ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಅಧ್ಯಕ್ಷತೆ
ಬೆಂಗಳೂರು : ಮುಂದಿನ ತಲೆಮಾರಿನವರಿಗೆ ಪರಿಚಯ ಮಾಡಿ ಕೊಡುವುದಕ್ಕಾಗಿ ಕಲ್ಯಾಣ ಕರ್ನಾಟಕದ ಎಲ್ಲಹರಿದಾಸರ ಪರಿಚಯಾತ್ಮಕ ಚಿಕ್ಕ ಹೊತ್ತಿಗೆಗಳನ್ನು ಪ್ರಕಟಿಸಿ ಕೈಗೆಟುಕುವ ಬೆಲೆಯಲ್ಲಿ ಇದನ್ನು ಮನೆ ಮನೆಗೆ, ಪ್ರತಿ ಶಾಲೆಗೆ ತಲುಪಿಸಬೇಕು.
ಹರಿದಾಸ ಕೀರ್ತನ ಬಳಗದ ವತಿಯಿಂದ ಸೇಡಂನ ದಾಸಧೇನು ಟ್ರಸ್ಟ್ ಸಹಯೋಗದಲ್ಲಿ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಶ್ರೀಕೃಷ್ಣರಾಜ ಪರಿಷ್ಮನಂದಿರದಲ್ಲಿ 2ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಸಮ್ಮೇಳಾನಾಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ರವರು ವಹಿಸಿ ಮಾತನಾಡುತ್ತ ‘ದಾಸಸಾಹಿತ್ಯ ಬದಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಲಿದೆ. ಏಕೆಂದರೆ ಮನುಷ್ಯ ಏಕಾಂಗಿ ಆಗುತ್ತಿದ್ದಾನೆ. ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿದೆ. ನಂಬಿ ಬಂದಿದ್ದ ಮೌಲ್ಯಗಳು ಕುಸಿಯುತ್ತಿವೆ. ಮಾನವೀಯ ಮೃದು ಸಂಬಂಧಗಳು ಹಿಂದೆ ಸರಿದಿವೆ. ಎಲ್ಲರೂ ಯಾಂತ್ರಿಕ ವ್ಯವಹಾರಿಕ ವ್ಯವಸ್ಥೆಯ ಭಾಗವಾಗುತ್ತಿದ್ದೇವೆ. ಬಹು ರಾಷ್ಟ್ರೀಯ ವ್ಯವಸ್ಥೆಗಳು, ಜಾಗತೀಕರಣ, ಮಿತಿಮೀರಿದ ನಗರೀಕರಣ, ದಿನೇ ದಿನೇ ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿ, ಈ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ರಕ್ಷಣೆ ಮಾಡುವಲ್ಲಿ ದಾಸಸಾಹಿತ್ಯದ ಪಾತ್ರ ಮುಂದಿನ ದಿನಗಳಲ್ಲಿ ಮಹತ್ವದ್ದಾಗಲಿದೆ’ ಎಂದು ಅಭಿಪ್ರಾಯ ಪಟ್ಟರು.
ದಾಸಪಂಥ, ಪ್ರೀತಿ, ಗೌರವ, ವಿಶ್ವಾಸ, ವಿವೇಕ, ವಿನಯಗಳ ಜ್ಞಾನಭಕ್ತಿ ವೈರಾಗ್ಯಗಳ ಬೆಳಕಿನಲ್ಲಿ ನಡೆಯುವ ಸೊಬಗು. ಇದರಲ್ಲಿ ಸ್ವಾರ್ಥ, ಅಸೂಯೆ ಕಿಂಚಿತ್ತೂ ಬರಬಾರದು. `ಕುಲಕುಲಕುಲವೆಂದು ಹೊಡೆದಾಡದಿರಿ' ಎಂಬ ಅರಿವು ಮೂಡಿಸಿದ್ದೇ ದಾಸಸಾಹಿತ್ಯ. ದಾಸರುಗಳನ್ನು ಜಾತಿವಾದದ, ಕೋಮು ವಿಭಾಗ ಮಾಡಿ ಒಬ್ಬರ ವಿರುದ್ಧ ಮತ್ತೆ ಒಬ್ಬರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು. ಎಂದಿನಿಂದಲೂ ನಂಬಿಕೊಂಡು ಬಂದ ಇತಿಹಾಸವನ್ನು ಸ್ವಲಾಭಕ್ಕಾಗಿ ಸ್ವಕೀಯರ ಹಿತಕ್ಕಾಗಿ ತಿರುಚಬಾರದು. ಎಂದು ಸಮ್ಮೇಳನವನ್ನು ಉದ್ಘಾಟಿಸಿ ಆರ್ಶಿವಚನ ನೀಡಿದ ಬೇಲಿಮಠದ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳು ತಿಳಿಸಿದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ.ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಮತ್ತು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಕಾರ್ಯದರ್ಶಿ , ರಂಗವಿಠಲ ಮಾಸಪತ್ರಿಕೆ ಸಂಪಾದಕ ವಿದ್ವಾನ್ ಹೆಚ್.ಬಿ.ಲಕ್ಷ್ಮೀನಾರಾಯಣಾಚಾರ್ಯರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮಾರಂಭದಲ್ಲಿ ಶ್ರೀ ಕೃಷ್ಣದೇವರಾಯ 1530 ರಲ್ಲಿ ಮತ್ತು ಶ್ರೀ ವ್ಯಾಸರಾಯರು 1539 ರಲ್ಲಿ ಅಂತ್ಯರಾದ ನಂತರ ಅಳಿಯ ರಾವiರಾಯನ 12 ವರ್ಷದ (1539-1565) ಕಾಲಾವಧಿಯಲ್ಲಿ ಪುರಂದರ ಕನಕರ ಜವಾಬ್ದಾರಿಯುತ ಲೋಕ ಸಂಗ್ರಹ ಲೋಕ ಶಿಕ್ಷಣ ಮತ್ತು ಲೋಕಹಿತ ಪ್ರಮುಖವಾದದ್ದು, ಇದು ಜಗತ್ತಿನ ಇನ್ನಾವ ಸಂತ ಮಹಾಂತರು ಮಾಡಿಲ್ಲ. ಖಚಿತವಾದ ಕಾಲಾವಧಿಯಲ್ಲಿ ನಿರ್ದಿಷ್ಟವಾದ ಈಗಿನ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಸಂಭವನೀಯ ತಾಳಿಕೋಟೆ ಯುದ್ಧವನ್ನು ಊಹಿಸಿ ಮಾಡಿದ ಶಿಷ್ಟ ರಕ್ಷಣೆ ತುಂಬಾ ಮಹತ್ವವಾದದ್ದು, ಕಲ್ಯಾಣ ಕರ್ನಾಟಕದ ಹರಿದಾಸರು ನೀಡಿದ ಸವಾರ್ಂಗೀಣ ಕೊಡುಗೆ ಕುರಿತಂತೆ ಈ ಸಮ್ಮೇಳನವು ವಿಚಾರ ಮಾಡುತ್ತಿರುವುದು ಅಭಿನಂದನಾರ್ಹ. ಎಂದು ಸೇಡಂನ ದಾಸಧೇನು ಟ್ರಸ್ಟ್‍ನ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿರವರ ‘ವಿಷ್ಣುಸಹಸ್ರನಾಮದ ಅಪೂರ್ವ ಅರ್ಥಗಳು’ ಮತ್ತು ಡಾ.ಹೆಚ್.ಎ.ಸತ್ಯವತಿರವರ ‘ದಾಸ ದೀಪ್ತಿ’ ಕೃತಿ ಲೋಕಾರ್ಪಣೆಗೊಳ್ಳಲಿದೆ.
ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಶೋಧನೆ: ಶ್ರೀಧರ ರಾಯಸಂ ; ಪ್ರಕಾಶನ : ಡಾ.ಗುರುರಾಜ ಪೋಶೆಟ್ಟಿಹಳ್ಳಿ ; ಸಂಘಟನೆ : ವೆಂಕೋಬರಾವ್ ; ಸಾಹಿತ್ಯ : ಡಾ.ಮಂಜುನಾಥ ಪಾಳ್ಯ ; ವಂಶಸ್ಥರು : ಚೀಕಲಪರ್ವಿ ಜಗನ್ನಾಥ ದಾಸರು ಹಾಗು ಸಂಗೀತ : ವಿದ್ವಾನ್ ಶ್ರೀನಿಧಿರವರುಗಳಿಗೆ ಅಭಿನಂದನೆಯನ್ನು ಮಾಡಲಾಯಿತು.
ಸಮ್ಮೇಳನದ ಕುರಿತು
ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವೆಂದೇ ಪರಿಗಣಿತವಾಗಿರುವ ಕಲ್ಯಾಣ ಕರ್ನಾಟಕ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ವಿಶೇಷವಾದ ಭಕ್ತಿ ಸಾಹಿತ್ಯದ ಹಿನ್ನೆಲೆಯಲ್ಲಿ ಹೇಗೆ ಮಹತ್ವಪೂರ್ಣವಾದ ಶ್ರೀಮಂತ ಕೊಡುಗೆ ನೀಡಿದೆ ಎನ್ನುವ ವಿಚಾರವಾಗಿ ಒಂದು ವಿಶೇಷ ಗೋಷ್ಠಿಯನ್ನು ಈ ಸಮ್ಮೇಳನದಲ್ಲಿ ಆಯೋಜಿಸಲಾಗಿತ್ತು. ಈ ಗೋಷ್ಠಿಯ ವೈಶಿಷ್ಟವೆಂದರೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಈ ಬಗ್ಗೆ ದಶಕಗಳ ಕಾಲ ವಿದ್ವತ್ಪೂರ್ಣ ಕೃಷಿ ಮಾಡಿರುವ ವಿದ್ವಾಂಸರುಗಳೇ ಸ್ವತಃ ಬಂದು ಗೋಷ್ಟಿಯಲ್ಲಿ ಭಾಗವಹಿಸಿ ಈ ಬಗ್ಗೆ ಬೆಳಕು ಚೆಲ್ಲಿದರು.
ದಾಸ ಸಾಹಿತ್ಯ ನಿಂತ ನೀರಲ್ಲ, ಇಂದಿಗೂ ಸಮೃದ್ಧಧಾರೆಯಾಗಿ ತುಂಬಿ ತುಂಬಿ ಹರಿಯುತ್ತಿರುವ ನೀರು ಎಂಬುದನ್ನು ‘ಆಧುನಿಕ ಹರಿದಾಸ ಸಾಹಿತ್ಯ’ ಎಂಬ ಗೋಷ್ಠಿಯಲ್ಲಿ ನಿರೂಪಿಸಲಾಯಿತು ಇದರಲ್ಲೂ ವಿಶೇಷವಾಗಿ ಅರವತ್ತಕ್ಕೂ ಹೆಚ್ಚು ಹರಿದಾಸ ಗ್ರಂಥಗಳನ್ನು ಸಹಸ್ರಾರು ಹರಿದಾಸ ಕೀರ್ತನೆಗಳನ್ನು ರಚಿಸಿರುವ ಜಗತ್ತಿನ ನಾನಾ ರಾಷ್ಟ್ರಗಳಿಗೆ ದಾಸ ಸಾಹಿತ್ಯ ಸೌರಭವನ್ನು ಅತ್ಯಂತ ಯಶಸ್ವಿಯಾಗಿ ಪ್ರಸರಿಸಿ ಬಂದಿರುವ ಈ ಸಮ್ಮೇಳನಾಧ್ಯಕ್ಷರಾದ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರ ಸಾಹಿತ್ಯದ ಕುರಿತು ಗೋಷ್ಠಿಯಲ್ಲಿ ಚಿಂತನ-ಮಂಥನ ನಡೆಯಿತು.
ಸಮ್ಮೇಳನದ ಇನ್ನೊಂದು ಸ್ವಾರಸ್ಯಕರ ಕಾರ್ಯಕ್ರಮ ‘ಸಂವಾದ’, ದಾಸ ಸಾಹಿತ್ಯದಲ್ಲಿ ದಶಕಗಳ ಕಾಲ ಕೃಷಿ ಮಾಡಿರುವ ಹತ್ತಾರು ವಿದ್ವಾಂಸರು ಸಮ್ಮೇಳನಾಧ್ಯಕ್ಷರೊಡನೆ ಸ್ಪಂದಿಸುತ್ತ ದಾಸಸಾಹಿತ್ಯ ಕ್ಷೇತ್ರದ ಹೊಳಹುಗಳು-ಸುಳಿವುಗಳು, ಆಗಬೇಕಾದ ಕೆಲಸಗಳ ಬಗ್ಗೆ ಚಿಂತಿಸುವ, ಅಧ್ಯಯನಶೀಲರಿಗೆ, ದಾಸಸಾಹಿತ್ಯಾಸಕ್ತರಿಗೆ ಮಾರ್ಗದರ್ಶನ ಮಾಡುವ ವಿಧೇಯಕವಾಗಿರುವ ಈ ಕಾರ್ಯಕ್ರಮ ಅತ್ಯುಪಯುಕ್ತವಾಯಿತು.
ಕಲ್ಯಾಣ ಕರ್ನಾಟಕವು ದಾಸಸಾಹಿತ್ಯವನ್ನು ನಾಡಿನಾದ್ಯಂತ ಭಕ್ತಿಭಾಗೀರಥಿಯಂತೆ ಹರಿಯಬಿಟ್ಟು ಇಡೀ ಕರ್ನಾಟಕ ಭಕ್ತಿ ಗಂಗೆಯಲ್ಲಿ ಮಿಂದು ಪಾವನ ಮಾಡುವಂತೆ ಮಾಡಿದ ಪವಿತ್ರ ನೆಲ. ಈ ಬಗ್ಗೆ ಆಗಬೇಕಾದ ಕೆಲಸ ಇನ್ನೂ ಬಹಳಷ್ಟು ಇದೆ. ಈ ಭಾಗದ ಹರಿದಾಸರನ್ನು ಮುಂದಿನ ತಲೆಮಾರಿನವರಿಗೆ ಪರಿಚಯ ಮಾಡಿ ಕೊಡುವುದಕ್ಕಾಗಿ ಕಲ್ಯಾಣ ಕರ್ನಾಟಕದ ಎಲ್ಲಹರಿದಾಸರ ಪರಿಚಯಾತ್ಮಕ ಚಿಕ್ಕ ಹೊತ್ತಿಗೆಗಳನ್ನು ಪ್ರಕಟಿಸಿ ಕೈಗೆಟುಕುವ ಬೆಲೆಯಲ್ಲಿ ಇದನ್ನು ಮನೆ ಮನೆಗೆ, ಪ್ರತಿ ಶಾಲೆಗೆ ತಲುಪಿಸಬೇಕು. ಸಾಹಿತ್ಯ ಶಕ್ತಿ ಇರುವ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ದಾಸಸಾಹಿತ್ಯ ಶಿಬಿರಗಳನ್ನು ಆಗಾಗ ಏರ್ಪಡಿಸಿ ಸಾಹಿತ್ಯ ಯುವ ಪಡೆಯೊಂದನ್ನು ಸಿದ್ಧಪಡಿಸಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಯುಜಿಸಿ, ಕಲಾಕಲ್ಯಾಣ ಅಭಿವೃದ್ಧಿ ಮಂಡಳಿಗಳ ಧನಸಹಾಯದಿಂದ ದಾಸಕೇಂದ್ರಗಳನ್ನು ಸ್ಥಾಪಿಸುವುದು, ದಾಸರ ಕ್ಷೇತ್ರಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರಗಳನ್ನು ತೆರೆಯಬೇಕು.
ವಿಶ್ವವಿದ್ಯಾನಿಲಯದಲ್ಲಿ ಓದದೆ ಇರುವ, ಆದರೆ ದಾಸಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವ ಕೊಡುಗೆ ನೀಡುತ್ತಿರುವವರಿಗೆ ಆಸಕ್ತಿ ಅಧ್ಯಯನ ಮಾಡುವವರಿಗೆ ಗುರುತಿಸಿ ಗೌರವಿಸುವಂತಹ ಡಿಪ್ಲೋಮೋ ಕೊಡುವ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕು. ಇದುವರೆಗೆ ಈ ಭಾಗದಲ್ಲಿ ಎಂ.ಫಿಲ್, ಪಿಹೆಚ್‍ಡಿ, ಹಾಗೂ ಡಿ.ಲಿಟ್ ಪದವಿಗಳಿಗಾಗಿ ಸಿದ್ಧವಾದ ದಾಸಸಾಹಿತ್ಯ ಪ್ರೌಢಪ್ರಬಂಧಗಳನ್ನೆಲ್ಲಾ ಪ್ರಕಟಿಸುವ ಯೋಜನೆಯೊಂದು ರೂಪಿತವಾಗಬೇಕು. ಎಂದು ಸಮ್ಮೆಳನದಲ್ಲಿ ನಿರ್ಣಯಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ತುಮಕೂರಿನ ಸಾಹಿತಿ ಡಾ.ಕವಿತಾಕೃಷ್ಣ ಸಮಾರೋಪ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಾನಕಲಾ ಪರಿಷತ್ ಅಧ್ಯಕ್ಷ ಸಂಗೀತ ಸಾಮ್ರಾಟ್ ಆರ್.ಕೆ.ಪದ್ಮನಾಭ, ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ನಾ.ಗೀತಾಚಾರ್ಯ ಹಾಗು ದಾಸ ಧೇನು ಟ್ರಸ್ಟ್‍ನ ಪೋಷಕರಾದ ಡಾ.ಸುಧೀಂದ್ರ ಕುಲಕರ್ಣಿ ರವರು ದಾಸಧೇನು ಟ್ರಸ್ಟ್ ವತಿಯಿಂದ ನೀಡುವ ಶ್ರೀಕಂಠಪುರಂ ಎಸ್.ದಿವಾಕರರಾವ ಸ್ಮರಣೆಯ ‘ದಾಸ ದಿವಾಕರ’ (ದಾಸಧೇನು 3ನೇ ಮಾಧ್ಯಮಪ್ರಶಸ್ತಿ) ಪ್ರಶಸ್ತಿಯನ್ನು ರಾಯಚೂರಿನ ಹರಿದಾಸ ಚಿತ್ರನಟರು ಮತ್ತು ನಿರ್ಮಾಪಕರು , ಕೃಷ್ಣೆತುಂಗೆ ಕನ್ನಡ ಅಂತರ್ಜಾಲ ಪತ್ರಿಕೆಯ ಮಾಲೀಕರಾದ ತ್ರಿವಿಕ್ರಮ ಜೋಷಿರವರಿಗೆ ಪ್ರದಾನ ಮಾಡಲಾಯಿತು ಎಂದು ಆಯೋಜಕರಾದ ಡಾ.ಆರ್.ವಾದಿರಾಜು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ