ಯೌವನದ ಬೇಗೆ ಬವಣೆಗಳ ಕಳೆದು
ನಾ ನಿನ್ನಿಂದ ನೀ ನನ್ನಿಂದ ಎಲ್ಲವನು
ಬಯಸಿ, ಅರಳಿ, ಕನಲಿ, ಕೆರಳಿ, ಮಣಿದು
ಒಡಲ ಬಸಿದು ಪ್ರೇಮದ ಅಮೃತವನು
ಹರಿಸಿ, ಉಣಿಸಿ, ತಣಿಸಿ, ಸುಖಿಸಿ, ಕಳೆದು...
ಜರಿದ ಘಳಿಗೆಗಳ ದುಃಖ ದುಮ್ಮಾನ ಮೀರಿ,
ನನ್ನ ಹೊರತಾಗಿ ಜಾರಿದ ನಿನ್ನೊಲವನೂ ಸೇರಿ,
ಮತ್ತೆ ನಿನ್ನನಾತು, ಎಲ್ಲವನೂ ಭರಿಸಿ ಬೆಳೆದು,
ಸುಖದಲಿ ಮಿಂದು ದುಃಖದಲೂ ತೋಯ್ದು,
ಜಗ ಮೆಚ್ಚಿಸಿದ ಬದುಕ ಸವೆಸಿ ಮುಗಿದು,
ಎಲ್ಲ ಮುಗಿದ ಸಾಫಲ್ಯ ಸಾರ್ಥಕ್ಯ
ಅನುಭಾವಿಸಿ
ಎಲ್ಲದರ ವಿರಾಗಿಯಾದರೂ, ನಿನಗೆ ಮಾತ್ರ ಅನುರಾಗಿಯೇ ನಾನು...
ಹಣ್ಣಾದ ಕೂದಲಲಿ, ಸುಕ್ಕಾದ ಸ್ಪರ್ಶದಲಿ
ನಿಡುಸುಯ್ದ ಉಸಿರಿನಲಿ, ನಡುಗಿನಪ್ಪುಗೆಯಲೂ ಪುಳಕ ನೀನು...
ನಿನ್ನೊಡನೆ ಬೆಳೆದು ಬಸವಳಿದ ಹೊನ್ನ ಘಳಿಗೆಗಳ ಮೆಲುಕಿನಲಿ, ನಿನಗೆಂದೇ ಬದುಕಿ,
ಹೀಗೇ ಒಡನಿರುವಾಗಲೊಮ್ಮೆ
ಉಸಿರ ನಿಲ್ಲಿಸಿ ಬಿಡುವಾಸೆ....
✍ ಲಕ್ಷ್ಮಿ ಟಿ ಎನ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ