ಜೀವನದ ಪ್ರತಿ ಘಟ್ಟದಲ್ಲಿ ಯೋಚನೆ ಮಾಡಿ ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸಿಗೆ ದಾರಿದೀಪವಾಗುತ್ತದೆ. ಆದರೆ ಇಂದಿನ ಹದಿಹರಯದ ಯುವ ಪೀಳಿಗೆ ಲೋಕಾನುಭವ ಇಲ್ಲದೆ, ಸ್ವಂತ ವಿವೇಚನೆಯಿಲ್ಲದೆ, ಹಿರಿಯರ ಮಾತು ಕೇಳದೆ ತಪ್ಪು ದಾರಿಯಲ್ಲಿ ನಡೆದು ನಂತರ ಪಶ್ಚಾತ್ತಾಪ ಪಡುವ ಅದೆಷ್ಟೋ ಘಟನೆಗಳು ನಮ್ಮ ಸುತ್ತಮುತ್ತ ಪ್ರತಿನಿತ್ಯ ಕಂಡುಬರುತ್ತವೆ. ಆದರೂ ಹೊರ ಪ್ರಪಂಚದ ಇಂತಹ ಘಟನೆಗಳನ್ನು ಅರಿವಿಗೆ ತಂದುಕೊಳ್ಳದೆ ಮತ್ತದೇ ದಾರಿ ತಪ್ಪುವ ಕೆಲಸಗಳನ್ನು ಮಾಡುವ ಹದಿಹರಯದ ಪೀಳಿಗೆ ಅಂತಹ ವರ್ತುಲಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ನಡೆದೇ ಇರುತ್ತದೆ. ನನ್ನ ಗಮನಕ್ಕೆ ಬಂದಿರುವ ಅಂತಹ ಒಂದು ಸನ್ನಿವೇಶವನ್ನು ಕಥೆಯ ರೂಪದಲ್ಲಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಕಷ್ಟಗಳು ಎಲ್ಲರಿಗೂ ಬರುತ್ತದೆ, ಕಷ್ಟಕ್ಕೆ ನೆರವಾಗುವ ಕೈಗಳು ಕೂಡಾ ಎಂದಿಗೂ ಇರುತ್ತವೆ. ಕಥಾನಾಯಕಿ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡವಳು. ತಾಯಿ ದರ್ಜಿಯ ಕೆಲಸ ಮಾಡುತ್ತಾ ಆಕೆಯನ್ನು ಓದಿಸುತ್ತಾಳೆ. ಆಕೆ ಪದವಿ ಶಿಕ್ಷಣ ಮಾಡುತ್ತಿದ್ದ ಸಂದರ್ಭ. ಒಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಹುಡುಗನ ಪರಿಚಯವಾಗುತ್ತದೆ. ಪರಿಚಯ ಸ್ನೇಹಕ್ಕೆ ಸೇತುವಾಗಿ, ನಂತರ ಆತ್ಮೀಯತೆ ಬೆಳೆದು ಅವರ ಮಾತುಕತೆ ಪ್ರೀತಿಗೆ ತಿರುಗಿತು. ಅವರಿಬ್ಬರೂ ನಿಜ ಜೀವನದಲ್ಲಿ ಭೇಟಿಯಾಗುವುದಿಲ್ಲ. ತಾನು ತುಂಬಾ ಐಷಾರಾಮಿ ಜೀವನ ಮಾಡುತ್ತಿರುವುದಾಗಿ ಹೇಳಿದ ಮಾತುಗಳಿಗೆ ಬಡತನದ ಬದುಕುಂಡಿದ್ದ ಈಕೆ ಮಾರು ಹೋಗುತ್ತಾಳೆ. ತಾವಿಬ್ಬರೂ ಮದುವೆಯಾದರೆ ಮುಂದಿನ ಜೀವನ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ ಎಂದು ಅವಳು ಭಾವಿಸಿ ಹೊಂಗನಸು ಕಾಣುತ್ತಾಳೆ. ಒಂದು ದಿನ ತನ್ನ ತಾಯಿಯ ಬಳಿ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಾಗ ತಾಯಿ ಬೈದು, ನಿರಾಕರಿಸುತ್ತಾಳೆ. ತಾಯಿಯ ಅಭಿಪ್ರಾಯ ಈ ರೀತಿ ಇದೆ ಎಂದು ಹೇಳಿದಾಗ, ಯಾರಿಗೂ ತಿಳಿಯದಂತೆ ಬಂದುಬಿಡು ಎಂದು ಆತ ಮದುವೆಯಾಗುವ ಭರವಸೆ ನೀಡುತ್ತಾನೆ. ಅಂತೆಯೇ ಇಬ್ಬರೂ ಮದುವೆಯಾಗುತ್ತಾರೆ.
ಈ ಕಡೆ ಅವಳನ್ನು ಕಾಯುತ್ತಿದ್ದ ತಾಯಿ ಯಾವುದೇ ಮಾಹಿತಿ ಸಿಗದಾದಾಗ ಪೊಲೀಸರಿಗೆ ದೂರು ನೀಡುತ್ತಾಳೆ. ಎರಡು ದಿನಗಳ ನಂತರ ಅವಳು ಮದುವೆಯಾದ ಬಗ್ಗೆ ತಿಳಿಯುತ್ತದೆ. ದಿಗ್ಭ್ರಮೆಗೊಂಡ ತಾಯಿಗೆ ಜೀವನದ ಎಲ್ಲಾ ದಾರಿಗಳು ಮುಚ್ಚಿದಂತೆ ಭಾಸವಾಗುತ್ತದೆ.
ಮದುವೆಯ ನಂತರ ಆಕೆಗೆ ತಾನು ಮೋಸಹೋದ ಅರಿವಾಗುತ್ತದೆ. ಅವನಿಗೆ ಉದ್ಯೋಗವೂ ಇಲ್ಲ ಎಂದು ತಿಳಿದು ಕಕ್ಕಾಬಿಕ್ಕಿಯಾಗುತ್ತಾಳೆ. ಇನ್ನೊಂದು ಕಡೆ ಅವಳ ತಾಯಿಯ ಸಂಬಂಧವನ್ನು ಕಳೆದುಕೊಂಡಿರುತ್ತಾಳೆ. ಕೆಲವು ದಿನಗಳಲ್ಲಿ ಒಂದು ಸತ್ಯ ತಿಳಿಯುತ್ತದೆ. ಕಥಾ ನಾಯಕಿ ಆ ತಾಯಿಯ ಸ್ವಂತ ಮಗಳು ಆಗಿರದೇ ದತ್ತು ಪುತ್ರಿ ಆಗಿರುತ್ತಾಳೆ. ತಾಯಿಗೆ ಅನ್ಯಾಯ ಮಾಡಿರುವುದಾಗಿ ಬೇಸರವಾಗುತ್ತದೆ. ಆದರೆ ಕಾಲ ಮಿಂಚಿಹೋದ ಕಾರಣ ಏನು ಮಾಡಲು ಸಾಧ್ಯವಾಗದೆ ಅಸಹಾಯಕಳಾಗುತ್ತಾಳೆ. ಭೋಗದ ಸಂಪತ್ತಿನಲ್ಲಿ ತೇಲಬೇಕೆಂಬ ಅವಳ ಕನಸು ನುಚ್ಚುನೂರಾಗುತ್ತದೆ.
- ದೇವಿಶ್ರೀ ಶಂಕರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ