ಕೃತಾರ್ಥರನ್ನಾಗಿಸುವ ಪುರಂದರದಾಸರ 'ಪುರಂದರೋಪನಿಷತ್'

Upayuktha
0


ರಿದಾಸ ಸಾಹಿತ್ಯವು ಎಂದಿಗೂ ಪ್ರಸ್ತುತವಾಗಿಯೇ ಇದೆ. ಹರಿದಾಸ ಸಾಹಿತ್ಯವು, ನಮ್ಮ ಜೀವನ ಹೇಗಿರಬೇಕೆಂಬುದನ್ನು ತಿಳಿಸುವ ಪ್ರಾಯೋಗಿಕವಾದ ಸಾಹಿತ್ಯವೆಂದರೆ ತಪ್ಪಾಗಲಾರದು.ಈ ಸಾಹಿತ್ಯವು ಹರಿಭಕ್ತಿ, ಬೋಧನೆ, ಜ್ಞಾನ, ವೈರಾಗ್ಯ, ಧರ್ಮ ಇವುಗಳ ಸಂಪನ್ನತೆಯನ್ನು ಹೊಂದಿ ದಾಸ ಸಾಹಿತ್ಯದ ಪ್ರಚಾರಕರಾದ ಹರಿದಾಸರುಗಳು ಪರಮಾತ್ಮನ ಕೃಪಾಕಟಾಕ್ಷಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿರಿಸಿದ್ದವರು. ಇವರು ಸಾಧನೆಯ ಮೆಟ್ಟಿಲುಗಳನ್ನು ಕಾವ್ಯಾತ್ಮಕವಾಗಿ ಸಾಹಿತ್ಯದ ಮೂಲಕ ದೇಶದೆಲ್ಲೆಡೆಯಲ್ಲೂ ಭಿತ್ತರಿಸಿದರು. ಈ ದಾಸರುಗಳ ಪೈಕಿ ನಮ್ಮ ಪುರಂದರದಾಸರೂ ಒಬ್ಬರು. ಇವರು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂಬುದು ನಿಜ ಸಂಗತಿ. ಆದರೆ, ಇವರ ಕೃತಿಗಳಲ್ಲಿ ಅಡಗಿರುವ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮ್ಮ ಜೀವನವು ಸಾರ್ಥಕತೆಯನ್ನು ಹೊಂದಬಹುದು.


ಪುರಂದರದಾಸರ ಕೃತಿಗಳ ಸಂಖ್ಯೆ 4,75,000 ಎಂದು ಅವರ ಜೀವನ ಚರಿತ್ರೆಯಲ್ಲಿ ಕಂಡುಬರುವುದು. ಇವರು ಉಪನಿಷತ್ತಿನ ಸಾರವಾದ ಭಗವದ್ಗೀತೆಯನ್ನು ಶ್ರೀಕೃಷ್ಣನು ಅರ್ಜುನನಿಗಾಗಿ ತತ್ತ್ವಪೂರಿತವಾಗಿ, ಸತ್ತ್ವಪೂರಿತವಾಗಿ, ಗುಹ್ಯಭಾಷೆ, ಸಮಾಧಿಭಾಷೆ, ದರ್ಶನಭಾಷೆಯಲ್ಲಿ ಉಪದೇಶ ಮಾಡಿರುವರು. ಆದರೆ, ಆ ಎಲ್ಲಾ ವಿಷಯಗಳು ಸಾಮಾನ್ಯ ಜನರಿಗೆ ಸುಲಭವಾಗಿ ತಿಳಿಯದ ಕಾರಣ ಕನ್ನಡದಲ್ಲಿ ತಮ್ಮ ಪದಗಳ ಮುಖಾಂತರ ಸರಳವಾಗಿ ‘ಕನ್ನಡಿಯಲ್ಲಿ ಕರಿಯನ್ನು ತೋರಿದಂತೆ’ ತುಂಬಿಸಿಬಿಟ್ಟಿದ್ದಾರೆ ದಾಸರು. ಆದ್ದರಿಂದ ದಾಸರ ಕೃತಿಗಳನ್ನು ನೋಡಿದ ಗುರುಗಳಾದ ಶ್ರೀವ್ಯಾಸರಾಯರು “ಪುರಂದರೋಪನಿಷತ್” ಎಂದು ಕರೆದರು. ಈ ಹೆಗ್ಗಳಿಕೆಗೆ ದಾಸವರ್ಯರು ಪಾತ್ರರಾದರು.


ಪುರಂದರದಾಸರು ತಮ್ಮ ಕೆಲವು ಕೃತಿಗಳಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಗೀತೆಯ ಉಪದೇಶಕ್ಕೆ ಅನ್ವಯವಾಗಿ ಕೃತಿಗಳ ಪ್ರಾರಂಭದಲ್ಲಿ ಅಥವಾ ಮಧ್ಯದಲ್ಲಿ ಪದಗಳನ್ನು ರಚಿಸಿ ಉಲ್ಲೇಖಗೊಳಿಸಿದ್ದಾರೆ. ಗೀತೆಯನ್ನು ಅನುಸರಿಸಿ ದಾಸರ ಗೀತೆ ಹೇಗೆ ನಿರೂಪಗೊಂಡಿದೆ ಎಂಬುದನ್ನು ಚಿಂತನೆ ಮಾಡೋಣ. ಕೃಷ್ಣನು ಅರ್ಜುನನನ್ನು ನೆಪ ಮಾಡಿಕೊಂಡು ಯುದ್ಧಭೂಮಿಯಲ್ಲಿ 17 ಅಧ್ಯಾಯಗಳಿಂದ ನಮ್ಮೆಲ್ಲರಿಗೂ ನೀಡಿದ ಉಪದೇಶ. ಅದರಲ್ಲಿ ಒಂದೆರಡನ್ನು ತಿಳಿಯಲು ಪ್ರಯತ್ನಿಸೋಣ.

ತಮ್ಮ ಬಂಧು ಬಳಗದವರ ಮೇಲಿರುವ ಮೋಹದಿಂದ ಉಂಟಾದ ಮನೋದೌರ್ಬಲ್ಯದಿಂದ ಕೃಷ್ಣನನ್ನು ಕುರಿತು “ಕೃಷ್ಣ ನಾನು ಯುದ್ಧ ಮಾಡುವುದಿಲ್ಲ, ಇವರೆಲ್ಲರೂ ನನ್ನವರು, ಇವರನ್ನು ಕೊಂದು ನಾನು ಬದುಕುಳಿದರೆ ಏನು ಪ್ರಯೋಜನ? ಈ ಯುದ್ಧ ಬೇಡ ಎಂದು ವಿಷಾದ ಪಡಿಸುತ್ತಾ ನಿಷ್ಣಾತನಾದನು. ಎರಡನೇ ಅಧ್ಯಾಯದಲ್ಲಿ ಕೃಷ್ಣನ ಮಾತು “ಅರ್ಜುನ ಇದು ಸರಿಯಲ್ಲ ಅನಗತ್ಯವಾದ ಹೆದರಿಕೆ, ಮೋಹ, ದುಃಖ ಬೇಡ. ಇದು ಧರ್ಮಯುದ್ಧ. ಈ ಯುದ್ಧವನ್ನು ನೀನು ತ್ಯಜಿಸಿದರೆ, ಅಧರ್ಮವಾಗುವುದು. ಧರ್ಮವನ್ನು ಗಳಿಸು ಉಳಿಸು”

ಈ ಮಾತಿಗೆ ದಾಸರ ಅನ್ವಯ ಕೃತಿ-


ಧರ್ಮವೆಂಬ ಸಂಬಳ ಗಳಿಸಿರೋ

ಹೆಮ್ಮೆಯಿಂದ ಈ ಶರೀರ ನಂಬಬೇಡಿರು || ಪ ||


ಅರ್ಜುನಾ ಯುದ್ಧ ಬೇಡ, ಯುದ್ಧದಲ್ಲಿ ಇವರೆಲ್ಲ ಸಾಯುತ್ತಾರೆ ಎನ್ನುತ್ತೀಯಾ? ಜೀವ-ಪರಮಾತ್ಮ ಶಾಶ್ವತ, ಜಡ ಶರೀರಕ್ಕೆ ನಾಶ. ನಾಶವಾಗುವ, ನಿತ್ಯವಲ್ಲದ ಈ ಶರೀರಕ್ಕೆ ಏಕೆ ದುಃಖಪಡುವೆ? 


ನಿತ್ಯವಲ್ಲ ಈ ಶರೀರ ಅನಿತ್ಯವೆಂದು ತಿಳಿಯಿರಯ್ಯ

ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋ

ಈ ಶರೀರದ ಭ್ರಾಂತಿ ಇನ್ನೇಕೆ ಮನವೆ? || ಪ ||

ವಾಸುದೇವನ ನೆನೆ ನೆನೆದು ಸುಖಿಯಾಗು ಮನವೆ


ಮಾನವರು ಅವರವರ ವರ್ಣಕ್ಕೆ ತಕ್ಕಂತೆ ಕರ್ಮವನ್ನು ಮಾಡಬೇಕು “ಕ್ಷತ್ರಿಯರು ಯುದ್ಧದಲ್ಲಿ ಕಾದಾಡಬೇಕು ಉಳಿದರೆ ವೀರ, ಮಡಿದರೆ ವೀರ ಸ್ವರ್ಗ. ಬ್ರಾಹ್ಮಣ ವೇದವನ್ನು ಓದಬೇಕು, ವೈಶ್ಯ ವ್ಯಾಪಾರ ಮಾಡಬೇಕು, ಶೂದ್ರನಾದವನು ವ್ಯವಸಾಯ ಮಾಡಬೇಕು” ಹೀಗಿದೆ ಚತುರ್ವರ್ಣದ ಕರ್ಮಗಳು.


ವೇದವ ನೋದದ ವಿಪ್ರತಾನೇಕೆ

ಕಾದಲರಿಯತಾ ಕ್ಷತ್ರಿಯನೇಕೆ?

ಹರಿಯ ನೆನೆಯದ ನರಜನ್ಮವೇಕೆ?


ಅರ್ಜುನ! ಭೋಗಗಳಲ್ಲಿ ಆಸಕ್ತಿ ತೋರಿ ವಿವೇಕಗಳನ್ನು ಹಾಳು ಮಾಡಿಕೊಳ್ಳಬಾರದು. ಪ್ರಾರಂಭದಲ್ಲಿ ಸುಖ, ಕ್ರಮೇಣ ಅನುಭವಿಸಲಾರದಷ್ಟು ಕಹಿ. ಮಾನವನು ತನ್ನ ಹನ್ನೊಂದು ಇಂದ್ರಿಯಗಳನ್ನು ಹರಿಯಬಿಡದೆ ತೃಣೀಕರಿಸಿ, ಇಂದ್ರಿಯಗಳನ್ನು ನನ್ನತ್ತ ಹರಿಸಬೇಕು.


ವಿಷಯ ಭೋಗದ ತೃಣಕೆ ಉರಿಯಾಗಿ ಇರಬೇಕು

ನಿಷೆ ಹಗಲು ಶ್ರೀಹರಿಯ ನೆನೆ ನೆನೆದು ಸುಖಿಯಾಗಬೇಕು

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ


ಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಾಡಬೇಕು ಅರ್ಜುನ, ಅಂದರೆ ನಿಷ್ಕಾಮ ಕರ್ಮ ಮಾಡು. ಇದೇ ಶ್ರೇಷ್ಠವಾದ ಕರ್ಮ. ಫಲಕೊಡುವವನು ನಾನಿರುವಾಗ ಏಕೆ ಯೋಚಿಸುವೆ?


“ಕೊಡುವ ಕರ್ತು ಬೇರೆ ಇರುತಿರೆ

ಬಿಡು ಬಿಡು ಚಿಂತೆಯನು

ಒಡೆಯನಾಗಿ ಮೂರ್ಜಗವನು ಪಾಲಿಪ

ಬಡವರಾಧಾರಿಯು ಭಕ್ತರ ಪ್ರಿಯನು”


ತತ್ತ್ವ ಜ್ಞಾನಕ್ಕೆ ಶರಣಾಗತನಾಗಬೇಕು. ಕರ್ಮಕ್ಕಿಂತ ತತ್ತ್ವಜ್ಞಾನ ದೊಡ್ಡದು. ತತ್ತ್ವಜ್ಞಾನ ಅಂದರೆ ನಾನು ಮಾಡುವ ಸ್ನಾನ, ಉಡುವುದು, ಊಟ ಮಾಡುವುದು, ಮಾತನಾಡುವುದು ಎಲ್ಲವೂ ಭಗವಂತನ ಇಚ್ಛೆ. ಅವನೇ ಕರ್ಮ ಮಾಡಿಸುವುದು. ಎಲ್ಲವೂ ಅವನ ಪೂಜೆ ಎಂಬ ಜ್ಞಾನ, ಮುಕ್ತಿಗೆ ಸೋಪಾನ.


ಜ್ಞಾನವೊಂದೇ ಸಾಕು

ಮುಕ್ತಿಗೆ ಇನ್ನೇನು ಬೇಕು ಹುಚ್ಚು ಮನವೇ

ಪತಿಸುತರನ್ನು ಅಗಲಬೇಡ

ಯತಿಯಾಗಿ ತಿರುಗಬೇಡ


ಸ್ವಕರ್ಮವನ್ನು ಭಗವಂತನ ಸೇವೆ ಎಂದು ಮಾಡು. ನಾನು ನನ್ನದು ಎಂಬ ಅಹಂಕಾರ, ಮಮಕಾರಗಳನ್ನು ತೊರೆದು ಜೀವಿಸು.


ಸಕಲವೆಲ್ಲವೂ ಹರಿಯ ಸೇವೆಯೆನ್ನಿ

ರುಕ್ಮಿಣಿ ರಮಣ ವಿಠಲ ಇಲ್ಲದಿಲ್ಲವೆನ್ನಿ

ನುಡಿಗಳೆಲ್ಲ ನಾರಾಯಣನ ಕೀರ್ತನೆಯೆನ್ನಿ

ಕೊಡುವುದೆಲ್ಲ ಕಾಮಜನಕಗೆ ಅರ್ಪಿತವೆನ್ನಿ


ನಾನು ನನ್ನದು ಎಂಬ ನರಕದೊಳಗೆ ಬಿದ್ದು

ನೀನೇ ಗತಿ ಎಂದು ನಂಬಿದ ದಾಸನ ಮೇಲೆ

ಇನ್ನೂ ದಯಬಾರದೇ ದಾಸನ ಮೇಲೆ 


ಕೃಷ್ಣ ಗೀತೆಯೆಂಬ ಅಮೃತೋಪದೇಶ ನೀಡಿದ. ದಾಸರು ಕೂಡ ಕೃಷ್ಣನ ಉಪದೇಶವನ್ನೇ ತಮ್ಮ ನುಡಿಮುತ್ತಿನಲ್ಲಿ “ಮನವೇ, ಮರುಳೇ, ಮಾನವನೇ, ಸ್ವಾಮಿ” ಎಂದು ಅನೇಕ ಶಬ್ದಗಳಲ್ಲಿ ತಿಳಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದ್ದಾರೆ.


-ಶ್ರೀಮತಿ ಜಯಶ್ರೀಧ್ರುವಾಚಾರ್


 (ಪುರಂದರದಾಸರ ಆರಾಧನೆ ಪ್ರಯುಕ್ತ ವಿಶೇಷ ಲೇಖನ)



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter




إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top