ಸಂತು, ಅವನು ಮೂರು ಸಲ ಎಸ್ಸೆಸೆಲ್ಸಿ ಫೇಲ್ ಅಲ್ವಾ ಯಾವಾಗ ಅವರ ಅಣ್ಣಂದಿರ ತರ ಆಗುತ್ತಾನೋ ದೇವರೇ ಬಲ್ಲ.
ಜನರಾಡುವ ಈ ಕುಚೋದ್ಯದ ಮಾತುಗಳು ಸಂತುವಿಗಂತೂ ಸಾಮಾನ್ಯವಾಗಿ ಬಿಟ್ಟಿತ್ತು ಆದರೂ ಈ ಎಲ್ಲಾ ಅಪಹಾಸ್ಯ ನಿಂದನೆಯನ್ನು ಮೆಟ್ಟಿ ನಿಲ್ಲಬೇಕೆಂಬ ಹಂಬಲವೂ ಇತ್ತು. ಸಂತುವಿನೊಂದಿಗೆ ಇಬ್ಬರು ಒಡಹುಟ್ಟಿದವರು. ಒಬ್ಬ ಅತೀ ಬುದ್ಧಿವಂತ ಬ್ಯಾಂಕಿನಲ್ಲಿ ನೌಕರಿಗಿಟ್ಟಿಸಿಕೊಂಡವನು ಇನ್ನೊಬ್ಬ ವಕೀಲ ವೃತ್ತಿಯನ್ನೇ ಆರಿಸಿಕೊಂಡು ದೂರದ ಪಟ್ಟಣದಲ್ಲಿ ನೆಲೆಸಿರುವವನು. ಇನ್ನು ಮನೆತನದ ಬಗ್ಗೆ ಹೇಳಬೇಕೆಂದರೆ ಸುತ್ತಮುತ್ತಲಿನ ಊರಿನಲ್ಲಿ ಸಂತುವಿನ ತಂದೆಯ ಹೆಸರು ಹೇಳಿದರೆ ಜನರು ಕೈಮುಗಿಯುತ್ತಿದ್ದರು ಅಂತಹ ಗೌರವದ ಮನೆತನ ಆದರೆ ಇಷ್ಟೆಲ್ಲಾ ಸೌಭಾಗ್ಯವಿದ್ದರೇನು ಬಂತು ಕೊನೆಯ ಮಗ ಸಂತು ಎಸ್ಸೆಸೆಲ್ಸಿಯಲ್ಲಿ ಸತತವಾಗಿ ಮೂರು ಬಾರಿ ಅನುತ್ತೀರ್ಣನಾಗಿ ತಂದೆ ಗಳಿಸಿದ್ದ ಗೌರವವನ್ನೆಲ್ಲ ಒಂದೊಮ್ಮೆಗೆ ದ್ವಂಸ ಮಾಡಿಬಿಟ್ಟಿದ್ದ.
ಎಸ್ಸೆಸೆಲ್ಸಿಯಲ್ಲಿ ಅನುತ್ತೀರ್ಣನಾಗಿದ್ದು ಬಿಟ್ಟರೆ ಸಂತು ಅಪ್ಪಟ ಅಪರಂಜಿ, ಸದಾ ಏನಾದರೂ ಒಂದು ಕೆಲಸದಲ್ಲಿ ಮಗ್ನನಾಗಿರುವವನು. ತಾನೇ ಸ್ವಂತ ದುಡಿದು ಗಳಿಸಬೇಕೆಂಬ ಹಂಬಲವಿರುವ ಯುವಕ ಸೋಮಾರಿಯಂತೂ ಅಲ್ಲ ಆದರೆ ಜನರು, ಉರು ಹೊಡೆದು ಮೂರು ಗಂಟೆಯಲ್ಲಿ ಉತ್ತರ ಪತ್ರಿಕೆಯಲ್ಲಿ ಬರೆಯುವ ಉತ್ತರದ ಆಧಾರದಲ್ಲಿ ಸೋಲು ಗೆಲುವನ್ನು ನಿರ್ಧರಿಸಿ ಬಿಟ್ಟಿರುತ್ತಾರೆ.
ಮನೆಯವರು, ಸಂಬಂಧಿಕರು, ಊರ ಜನರ ನಿಂದನೆಗಳನ್ನು ಗಣನೆಗೆ ತೆಗೆದುಕೊಳ್ಳದ ಸಂತು ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಎರಡು ವರ್ಷ ಅಲ್ಲಿ ನೌಕರನಾಗಿ ಕೆಲಸ ಮಾಡಿ ಮುಂದೆ ಶೋರೂಮ್ ಒಂದರಲ್ಲಿ ತಿಂಗಳಿಗೆ 15000 ಸಂಬಳಕ್ಕೆ ದುಡಿಯಲು ಆರಂಭಿಸಿ ಕೂಡಿಟ್ಟ ಹಣದಿಂದ ಬೈಕನ್ನು ಖರೀದಿಸುತ್ತಾನೆ. ಸಂತುವಿನ ಅದೃಷ್ಟ ಚೆನ್ನಾಗಿತ್ತೋ ಅಥವಾ ಅವರ ಪರಿಶ್ರಮದ ಫಲವೋ ಅರಿಯದು ಕೂಡಿಟ್ಟ ಹಣದಿಂದ ಸಣ್ಣಪುಟ್ಟ ಸ್ವಂತ ಕೆಲಸಗಳನ್ನು ಆರಂಭಿಸುತ್ತಾನೆ. ಲೈಟಿಂಗ್ಸ್, ಸೌಂಡ್ಸ್, ಕೆಟರಿಂಗ್ ಮುಂತಾದ ಬಿಸ್ನೆಸ್‌ಗಳನ್ನು ಆರಂಭಿಸಿ ಉನ್ನತಿಯ ಶಿಖರವನ್ನೇರಲು ಅಂಬೆಗಾಲಿಡುತ್ತಾನೆ ಹಾಗೂ ಅದರಲ್ಲಿ ಉತ್ತೀರ್ಣವು ಆಗಿ ಕೈ ಕೆಳಗೆ ದುಡಿಯಲು ಆಳುಗಳನ್ನು ಇರಿಸಿಕೊಳ್ಳುವಷ್ಟು ಮುಂದುವರೆಯುತ್ತಾನೆ. ಆದರೆ ಇವನ ಅಣ್ಣಂದಿರು ಇನ್ನೂ ಯಜಮಾನರ ಕೈ ಕೆಳಗೆ ದುಡಿಯುವ ಆಳಾಗಿಯೇ ಇರುತ್ತಾರೆ. ಮುಂದೆ ಸಂತು ಇದೇ ರೀತಿ ಮುನ್ನಡೆದು ಹೋಟೆಲ್ ಉದ್ಯಮದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಾನೆ.
ಪ್ರಖ್ಯಾತ್ ಬೆಳುವಾಯಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ