ಪಣಜಿ: ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ಮೂಲಕ ಗೋವಾದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಒಗ್ಗಟ್ಟಾಗುತ್ತಿರುವುದು ಹೆಮ್ಮೆಯ ವಿಷಯ. ಗೋವಾದಲ್ಲಿರುವ ಕನ್ನಡಿಗರೆಲ್ಲರೂ ಒಗ್ಗಟ್ಟಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ದಣ್ಣ ಮೇಟಿ ಹೇಳಿದರು.
ಗೋವಾದ ಮಡಗಾಂವನಲ್ಲಿ ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಧುರ ಮಧುರವೀ ಮಂಜುಳಗಾನ ಇದರ ಆಡಿಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದ ಮೂಲಕ ಕೇವಲ ಉತ್ತರ ಕರ್ನಾಟಕದವರು ಮಾತ್ರವಲ್ಲದೆಯೇ ಕರ್ನಾಟಕದ ಎಲ್ಲ ಭಾಗಗಳಿಂದ ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ಈ ವೇದಿಕೆಯಲ್ಲಿ ಒಂದಾಗಿದ್ದೇವೆ. ಕನ್ನಡಿಗರೆಲ್ಲರೂ ನಾವು ಒಂದೇ ಸೂರಿನ ಅಡಿಯಲ್ಲಿ ಬರಬೇಕು. ನಾವೆಲ್ಲರೂ ಸರಿಸಮಾನವಾಗಿ ಮುನ್ನಡೆಯಬೇಕು. ಗೋವಾದ ಜನರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಇಲ್ಲಿ ಉದ್ಯೋಗ ವ್ಯವಹಾರಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಬಂಟ್ಸ್ ಸಂಘದ ಅಧ್ಯಕ್ಷ ಶಶಿಧರ ನಾಯಕ ಮಾತನಾಡಿ, ಸಂಗೀತವು ಮನುಷ್ಯನ ಜೀವನದಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಸಂಗೀತದ ಅಭಿರುಚಿಯಿದ್ದವರು ಯಾವಾಗಲೂ ಸಂತೋಷವಾಗಿರುತ್ತಾರೆ. ಸಂಗೀತಕ್ಕೆ ವಿವಿಧ ರೋಗಗಳನ್ನು ವಾಸಿ ಮಾಡುವ ಶಕ್ತಿಯಿದೆ ಎಂದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಲಕ್ಷ್ಮೀ ಎಂಪಾಯರ್ ಹೊಟೇಲ್ ಮಾಲೀಕರಾದ ಸದಾಶಿವ ಶೆಟ್ಟಿ ದೀಪ ಬೆಳಗಿರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕಲಂಗುಟ್ ಕನ್ನಡ ಸಂಘದ ರಾಘವ ಶೆಟ್ಟಿ, ಹೊಟೇಲ್ ಉದ್ಯಮಿ ನವೀನ್ ಶೆಟ್ಟಿ ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕ ಬಾಬೂ ಬೂಸಾರಿ ಕಾರ್ಯಕ್ರಮ ನಿರೂಪಿಸಿ, ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ಆಡಿಶನ್ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಗೋವಾದ ವಿವಿಧ ಭಾಗದಲ್ಲಿ ನೆಲೆಸಿರುವ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ