ಸಿದ್ದೇಶ್ವರ ಶ್ರೀ ಜ್ಞಾನಲೋಕದ ಮಹಾಚೇತನ: ರಾಘವೇಶ್ವರ ಶ್ರೀ

Upayuktha
0

 



ಗೋಕರ್ಣ: ಸರಳ, ಸಹಜ, ಸುಂದರ ಪ್ರವಚನದ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅಪೂರ್ವ ಸಂತ, ದಾರ್ಶನಿಕ, ತತ್ವಜ್ಞಾನಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಅಸ್ತಂಗತರಾಗಿರುವುದು ನಾಡಿಗೆ ತುಂಬಲಾರದ ನಷ್ಟ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.


ಬಹುಭಾಷಾ ಪಂಡಿತರಾಗಿದ್ದ ಅವರು ಕನ್ನಡ, ಇಂಗ್ಲಿಷ್, ಮರಾಠಿ, ಪರ್ಶಿಯನ್ ಭಾಷೆಗಳಲ್ಲಿ ಸಾಕ್ರಟಿಸ್, ಕನ್‍ಫ್ಯೂಶಿಯಸ್, ಬುದ್ಧ, ಬಸವಣ್ಣರ ತತ್ವಗಳನ್ನು ಹಾಗೂ ವೇದಗಳ ಸಾರವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಪ್ರವಚನದ ಮೂಲಕ ಜ್ಞಾನಾಮೃತವನ್ನು ಜೀವನದುದ್ದಕ್ಕೂ ಉಣಬಡಿಸಿದ್ದರು. ಆಧ್ಯಾತ್ಮ ಜೀವನದ ಜ್ಞಾನಜ್ಯೋತಿಯಾಗಿ ನಾಡಿಗೆ ಕವಿದ ಅಂಧಕಾರವನ್ನು ದೂರ ಮಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಾನ್ ಚೇತನ ಎಂದು ಬಣ್ಣಿಸಿದ್ದಾರೆ.


ಅವರ ಪ್ರಕೃತಿ ಪ್ರೀತಿ ಅಪೂರ್ವ. ಗಿಡ- ಮರ, ತರು- ಲತೆ, ಪ್ರಾಣಿ- ಪಕ್ಷಿ ಹೀಗೆ ಪ್ರಕೃತಿಯ ಸಹಜ ಆರಾಧಕರು. ಒಂದು ಹೂವನ್ನಷ್ಟೇ ದೇವರ ಮುಡಿಗೇರಿಸಿ ಪೂಜೆ ಸಲ್ಲಿಸುತ್ತಿದ್ದ ಅವರ ಬದುಕು ಕೋಟ್ಯಂತರ ಜನರ ಬದುಕಿಗೆ ದಾರಿದೀಪ. ಪ್ರವಚನವೇ ಶ್ರೀಗಳ ಸರ್ವಸ್ವ. ತಮ್ಮ ಪ್ರಚನಗಳ ಮೂಲಕ ಪರಿಪೂರ್ಣ ಬದುಕಿಗೆ ದಾರಿ ತೋರಿದ ಮಹಾನ್ ದಾರ್ಶನಿಕ. ನುಡಿದಂತೆ ನಡೆದ ಅಪೂರ್ವ ಸಂತ. ಅವರು ಧರಿಸುತ್ತಿದ್ದ ಶುಭ್ರ ಬಿಳಿಯ ವಸ್ತ್ರ ಸಿದ್ದೇಶ್ವರರ ವ್ಯಕ್ತಿತ್ವಕ್ಕೆ ಕನ್ನಡಿಯಂತಿತ್ತು. ಹಣ, ಕೀರ್ತಿ, ಸಂಪತ್ತಿನಿಂದ ದೂರ ಇದ್ದ ಅವರ ಬದುಕಿನ ರೀತಿಯೇ ಒಂದು ಅಪೂರ್ವ ಬೋಧನೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಆ ಮಹಾಚೇತನಕ್ಕೆ ನಾವು ನೀಡಬಹುದಾದ ದೊಡ್ಡ ಗೌರವ ಎಂದು ಹೇಳಿದ್ದಾರೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top