ಒಗ್ಗಟ್ಟಿನ ಕೆಲಸದಿಂದ ವಿವಿ ಘನತೆ ಹೆಚ್ಚುತ್ತದೆ, ಆತ್ಮತೃಪ್ತಿ ಸಿಗುತ್ತದೆ: ಪ್ರೊ. ಪಿ. ಎಸ್ ಯಡಪಡಿತ್ತಾಯ
ಮಂಗಳೂರು: ಸಮಾನ ಮನಸ್ಕರಾಗಿ ಪ್ರೀತಿ, ಬದ್ಧತೆ, ಪ್ರಾಮಾಣಿಕತೆಯಿಂದ ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಕೆಲಸ ಯಶಸ್ವಿಯಾಗುತ್ತದೆ. ಇಂತಹ ಕೆಲಸಗಳು ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ನಮಗೂ ಆತ್ಮತೃಪ್ತಿ ನೀಡುತ್ತವೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬುಧವಾರ ವಿಶ್ವವಿದ್ಯಾನಿಲಯದ ವತಿಯಿಂದ ನಿರ್ಮಿಸಲಾದ ಕೊಂಕಣಿ ಅಧ್ಯಯನ ಪೀಠ, ಬ್ಯಾರಿ ಅಧ್ಯಯನ ಪೀಠ ಹಾಗೂ ಯುವ ರೆಡ್ ಕ್ರಾಸ್ ಘಟಕದ ನೂತನ ಕಛೇರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ ಮಾತನಾಡಿ, ರಾಷ್ಟ್ರೀಯ ಭಾಷೆಯ ಸ್ಥಾನಮಾನ ಪಡೆದಿರುವ ಕೊಂಕಣಿಯ ಬೆಳವಣಿಗೆಗೆ ಕೊಂಕಣಿ ಅಧ್ಯಯನ ಪೀಠ ನಡೆಸುತ್ತಿರುವ ಕೆಲಸಗಳಿಗೆ ಹೊಸ ಕಛೇರಿ ಸ್ಥಾಪನೆ ಸ್ಫೂರ್ತಿ ನೀಡಿದೆ, ಎಂದು ಕೊಂಕಣಿ ಭಾಷಿಗರ ಪರವಾಗಿ ಕುಲಪತಿಗಳಿಗೆ ಧನ್ಯವಾದ ಸಮರ್ಪಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ ಎ ಮಹಮ್ಮದ್ ಹನೀಫ್ ಮಾತನಾಡಿ, ಮೊದಲು ಎಲ್ಲಾ ಸಮುದಾಯದವರೂ ಬ್ಯಾರಿ ಭಾಷೆ ಮಾತನಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮನಸ್ಸುಗಳ ನಡುವಿನ ಕಂದಕದ ಪರಿಣಾಮ ಭಾಷೆಯ ಬಳಕೆಯ ಮೇಲೂ ಪರಿಣಾಮ ಬೀರಿದೆ. ಕುಲಪತಿ ಕರಾವಳಿಯ ಎಲ್ಲಾ ಭಾಷಿಗರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗುತ್ತಿರುವುದು ಅಭಿನಂದನಾರ್ಹ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯಂತೆ, ಮಾನವೀಯತೆ ಮತ್ತು ರಾಷ್ಟ್ರೀಯತೆಯೂ ನಮ್ಮ ಆದ್ಯತೆ. ರೆಡ್ ಕ್ರಾಸ್ ಹಲವು ವರ್ಷಗಳಿಂದ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಇನ್ನಷ್ಟು ಕಾರ್ಯೋನ್ಮುಖವಾಗಲು ನೂತನ ಕಛೇರಿ ನೆರವಾಗಲಿದೆ ಎಂದರು.
ನೂತನ ಕಚೇರಿ ಸ್ಥಾಪನೆಗೆ ಕಾರಣಕರ್ತರಾದ ಕುಲಪತಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಮಾನ್ಯ ಕುಲಪತಿಯವರ ಆಡಳಿತಾವಧಿಯಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಲಾಗಿದೆ. ಮಂಗಳೂರು ವಿವಿಯ ಅಧ್ಯಯನ ಪೀಠಗಳಲ್ಲಿ ಮೂರು ನಮ್ಮ ಕಾಲೇಜಿನಲ್ಲಿ ಇರುವುದು ಸಂತೋಷದ ವಿಚಾರ ಎಂದು ಹೇಳಿದರು.
ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಲಕ್ಷ್ಮಿ ದೇವಿ ಎಲ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ ಎ ನಂದಗೋಪಾಲ ಶೆಣೈ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್ ಎಂ. ರಶೀದ್, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿ. ಕುಸುಮಾಧರ, ಮಂಗಳೂರು ವಿವಿಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಮೊದಲಾದವರು ಉಪಸ್ಥಿತರಿದ್ದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರೆ, ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದಿಕ್ ಧನ್ಯವಾದ ಸಮರ್ಪಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ಉಪನ್ಯಾಸಕಿ ಶಮಾ ಐಎನ್‌ಎಂ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ