾತೆಯರಿಗೆ ಹಮ್ಮಿಕೊಂಡಿದ್ದ ದೇವರನಾಮ ಉಚಿತ ಕಲಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಶನಿವಾರ ಬೆಳಗ್ಗೆ 11ಕ್ಕೆ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ಮಾತೆಯರು ದಾಸರ 12 ಕೃತಿಗಳನ್ನು ಏಕಕಂಠದಲ್ಲಿ ಹಾಡಿ ರಂಜಿಸಲಿದ್ದಾರೆ. ಶ್ರೀ ಉತ್ತರಾದಿ ಮಠದ ವಿದ್ವಾಂಸ ಆನಂದತೀರ್ಥ ಗುಮಾಸ್ತೆ ದಾಸರ ಕೃತಿಗಳಿಗೆ ವ್ಯಾಖ್ಯಾನ ನೀಡಲಿದ್ದಾರೆ.
ವಿವರಗಳಿಗೆ 88612 13567 ಸಂಪರ್ಕಿಸಬಹುದು.
ವಿದ್ಯಾಲಯದ ಸಾಧನೆ
ಕಳೆದ 21 ವಸಂತಗಳಿಂದ ಕರ್ನಾಟಕ ಶಾಸೀಯ ಸಂಗೀತ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಾ, ಬೆಂಗಳೂರು ಮತ್ತು ತುಮಕೂರಿನಲ್ಲಿ ಶಾಖೆಗಳನ್ನು ಹೊಂದಿರುವ 'ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ' ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಕಲಾಭಿರುಚಿ ಮೂಡಿಸಿದ ಕೀರ್ತಿಗೆ ಭಾಜನವಾಗಿದೆ. ನೂರಾರು ಮಾತೆಯರಿಗೆ ಪ್ರತಿವರ್ಷ 15 ದಿನಗಳ ಕಾಲ ಬೆಂಗಳೂರು ಮತ್ತು ತುಮಕೂರಿನಲ್ಲಿ ದೇವರನಾಮ ಉಚಿತ ತರಬೇತಿ ಶಿಬಿರದ ಮೂಲಕ ಗಾಯನ ಸಂಸ್ಕೃತಿ ಪರಿಚಯಿಸಿದೆ. ಶ್ರೀ ತ್ಯಾಗರಾಜರ ಮತ್ತು ಪುರಂದರ ದಾಸರ ಆರಾಧನೆ ಸಂದರ್ಭ ವಿವಿಧ ರಂಗದ ಗಣ್ಯರು, ಕಲಾ ಪೋಷಕರು ಮತ್ತು ವಿದ್ವಾಂಸಕರನ್ನು ಗೌರವಿಸಿದ ಕೀರ್ತಿಗೆ ಪಾತ್ರವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ