ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಜ್ಯೋತಿಷ್ಯದ ತಳಹದಿ
ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ್ಯ.
ಈ ಶಾಸ್ತ್ರದಂತೆ, ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸುಮಾರಿಗೆ ಬರುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು.
ಈಗ ಉತ್ತರಾಯಣ ಡಿಸೆಂಬರ್ 22ಕ್ಕೇ ಆದರೂ, ಹಿಂದಿನಂತೆಯೇ ಜನವರಿ 14 ರಂದು ನಡೆಯುವ ಮಕರ ಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ. ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ.
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.
ಕರ್ನಾಟಕದ ರೈತರಿಗೆ ಸುಗ್ಗಿ ಅಥವಾ ಸುಗ್ಗಿಯ ಹಬ್ಬ. ಈ ಮಂಗಳಕರ ದಿನದಂದು ಮಕ್ಕಳು ಮತ್ತು ಹದಿಹರೆಯದವರು ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ.
ಕಬ್ಬು ಈ ಭಾಗಗಳಲ್ಲಿ ಪ್ರಧಾನ ಏಕೆಂದರೆ ಹಬ್ಬದ ಋತುವಿನ ಸುಗ್ಗಿಯ ಸೂಚಿಸುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ.
ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆಯಾಗಿದೆ. ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು "ಕಿಚ್ಚು ಹಾಯಿಸುವುದು" ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.
ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ
ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯ ಇದೆ. ಅಯ್ಯಪ್ಪ ವ್ರತಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುತ್ತಾರೆ. "ಮಕರ ವಿಳಕ್ಕು"ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ.
ಅಂತೂ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು. ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.
ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು.
ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿ ಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಎಳ್ಳುಂಡೆ ಕೊಡುವಾಗ ತಪ್ಪದೆ, "ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ" (ಅಂದರೆ ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾಡಿ) ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ! ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು.
ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು.
ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ. ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ.
ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
ಸಂಕ್ರಾಂತಿಯಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು- ಬೆಲ್ಲ ಹಂಚುವುದು. ಎಳ್ಳು- ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ. ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಎಂದು ಹೆಸರು. ಈ ಸಂಕ್ರಾಂತಿಯ ಕಾಲ, ಪುಣ್ಯ ಕಾಲವಾಗಿರುತ್ತದೆ.
ಆಯನವೆಂದರೆ ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ.
ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು.
ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.
ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ. ಎಳ್ಳು-ಚಿಗಳಿ ಸಂಕ್ರಾಂತಿ ಎಳ್ಳು, ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಅಪ್ಯಾಯಮಾನವಾಗಿರುತ್ತದೆ. ಶೀತ-ವಾತ ಜನ್ಯವಾದ ಜಡ್ಡು ಅಲಸ್ಯಗಳನ್ನು ದೂರ ಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವೆನೆ, ದಾನ-ಧರ್ಮ ಈ ಹಬ್ಬದ ವೈಶಿಷ್ಟ್ಯ. ಯುಗಾದಿಯಂದು ಬೇವು-ಬೆಲ್ಲ ಹಂಚುವಂತೆ, ಇಲ್ಲಿ ಎಳ್ಳು-ಬೆಲ್ಲ ಹಂಚುವುದು, ಮನಸ್ಸಿನ ಕಹಿ ಭಾವನೆ ಮರೆತು ಸಿಹಿ ಭಾವ ತುಂಬಿ ಅಮೃತ ಪುತ್ರರಾಗೋಣ ಎಂಬುದರ ದ್ಯೋತಕವಾಗಿದೆ. ಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡು ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.
(ಮಾಹಿತಿ ಮೂಲ ವಿಕಿಪೀಡಿಯ)
ಎಲ್ಲರಿಗೂ ಮಕರಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
- ಆರ್.ಡಿ.ರವೀಂದ್ರ.
ಶಿಕ್ಷಣ ಇಲಾಖೆ, ಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ