ಸಮಗ್ರ ಕಲಿಕೆಯ ಕುತೂಹಲದಿಂದ ವೃತ್ತಿಪರ ಯಶಸ್ಸು: ಡಿ. ಹರ್ಷೇಂದ್ರ ಕುಮಾರ್‌

Upayuktha
0

 


ಉಜಿರೆ : ಔದ್ಯಮಿಕ ವಲಯಗಳ ಬೇಡಿಕೆಗೆ ಅನುಗುಣವಾದ ಸಂಶೋಧನೆಗಳಿಗೆ ಪೂರಕವಾಗುವ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶದಿಂದ  ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರವು ಸ್ಥಾಪಿಸಿರುವ ‘ಇನ್ಸ್ಟ್ರುಮೆಂಟೇಷನ್ ಸೆಂಟರ್ ಫಾರ್ ರಿಸರ್ಚ್’ ಅತ್ಯಾಧುನಿಕ ಪ್ರಯೋಗಾಲಯಕ್ಕೆ ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೆಂದ್ರಕುಮಾರ್ ಸೋಮವಾರ ಚಾಲನೆ ನೀಡಿದರು.


ಒಟ್ಟು 52 ಲಕ್ಷ ರೂಗಳ ವೆಚ್ಚದಲ್ಲಿ ಈ ಪ್ರಯೋಗಾಲಯವನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇದಕ್ಕಾಗಿ 21.50 ಲಕ್ಷ ರೂ.ಗಳನ್ನು ಒದಗಿಸಿದೆ. ಎಸ್.ಡಿ.ಎಂ ಸಂಸ್ಥೆಯು 30.50 ಲಕ್ಷ ರೂ.ಗಳನ್ನು ವಿನಿಯೋಗಿಸಿದೆ.. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ಈ ಪ್ರಯೋಗಾಲಯ ಪೂರಕವಾಗಲಿದೆ.


ಔದ್ಯಮಿಕ ವಲಯದ ವಿವಿಧ ಸಂಸ್ಥೆಗಳು ಮಾರುಕಟ್ಟೆಯ ನಿರೀಕ್ಷೆಗಳಿಗೆ ತಕ್ಕಂತೆ ವಿನೂತನ ಆವಿಷ್ಕಾರಗಳಿಗೆ ಆದ್ಯತೆ ನೀಡುತ್ತಿರುತ್ತವೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಇಲ್ಲಿಯ ಪ್ರಯೋಗಾಲಯವನ್ನು ರೂಪಿಸಲಾಗಿದೆ. ಸಾವಯವ ರಸಾಯನಶಾಸ್ತ್ರದ ಸಂಶೋಧನೆಯ ವೇಳೆ ಉತ್ಪನ್ನಗಳ ಪರಿಶುದ್ಧತೆಯ ಮಾಪನ ಮಾಡುವುದಕ್ಕೆ ಸಹಾಯಕವಾಗುವ ಫ್ಲ್ಯಾಶ್ ಕ್ರೊಮೆಟೊಗ್ರಾಫ್ ಎಂಬ ತಾಂತ್ರಿಕ ಸಲಕರಣೆ ಇಲ್ಲಿದೆ. ಇಲ್ಲಿರುವ ಮತ್ತೊಂದು ತಾಂತ್ರಿಕ ಪರಿಕರ ‘ಎಲೆಕ್ಟ್ರೋ ಕೆಮಿಕಲ್ ವರ್ಕ್‍ಸ್ಟೇಷನ್’ ಸೆನ್ಸಾರ್ ಮತ್ತು ಬ್ಯಾಟರಿಗಳ ಸಮಗ್ರ ಅಧ್ಯಯನ ಕೈಗೊಳ್ಳಲು ನೆರವಾಗುತ್ತದೆ. ವಿಸಿಬಲ್ ಸ್ಟೆಕ್ಟ್ರೋ ಫೋಟೋಮೀಟರ್ ಎಂಬ ತಾಂತ್ರಿಕ ಸಲಕರಣೆಯು ಸಂಶೋಧನೆಯಲ್ಲಿ ಬಳಕೆಯಾಗುವ ವಸ್ತುಗಳ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಗುಣಮಟ್ಟವನ್ನು ಅಳೆಯಲು ಪೂರಕವಾಗುತ್ತದೆ.


ಈ ಪ್ರಯೋಗಾಲಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಡಿ.ಹಷೇಂದ್ರಕುಮಾರ್ ಅವರು ಔದ್ಯಮಿಕ ವಲಯವು ನಿರೀಕ್ಷಿಸುವ ವೃತ್ತಿಪರ ಸಾಮಥ್ರ್ಯ ಕಂಡುಕೊಳ್ಳುವುದರ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು. ಹೊಸದನ್ನು ತಿಳಿದುಕೊಳ್ಳುವ ಕುತೂಹಲದೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಬಗೆಯ ಕುತೂಹಲ ಮತ್ತು ಕಲಿಕಾಕ್ರಮವು ಭವಿಷ್ಯದಲ್ಲಿ ಆರ್ಥಿಕ ಗಳಿಕೆಗೆ ಪೂರಕವಾಗುವಂಥ ವೃತ್ತಿಪರ ಸಾಮಥ್ರ್ಯವನ್ನು ತಂದುಕೊಡುತ್ತದೆ. ಇಂಥ ಸಾಮಥ್ರ್ಯದ ಮೂಲಕವೇ ಉದ್ಯಮ ವಲಯವು ನಿರೀಕ್ಷಿಸುವಂಥ ವೃತ್ತಿಪರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.


ವಿದ್ಯಾರ್ಥಿ ಜೀವನದಲ್ಲಿ ಪಾಲಕರು ಆರ್ಥಿಕ ನೆರವನ್ನು ನೀಡುತ್ತಾರೆ. ಓದುವ ಕಾಲಕ್ಕೆ ವಿನೂತನವಾಗಿ ಅನ್ವೇಷಿಸುವ ಆಲೋಚನೆಯೊಂದಿಗೆ ಹೆಜ್ಜೆಯಿಟ್ಟರೆ ಆರ್ಥಿಕ ಸ್ವಾವಲಂಬನೆಯ ದಾರಿ ತಾನಾಗಿಯೇ ಹೊಳೆಯುತ್ತದೆ. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗವು ಆರಂಭಿಸಿರುವ ಅತ್ಯಾಧುನಿಕ ಪ್ರಯೋಗಾಲಯದ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಹೋದರೆ ಉದ್ಯಮಕ್ಕೆ ಬೇಕಾಗುವಂಥ ವೃತ್ತಿಪರರಾಗಿ ಮಾರ್ಪಡಬಹುದು. ಆಗ ಆರ್ಥಿಕವಾಗಿ ಸದೃಢಗೊಳ್ಳುವ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಎ.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಜಯಕುಮಾರ ಶೆಟ್ಟಿ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು. ವಿಜ್ಞಾನ ನಿಕಾಯದ ಡೀನ್ ಡಾ. ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top