ವಿವಿ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ
ಮಂಗಳೂರು : ನಾವು ನಮ್ಮ ಮಕ್ಕಳಿಗೆ ದೇವರು, ಧರ್ಮದ ಬಗ್ಗೆ ಹೇಳುತ್ತೇವೆಯೇ ಹೊರತು ಸಂವಿಧಾನದ ಬಗ್ಗೆಯಲ್ಲ. ಇದರಿಂದಾಗಿ ಅವರಿಗೆ ಸಂವಿಧಾನ ಹೊರಗಿನ ವಸ್ತುವಾಗಿ ಬಿಡುತ್ತದೆ. ಯಾವುದೇ ಧಾರ್ಮಿಕ ಗ್ರಂಥಕ್ಕಿಂತ ಸಂವಿಧಾನ ಶ್ರೇಷ್ಠ ಎಂದು ಅವರು ಅರ್ಥ ಮಾಡಿಕೊಳ್ಳುವುದೇ ಇಲ್ಲ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿಎಲ್ ಧರ್ಮ ವಿಷಾದ ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗುರುವಾರ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಎನ್ ಸಿ ಸಿ ಕೆಡೆಟ್‌ಗಳಿಂದ ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಆಂತರಿಕ ಸಮಸ್ಯೆಗಳಿಗೆ ಸಂವಿಧಾನದ ರಾಜ್ಯ ನಿರ್ದೇಶಕತತ್ವಗಳು, ಮೂಲಭೂತ ಕರ್ತವ್ಯಗಳಿಂದ ಪರಿಹಾರ ಸಾಧ್ಯ. ಆದರೆ ʼನಾವುʼಎಂಬ ಶಬ್ದದಿಂದ ಆರಂಭವಾಗುವ ಪವಿತ್ರ ಸಂವಿಧಾನವನ್ನು ಅಹಂ (ego) ಇರುವ, ಸ್ವ-ಕೇಂದ್ರಿತ ವ್ಯಕ್ತಿ ಅರ್ಥ ಮಾಡಿಕೊಳ್ಳಲಾರ. ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ಬಳಿಕವೂ ಸಂವಿಧಾನದ ಮಹತ್ವ ಅರ್ಥ ಮಾಡಿಕೊಳ್ಳದಿದ್ದರೆ, ನಾವು ವಿನಾಶದತ್ತ ಮುಖ ಮಾಡಿದ್ದೇವೆ ಎಂದರ್ಥ, ಎಂದರು.
“ಜಾತಿ, ಮತ, ಧಾರ್ಮಿಕ ಆಚರಣೆಗಳು ನಮ್ಮ ಖಾಸಗಿ ಬದುಕಿನ ಭಾಗವಾಗಿರಬೇಕೇ ಹೊರತು ಅದು ಸಾರ್ವಜನಿಕವಲ್ಲ. ನಾವು ಧಾರ್ಮಿಕ ನಂಬಿಕೆಗಳನ್ನು ಬೀದಿಗೆ ತರುತ್ತಿದ್ದೇವೆ. ಧಾರ್ಮಿಕ ಕೇಂದ್ರಗಳು ಸಂವಿಧಾನ ಬಿಟ್ಟು ಮೀಸಲಾತಿಗಾಗಿ ಹೋರಾಡುತ್ತಿವೆ. ನಮ್ಮ ಮತ್ತು ಮುಂದಿನ ಜನಾಂಗದ ಬದುಕು ನಿಂತಿರುವುದು ಸಂವಿಧಾನದ ಮೇಲೆ. ಅದಿಲ್ಲದಿದ್ದರೆ ನಾವೂ ಆಹಾರಕ್ಕಾಗಿ ಹೋರಾಡುವ ಪರಿಸ್ಥಿತಿ ಬರಬಹುದು,” ಎಂದು ಅವರು ಎಚ್ಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯರೈ ಮಾತನಾಡಿ, ಸಾರ್ವಜನಿಕ ಬದುಕು, ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ನಾವು ಇನ್ನಷ್ಟು ಯೋಚಿಸಬೇಕಾಗಿದೆ, ಎಂದರು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ ಎ, ಎನ್ ಸಿ ಸಿ ಭೂದಳದ ಡಾ. ಜಯರಾಜ್, ಕ್ರೀಡಾ ವಿಭಾಗದ ಡಾ. ಕೇಶವಮೂರ್ತಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಗಾಯತ್ರಿ ಎನ್ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ಅತಿಥಿಗಳನ್ನು ಸ್ವಾಗತಿಸಿದರೆ, ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಸುರೇಶ್ ಧನ್ಯವಾದ ಸಮರ್ಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಡಾ. ಆಶಾಲತ ಕಾರ್ಯಕ್ರಮ ನಿರೂಪಿಸಿದರು.
ʼಎನ್ಇಪಿದೇಶಕ್ಕೆಅಗತ್ಯʼ
ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ – 2020 ಅನ್ನು ಜಾರಿಗೆ ತಂದು ಸಾವೇನೋ ಸಾಧಿಸಿದ್ದೇವೆ ಎಂದಲ್ಲ. ಆದರೆ ಜಾತಿ, ಧರ್ಮ ಬಿಟ್ಟು ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಉದ್ದೇಶ ಪದ್ಧತಿಯ ಹಿಂದಿದೆ. ಈಗ ನಾವು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದೇವೆ, ಖಾಸಗಿ ಶಾಲಾ ಕಾಲೇಜುಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಪ್ರತಿ ಶಾಲೆ-ಕಾಲೇಜಿನಿಂದ ಹೊರಬರುವ ವಿದ್ಯಾರ್ಥಿ ಅಲ್ಲಿನ ಪ್ರಾರ್ಥನೆ ಆಚರಣೆಗಳಿಗೆ ತಕ್ಕಂತೆ ವಿಭಿನ್ನವಾಗಿರುತ್ತಾನೆ. ಇಂತಹ ವಿದ್ಯಾರ್ಥಿಗಳಿಂದ ನಾವು ರಾಷ್ಟ್ರ ರಕ್ಷಣೆ ನಿರೀಕ್ಷಿಸುವುದು ಸಾಧ್ಯವೇ? , ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ