ಪರಶುರಾಮ ಥೀಮ್ ಪಾರ್ಕ್ ವಾಸ್ತುವಿನ್ಯಾಸಕಾರ ಸಂಪ್ರೀತ್ ರಾವ್

Upayuktha
0



ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಬೈಲೂರಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು ಐನೂರು ಮೀಟರ್ ಎತ್ತರ ಇರುವ ಬೃಹತ್ ಬಂಡೆಯ ಮೇಲೆ 33 ಅಡಿ ಎತ್ತರದ ಶ್ರೀ ಪರಶುರಾಮನ 15 ಟನ್ ತೂಕದ ಕಂಚಿನ ಪ್ರತಿಮೆ ಸಹಿತ ಥೀಮ್ ಪಾರ್ಕ್ ಎರಡು ದಿನಗಳ ಹಿಂದೆಯಷ್ಟೇ ಅನಾವರಣಗೊಂಡಿದೆ. ನಾಡಿಗೆ ನಾಡೇ  ತಿರುಗಿ ನೋಡುವಷ್ಟು ಆಕರ್ಷಕವಾಗಿ ಅತ್ಯಲ್ಪ ಅವಧಿಯಲ್ಲಿ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಪ್ರವಾಸೋದ್ಯಮ‌ ಇಲಾಖೆಗಳ ಸಹಯೋಗದಲ್ಲಿ ನಿರ್ಮಾಣಗೊಂಡಿರುವುದು ಕರಾವಳಿಗರಿಗೆ ಅತ್ಯಂತ ಹೆಮ್ಮೆಯ ಸಂಗತಿ.


ಈ ಥೀಮ್ ಪಾರ್ಕ್ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾಗಲಿದ್ದು, ಬೆಟ್ಟಗುಡ್ಡಗಳಿಂದ ಆವೃತ್ತವಾದ ಇದರ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪಾಳುಬಿದ್ದಿದ್ದ ಗುಡ್ಡವೊಂದು ಇದೀಗ ಜನರಿಂದ ತುಂಬಿತುಳುಕುತ್ತಿದೆ. ಕರಾವಳಿಯ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡುವ ಪರಶುರಾಮ ಥೀಮ್ ಪಾರ್ಕ್ ಎಂಬ ಅದ್ಭುತ ಕಲ್ಪನೆಯೊಂದು ಸಾಕಾರಗೊಳ್ಳಲು ಕಾರಣಕರ್ತರಾದವರು ಕಾರ್ಕಳದ ಶಾಸಕ, ಇಂಧನ ಮತ್ತು ಕನ್ನಡ - ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು. ಅತ್ಯಂತ ಸುಂದರವಾಗಿ ನಿರ್ಮಿಸಿದ ನಿರ್ಮಿತಿ ಸಂಸ್ಥೆ ಮತ್ತು ಅದರ ಯೋಜನಾ ನಿರ್ದೇಶಕ ಅರುಣ್ ಮತ್ತವರ ತಂಡ ಇದರ ನಿರ್ಮಾಣದ ಹೊಣೆ ಹೊತ್ತು ಜವಾಬ್ದಾರಿಯಿಂದ ನಿಭಾಯಿಸಿದೆ.


ವಾಸ್ತುವಿನ್ಯಾಸಕಾರ ಸಂಪ್ರೀತ್ ರಾವ್ : ಸಾಂಸ್ಕೃತಿಕ ಸಂವೇದನೆಯುಳ್ಳವರಿಂದ ಮಾತ್ರ ಇಂತಹ ಸುಂದರ ವಾಸ್ತು ವಿನ್ಯಾಸಗಳು ಮೂಡಿಬರಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ ಅತ್ಯಾಕರ್ಷಕವಾಗಿ ವಾಸ್ತು ವಿನ್ಯಾಸ ಸಿದ್ಧಗೊಳಿಸಿದ ಹೆಬ್ರಿಯ ಯುವ ಆರ್ಕಿಟೆಕ್ಟ್  ಸಂಪ್ರೀತ್ ರಾವ್ ಅವರು. ಕರಾವಳಿಯದ್ದೇ ಎನ್ನಬಹುದಾದ ವಾಸ್ತು ಪರಿಕಲ್ಪನೆಗಳಿಗೆ ಒಂದಷ್ಟು ಆಧುನಿಕ‌ ಸ್ಪರ್ಶವನ್ನು ನೀಡಿ ಇತ್ತೀಚಿನ ವರ್ಷಗಳಲ್ಲಿ ಅನೇಕ ಕಟ್ಟಡಗಳ ವಾಸ್ತುವಿನ್ಯಾಸಗೊಳಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ನಾಡಿನ ಗಮನ ಸೆಳೆಯುತ್ತಿದ್ದಾರೆ. ನೆರಳು ಡಿಸೈನ್ ಸ್ಟುಡಿಯೋ ಎನ್ನುವ ಸಂಸ್ಥೆಯನ್ನು ನಡೆಸುತ್ತಿರುವ ಸಂಪ್ರೀತ್, ನಿರ್ಮಿತಿ ಸಂಸ್ಥೆಯು ನಿರ್ಮಿಸುವ ಅನೇಕ  ನಿರ್ಮಾಣಗಳಿಗೆ ವಿನ್ಯಾಸವನ್ನು ಸದ್ದಿಲ್ಲದೇ ಸಿದ್ಧಪಡಿಸುತ್ತಿದ್ದಾರೆ.


ಪಾರ್ಕ್ ನಲ್ಲಿ ನಿರ್ಮಿಸಲಾದ ಅದ್ಭುತವಾದ ಪರಶುರಾಮ ಜೀವನ ವೃತ್ತಾಂತದ ಸುಂದರ ಉಬ್ಬುಚಿತ್ರಗಳ ರಚನೆಯಲ್ಲಿ ಕಲಾವಿದ ಪುರುಷೋತ್ತಮ ಅಡ್ವೆಯವರ ಕೈಚಳಕ ಮತ್ತು ಕಲಾಕೌಶಲ್ಯ ಶ್ಲಾಘನೀಯವಾದುದು. ‌ಇದಲ್ಲದೆ, ಥೀಮ್ ಪಾರ್ಕ್ ನಲ್ಲಿ ಬಯಲು ರಂಗ ಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರವನ್ನೂ ನಿರ್ಮಿಸಲಾಗಿದೆ. 


 - ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top