ಮೂಡುಬಿದಿರೆ : ಯುವಜನತೆ ಕೃಷಿಯಿಂದ ವಿಮುಖರಾಗಿ ಪಟ್ಟಣ ಸೇರುತ್ತಿರುವ ಈ ಕಾಲದಲ್ಲಿ ಪದವೀಧರರಾಗಿ, ಕೈಗೆ ಬಂದ ಸರಕಾರಿ ಕೆಲಸವನ್ನೂ ತಿರಸ್ಕರಿಸಿ ತನ್ನಿಷ್ಟದ ಕೃಷಿ ಕಾಯಕದಲ್ಲಿಯೇ ತೊಡಗಿಸಿಕೊಂಡು ಇಂದು ನಾಡಿನ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ತನ್ನದಾಗಿಸಿಕೊಂಡು ಯುವ ಕೃಷಿ ಸಾಧಕರಾಗಿ ಗುರುತಿಸಿಕೊಂಡಿರುವ ಡಾ. ನಾಗರಾಜ ಶೆಟ್ಟಿಯವರು ಇಂದಿನ ಯುವಜನತೆಗೆ ಮಾದರಿ ಎಂಬುದಾಗಿ ಹಿರಿಯ ಪ್ರಗತಿಪರ ಕೃಷಿಕರೂ, ಬೆದ್ರ ತುಳುಕೂಟದ ಅಧ್ಯಕ್ಷರೂ ಆಗಿರುವ ಧನಕೀರ್ತಿ ಬಲಿಪ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಬೆಳುವಾಯಿ ಸಮೀಪದ ಅಂಬೂರಿಯ ಡಾ. ನಾಗರಾಜ ಶೆಟ್ಟಿಯವರ ಕೃಷಿ ತೋಟ ಹಾಗೂ ಮನೆಯಲ್ಲಿ, ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ತೋಟ ವೀಕ್ಷಣೆ ಹಾಗೂ ಕೇಂದ್ರದ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೃ.ವಿ.ವಿ ಕೇಂದ್ರದ ಸ್ಥಾಪಕಾಧ್ಯಕ್ಷರಾದ ಪಿ.ಕೆ.ರಾಜು ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಸುಭಾಶ್ ಚೌಟ ಅವರೂ ನಾಗರಾಜ ಶೆಟ್ಟಿಯವರ ಸಮಗ್ರ ಕೃಷಿ ಹಾಗೂ ಕೃಷಿಯ ಬವಣೆಯ ಕುರಿತಾಗಿ ಮಾತನಾಡಿದರು. ಕೃಷಿ ಪದವೀಧರರಾಗಿ ಹಿರಿಯ ಕೃಷಿಕರೂ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ಎಸ್.ಡಿ.ಸಂಪತ್ ಸಾಮ್ರಾಜ್ಯ, ಕೃ.ವಿ.ವಿ. ಕೇಂದ್ರದ ಅಧ್ಯಕ್ಷರಾದ ಗುಣಪಾಲ ಮುದ್ಯ, ಕೋಶಾಧ್ಯಕ್ಷರಾದ ಜಯರಾಜ ಕಂಬಳಿ ಮತ್ತು ಕೇಂದ್ರದ ಎಲ್ಲಾ ಪದಾಧಿಕಾರಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಡಾ. ನಾಗರಾಜ ಶೆಟ್ಟಿ ದಂಪತಿಯನ್ನು ಕೃ.ವಿ.ವಿ ಕೇಂದ್ರದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ನಾಗರಾಜ ಶೆಟ್ಟಿಯವರ ಸಮಗ್ರ ಕೃಷಿಯ ಭಾಗವಾದ ಭತ್ತ, ಅಡಿಕೆ, ತೆಂಗು, ಅನಾನಾಸು, ರಂಬುಟಾನ್, ಹೈನುಗಾರಿಕೆ, ಕೋಳಿ ಸಾಕಣೆ, ಮೀನು ಸಾಕಣೆ, ಸಾವಯವ ಗೊಬ್ಬರ ತಯಾರಿ ಇತ್ಯಾದಿಗಳನ್ನೆಲ್ಲಾ ವೀಕ್ಷಿಸಿದ ಬಳಿಕ ಅವರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು. ನಂತರ ನಾಗರಾಜ ಶೆಟ್ಟಿಯವರು ತಮ್ಮ ಕೃಷಿ ಬದುಕಿನ ಅನುಭವಗಳನ್ನೂ ರೈತರೊಂದಿಗೆ ಹಂಚಿಕೊಂಡರು. ಸುಮಾರು ಮೂವತ್ತಕ್ಕೂ ಮಿಕ್ಕಿ ಕೃಷಿಕರು, ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷರಾದ ಗುಣಪಾಲ ಮುದ್ಯ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಭಯ ಕುಮಾರ್ ಅವರು ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ