ಜ.12: ಪುತ್ತೂರು ವಿವೇಕಾನಂದ ಕ್ಯಾಂಪಸ್‍ನಲ್ಲಿ ವಿವೇಕಾನಂದ ಜಯಂತಿ ಆಚರಣೆ

Chandrashekhara Kulamarva
0

ಪುತ್ತೂರು: ಸ್ವಾಮಿ ವಿವೇಕಾನಂದ ಎನ್ನುವ ಪರಮ ಸಂತನ  ಹೆಸರಿನಲ್ಲಿ ಸಂಸ್ಕಾರವುಳ್ಳ ಹಾಗೂ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ಪ್ರತಿ ವರ್ಷವೂ ಜನವರಿ 12 ರಂದು ವಿವೇಕಾನಂದ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದೆ.  ಅಂತೆಯೇ ಈ ವರ್ಷವೂ ಕೂಡಾ 'ಹಿಂದುತ್ವ-ರಾಷ್ಟ್ರೀಯತೆ' ಎನ್ನುವ ಸಂಕಲ್ಪದೊಂದಿಗೆ ನೆಹರೂ ನಗರದ ವಿವೇಕಾನಂದ ಕ್ಯಾಂಪಸ್‍ನಲ್ಲಿ ವಿವೇಕಾನಂದ ಜಯಂತಿ ಆಚರಣೆ  ಜರುಗಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆಗಿರುವ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದು ಮುಖ್ಯ ಅತಿಥಿಯಾಗಿ ಶ್ರೀ ಉತ್ತರ ಕನ್ನಡದ ಸಂಸದರು ಹಾಗೂ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತೆಯ ಮಾಜಿ ಸಚಿವರಾದ ಅನಂತಕುಮಾರ್ ಹೆಗಡೆ ಅವರು ಭಾಗವಹಿಸಲಿದ್ದಾರೆ.


8 ಸಾವಿರ ಮಂದಿಯ ನಿರೀಕ್ಷೆ

ವಿವೇಕಾನಂದ ಕ್ಯಾಂಪಸ್ಸಿನಲ್ಲಿ ನಡೆಯಲಿರುವ ಈ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜು, ವಿವೇಕಾನಂದ ಪದವಿ ಪೂರ್ವ ಕಾಲೇಜು, ವಿವೇಕಾನಂದ ಸ್ನಾತಕೋತ್ತರ ಕಾಲೇಜು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ಸಿಬಿಎಸ್‍ಸಿ ಹಾಗೂ ವಿವೇಕಾನಂದ ಶಿಶುಮಂದಿರ, ಬಿಎಡ್, ವಿವೇಕಾನಂದ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಹೆತ್ತವರು, ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ.


ಸಭಾ ಕಾರ್ಯಕ್ರಮದ ನಂತರ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ವಿವೇಕಾನಂದ ವಿದ್ಯಾವರ್ಧಕ ಸಂಘ:

ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ವ್ಯಕ್ತಿ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕಿಂತ ಸಾಂಸ್ಥಿಕ ನೆಲೆಯಲ್ಲಿ ಸ್ಥಾಪಿಸುವುದು ಸುಲಭವೂ ಅನುಕೂಲವೂ ಎನ್ನುವ ಮೊಳಹಳ್ಳಿ ಸದಾಶಿವರಾಯರ ಆಶಯದೊಂದಿಗೆ 1915 ರಲ್ಲಿ ಹುಟ್ಟಿಕೊಂಡ ಸಂಸ್ಥೆ ಪುತ್ತೂರು ಎಜುಕೆಶನ್ ಸೊಸೈಟಿ.  ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಎಂದು 2009 ರಲ್ಲಿ ಮರು ನಾಮಕರಣಗೊಂಡು ವಿಶಾಲವಾಗಿ ಸದೃಢವಾಗಿ ಪುತ್ತೂರಿನಲ್ಲಿ ತಲೆ ಎತ್ತಿ ನಿಂತು ಸಾವಿರಾರು ವಿದ್ಯಾರ್ಥಿಗಳ ಜ್ಞಾನದದಾಹವನ್ನು ನೀಗಿಸುವ ಒಂದು ಅದ್ಭುತ ಶಿಕ್ಷಣ ಸಂಸ್ಥೆಯಾಗಿದೆ.  1965ರಲ್ಲಿ ವಿವೇಕಾನಂದ ಪದವಿ ಹಾಗೂ ಪದವಿ ಪೂರ್ವ ಕಾಲೇಜನ್ನು ಆರಂಭಿಸುವುದರೊಂದಿಗೆ ಈ ಕೇಂದ್ರ ಮತ್ತೊಮ್ಮೆ ಸಮಾಜಮುಖಕ್ಕೆ ಕಾಣಿಸಿಕೊಂಡಿತು. ನಂತರ ನಡೆದದ್ದು ಈಗ ಬಹುದೊಡ್ಡ ಚಾರಿತ್ರಿಕ ದಾಖಲೆಯೇ ಸರಿ.


ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯ ಸಾಮಾಜಿಕ ಪರಿವರ್ತನೆಯಿಂದ ಪ್ರಗತಿ ಸಾಧನೆ. ಇಲ್ಲಿನ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನೊಳಗೊಂಡ ಶುದ್ಧ, ಸರಳ ಮತ್ತು ಆಧುನಿಕ ಶಿಕ್ಷಣವನ್ನು ನೀಡುವುದಲ್ಲದೆ ವಿದ್ಯಾರ್ಥಿ ಸಮೂಹದಲ್ಲಿ ನಿಸ್ವಾರ್ಥ, ಶ್ರದ್ಧಾಪೂರ್ಣ, ರಾಷ್ಟ್ರ ಸೇವೆಯ ಚೈತನ್ಯವನ್ನು ಉದ್ದೀಪನಗೊಳಿಸುವುದಾಗಿದೆ. ಅಲ್ಲದೆ ಯುವಜನಾಂಗದಲ್ಲಿ ಶ್ರೇಷ್ಠತಮ ಶೀಲ ಸಂವರ್ಧನೆಯನ್ನು ಮೈಗೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಒಳ್ಳೆಯ ನಡತೆ, ಉತ್ತಮ ಹವ್ಯಾಸ-ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದಾಗಿದೆ. ದಿವಂಗತ ಉರಿಮಜಲು ರಾಮ ಭಟ್ಟರ ಕನಸಿನಂತೆ ವಿವೇಕಾನಂದ ವಿದ್ಯಾವರ್ಧಕ ಸಂಘವು ಪ್ರಸ್ತುತ 79 ಸಂಸ್ಥೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ವಿವೇಕಾನಂದ ಕಾಲೇಜು ಕ್ಯಾಂಪಸ್

ನೆಹರೂ ನಗರದಲ್ಲಿರುವ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಅಡಿಯಿಡುತ್ತಿದ್ದಂತೆಯೇ ಸ್ವಾಮಿ ವಿವೇಕಾನಂದರ ಧೀರೋದಾತ್ತ ಭಂಗಿಯ ದಿವ್ಯ ಮೂರ್ತಿ ಹೃನ್ಮನ ಸೆಳೆಯುತ್ತದೆ. ಮುಂದುವರಿದಂತೆ ಇದೇ ಕ್ಯಾಂಪಸ್ಸಿನಲ್ಲಿ ವಿವೇಕಾನಂದ ಪದವಿ ಕಾಲೇಜು, ವಿವೇಕಾನಂದ ಪದವಿ ಪೂರ್ವ ಕಾಲೇಜು, ವಿವೇಕಾನಂದ ಸ್ನಾತಕೋತ್ತರ ಕಾಲೇಜು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ಸಿಬಿಎಸ್‍ಸಿ ಹಾಗೂ ವಿವೇಕಾನಂದ ಶಿಶುಮಂದಿರಗಳ ವಿಹಂಗಮ ನೋಟ ಶಿಕ್ಷಣ ಪ್ರೇಮಿಗಳನ್ನು ತನ್ನತ್ತ ಕೈಬೀಸಿ ಸೆಳೆಯುತ್ತದೆ.

'ಸ್ವಾಯತ್ತ' ಮಾನ್ಯತೆ

2015 ರಲ್ಲಿ ಪದವಿ ಕಾಲೇಜು ಸುವರ್ಣ ಮಹೋತ್ಸವವನ್ನು ಅತ್ಯಂತ ಹೆಮ್ಮೆಯಿಂದ ಆಚರಿಸಿದ್ದು ಅದು ವಿವೇಕಾನಂದ ವಿದ್ಯಾವರ್ಧಕ ಸಂಘದ ಇತಿಹಾಸದಲ್ಲೊಂದು ಮಹತ್ವದ ಮೈಲಿಗಲ್ಲು. ಅನಂತರದ ದಿನಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ ಅನೇಕ ಸಾಧನೆಗಳ ಪಥದಲ್ಲಿ ಸಾಗಿದ  ವಿವೇಕಾನಂದ ಪದವಿ ಕಾಲೇಜಿಗೆ 2017 ರಲ್ಲಿ ರಾಷ್ಟ್ರೀಯ ಮೌಲ್ಯಂಕನ ಸಮಿತಿ ಭೇಟಿ ನೀಡಿದ ಸಂದರ್ಭದಲ್ಲಿ 'ಎ' ಗ್ರೇಡ್ ಮಾನ್ಯತೆಯನ್ನು ನೀಡಿತ್ತು. ಅಲ್ಲದೇ ಮುಂದಿನ ದಿನಗಳಲ್ಲಿ ಸ್ವಾಯತ್ತ ಕಾಲೇಜಾಗಿ ರೂಪುಗೊಳ್ಳಬೇಕೆಂದು ಶಿಫಾರಸ್ಸನ್ನು ಮಾಡಿತ್ತು. ಈ ಹಿನ್ನೆಲೆಯಲ್ಲಿ ಯುಜಿಸಿ ಸಂಯೋಜಿಸಿದ ತಜ್ಞರ ತಂಡವೊಂದು ಕಾಲೇಜಿಗೆ ದಿನಾಂಕ 14-5-2022 ಹಾಗೂ 15-5-2022 ರಂದು ಭೇಟಿ ನೀಡಿ ಕಾಲೇಜಿನ ಒಟ್ಟು ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ತಜ್ಞರ ಸಮಿತಿಯು ಸಕಾರಾತ್ಮಕವಾಗಿ ತಮ್ಮ ಅಭಿಪ್ರಾಯವನ್ನು ಸೂಚಿಸಿ ಸ್ವಾಯತ್ತ ಮಾನ್ಯತೆಯನ್ನು ವಿವೇಕಾನಂದ ಕಾಲೇಜಿಗೆ ನೀಡಿದೆ.


ಫಾರ್ಮಸಿ ಕೋರ್ಸಿನತ್ತ ಹೆಜ್ಜೆ

ಕಾಲಕ್ಕೆ ಅನುಗುಣವಾಗಿ ಬದಲಾಗಬೇಕಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರಸ್ತುತ 2023-24 ಶೈಕ್ಷಣಿಕ ವರ್ಷದಿಂದ ವಿವೇಕಾನಂದ ವಿದ್ಯಾವರ್ಧಕ ಸಂಘವು ತನ್ನ 80 ನೇಯ ವಿದ್ಯಾ ಸಂಸ್ಥೆಯಾಗಿ ಬಿ ಫಾರ್ಮ (ಬ್ಯಾಚುಲರ್ ಆಫ್ ಫಾರ್ಮಸಿ) ಹಾಗೂ ಡಿ ಫಾರ್ಮ (ಡಿಪ್ಲೊಮಾ ಇನ್ ಫಾರ್ಮಸಿ) ಎನ್ನುವ ಫಾರ್ಮಸಿ ಕೋರ್ಸುಗಳನ್ನು ಆರಂಭಿಸಲಿದೆ.  ಈ ಬಗ್ಗೆ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಸಮಿತಿಯು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಕೋರ್ಸನ್ನು ಆರಂಭಿಸುವುದಕ್ಕೆ ತಾತ್ಕಾಲಿಕ ಸಂಯೋಜನೆಯನ್ನು ನೀಡಿದ್ದು ಕರ್ನಾಟಕ ಸರಕಾರದ ನಿರಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಸಿದ್ದತಾ ಕೆಲಸಗಳು ಕೂಡಾ ಈಗಾಗಲೆ ಆರಂಭಗೊಂಡಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top