ಹಾವೇರಿಯಲ್ಲಿ ನಡೆದ 86 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಮನವಿ ಮಾಡಿದರು.
ಗೋವಾದಲ್ಲಿ ಕೆಲಸ ನಿರ್ವಹಿಸುವ ಕರ್ನಾಟಕ ಕೂಲಿ ಕಾರ್ಮಿಕರ ಬಳಿ ಗೋವಾ ಸರ್ಕಾರದ ಅಗತ್ಯ ದಾಖಲಾತಿ ಇಲ್ಲದ ಕಾರಣ ಇವರಿಗೆ ಅನಾರೋಗ್ಯದ ಸಂದರ್ಭದಲ್ಲಿಯೂ ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉಚಿತ ವೈದ್ಯಕೀಯ ಸೌಲಭ್ಯ ಲಭಿಸುತ್ತಿಲ್ಲ. ಇದರಿಂದಾಗಿ ಉದರ ನಿರ್ವಹಣೆಗಾಗಿ ಗೋವಾಕ್ಕೆ ಬಂದಿರುವ ಈ ಕೂಲಿ ಕಾರ್ಮಿಕರು ಅನಾರೋಗ್ಯದಂತಹ ತುರ್ತು ಪರಿಸ್ಥಿತಿಯಲ್ಲಿಯೂ ಹೆಚ್ಚಿನ ಹಣ ತೆತ್ತು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಗೋವಾ ಸರ್ಕಾರದ ಎಲ್ಲ ಯೋಜನೆಗಳ ಲಾಭ ಪಡೆದುಕೊಳ್ಳಲು ಗೋವಾದಲ್ಲಿ 15 ವರ್ಷ ವಾಸ್ತವ್ಯದ ಅಧೀಕೃತ ದಾಖಲಾತಿ ಹೊಂದಿದ ಪ್ರಮಾಣಪತ್ರದ ಅಗತ್ಯವಿದೆ.
ಕೆಲಸಕ್ಕಾಗಿ ಗೋವಾಕ್ಕೆ ಬಂದು ಹೋಗುವ ಈ ಕೂಲಿ ಕಾರ್ಮಿಕರ ಬಳಿ ಈ ದಾಖಲಾತಿ ಇಲ್ಲದ ಕಾರಣ ಗೋವಾ ಸರ್ಕಾರದ ಯಾವುದೇ ಯೋಜನೆಯ ಲಾಭ ಸಿಗುತ್ತಿಲ್ಲ. ಇದರಿಂದಾಗಿ ಗೋವಾದಲ್ಲಿ ಕೆಲಸ ನಿರ್ವಹಿಸುವ ಕರ್ನಾಟಕ ಮೂಲದ ಕೂಲಿ ಕಾರ್ಮಿಕರಿಗೆ ಕರ್ನಾಟಕ ಸರ್ಕಾರದಿಂದ ಲಭಿಸುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿ ವಿನಂತಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯಾಧ್ಯಕ್ಷ ಡಾ,ಸಿದ್ಧಣ್ಣ ಮೇಟಿ ರವರು ಕರ್ನಾಟಕ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ರವರ ಬಳಿ ಮನವಿ ಮಾಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ