ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ವಾಸ್ತವ್ಯಕ್ಕೆ ಹವ್ಯಕ ಸಮಾಜದ ವತಿಯಿಂದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸೇವಾಸೌಧ ಸಮರ್ಪಣೆ ಸಮಾರಂಭದ ಅಂಗವಾಗಿ ಶ್ರೀಕರಾರ್ಚಿತ ಶ್ರೀ ರಾಮದೇವರ ಸನ್ನಿಧಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಜನವರಿ 26 ರಂದು ಅಭೂತಪೂರ್ವವಾಗಿ ನಡೆಯಿತು. ಶ್ರೀರಾಮದೇವರ ಪ್ರೀತ್ಯರ್ಥ ರಾಮ ಮೂಲಮಂತ್ರ ಹವನ, ಶ್ರೀರಾಮದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಮತ್ತು ನಾಗದೇವರ ಪ್ರತಿಷ್ಠೆ ನಡೆಯಿತು.
27 ರಂದು ಶ್ರೀ ಚಂದ್ರಮೌಳೀಶ್ವರ ದೇವರಿಗೆ ಅಷ್ಟೋತ್ತರ ಶತ ವಿಶೇಷ ದ್ರವ್ಯಗಳಿಂದ ಅಭಿಷೇಕ ಸೇವೆ ಮತ್ತು ಸಾಂಪ್ರದಾಯಿಕ ಪಾಕ ವೈಭವ ನಡೆಯಲಿದೆ. ಹವ್ಯಕ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ವಿಶಿಷ್ಟ ಭಕ್ಷ್ಯ ಭೋಜ್ಯಗಳ ಪ್ರದರ್ಶನ ಮತ್ತು ಮಾರಾಟದ ಆಹಾರೋತ್ಸವ ಗುರುವಾರ ಆಯೋಜಿಸಲಾಗಿದೆ.
28 ರಂದು ಶ್ರೀ ರಾಜರಾಜೇಶ್ವರಿ ದೇವರ ಅನುಗ್ರಹಕ್ಕಾಗಿ ಶ್ರೀಚಕ್ರ ಪೂಜೆ, ಸೇವಾಸೌಧ ಸಮರ್ಪಣೆ ಗಣ್ಯಾತಿಗಳಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣವನ್ನು ಗುರುಕುಲ ಪದ್ಧತಿಯಲ್ಲಿ ಆರಂಭವಾಗಿರುವ ದೇಶದ ಏಕೈಕ ಸಂಸ್ಥೆ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸಂಕಲ್ಪಿಸಿ ತಮ್ಮ ಕರ್ತೃತ್ವ ಶಕ್ತಿಯಿಂದ ಅದನ್ನು ಸಾಕಾರಗೊಳಿಸಿದ ವಿವಿವಿ ಕುಲಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ವಸತಿ ಹಾಗೂ ಶ್ರೀಕರಾರ್ಚಿತ ಪೂಜಾ ಕೈಂಕರ್ಯಕ್ಕಾಗಿ ನಿರ್ಮಾಣಗೊಂಡ ಭವ್ಯ ಮಂದಿರ 'ಸೇವಾಸೌಧ'ವನ್ನು ಶ್ರೀಗಳಿಗೆ ಸಮರ್ಪಿಸಲಾಗುತ್ತದೆ.
ಶ್ರೀಮಠದ ಸೇವಾಬಿಂದುಗಳ ಸಮರ್ಪಣೆಯಲ್ಲಿ ನಿರ್ಮಾಣಗೊಂಡ ಭಾರತೀಯ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಕಂಗೊಳಿಸುವ ಆವರಣವನ್ನು ಆಮೂಲಾಗ್ರವಾಗಿ ಅಲಂಕರಿಸಲಿರುವ ಭಾರತೀಯ ಮೂಲದ ಗಿಡ-ಮರ-ಬಳ್ಳಿಗಳಿಂದ ಶೋಭಿಸುವ ಈ ಭವ್ಯ ಮಂದಿರವನ್ನು ಸಮರ್ಪಿಸುವ ಸಮಾರಂಭದಲ್ಲಿ ರಾಜ್ಯ ಮಟ್ಟದ ಅನೇಕ ನಾಯಕರು ಹಾಗೂ ಆಧ್ಯಾತ್ಮಕ ಸಾಧಕರು ಭಾಗವಹಿಸುವರು. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ಕಾರ್ಯೋನ್ಮುಖವಾಗಿವೆ. ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಸಿಮೆಂಟ್, ಇಟ್ಟಿಗೆ ಬಳಸದೇ ವಿಶಿಷ್ಟವಾಗಿ ನಿರ್ಮಿಸಿದ ಈ ಭವ್ಯ ಭವನದ ಸಮರ್ಪಣಾ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ