ಉಡುಪಿ: ಖ್ಯಾತ ಗಾಯಕರಾದ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ (74 ವರ್ಷ) ಇಂದು (24- 01- 2023) ಬ್ರಹ್ಮಾವರದ ಸ್ವಗೃಹದಲ್ಲಿ ನಿಧನರಾದರು. ಹಂಗಾರಕಟ್ಟೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ, ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ನಾಲ್ಕು ವರ್ಷವಿದ್ದು ಮುಂದೆ ಮೂರು ದಶಕಗಳ ಕಾಲ ಬ್ರಹ್ಮಾವರದ ನಿರ್ಮಲ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದರು.
ಅಜಪುರ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಅಜಪುರ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿವಿಧ ಸಂಘಟನೆಗಳ ನಾಟಕಗಳಲ್ಲಿ, ಮುಖ್ಯವಾಗಿ ಪ್ರೊ. ಉದ್ಯಾವರ ಮಾಧವ ಆಚಾರ್ಯರ ನೃತ್ಯರೂಪಕಗಳಲ್ಲಿ ಹಿನ್ನಲೆ ಗಾಯಕರಾಗಿ ರಂಗ ಪ್ರಸ್ತುತಿಯ ಯಶಸ್ಸಿಗೆ ಕಾರಣೀಕರ್ತರಾಗಿದ್ದರು. ತಮ್ಮ ಸಿರಿಕಂಠದ ಹಾಡುಗಾರಿಕೆಯಿಂದ ಕನ್ನಡದ ಹಲವು ಭಾವಗೀತೆಗಳನ್ನು ಸಹೃದಯರ ಮನಕ್ಕೆ ಮುದ ನೀಡುವಂತೆ ಹಾಡಿ ಅಪಾರ ಯಶಸ್ಸುಗಳಿಸಿದ್ದರು.
ಗಮಕವಾಚನದಲ್ಲೂ ಸಿದ್ಧಿ-ಪ್ರಸಿದ್ಧಿ ಪಡೆದಿದ್ದರು. ಬ್ರಹ್ಮಾವರ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉತ್ತಮ ಶಿಕ್ಷಕರಾಗಿದ್ದ ಇವರಿಗೆ ಅರ್ಹವಾಗಿ ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರಾಪ್ತಿಯಾಗಿತ್ತು. ಪತ್ನಿ, ಈರ್ವರು ಪುತ್ರಿಯರು ಹಾಗೂ ಅಪಾರ ಶಿಷ್ಯವೃಂದವನ್ನು ಹೊಂದಿದ್ದರು. ಇವರ ಅಂತ್ಯ ಸಂಸ್ಕಾರ ನಾಳೆ (25 -01- 2023) ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ