ಶ್ರೀ ತ್ಯಾಗರಾಜರ ಆರಾಧನೋತ್ಸವಕ್ಕೆ ಚಾಲನೆ
ತುಮಕೂರು : ಸಂಗೀತ ಎಂಬುದು ಕೇವಲ ಮನಕ್ಕೆ ರಂಜನೆ ನೀಡುವ ಸಾಧನ ಮಾತ್ರವಲ್ಲ. ಅದು ವಿವಿಧ ರಂಗದ ಸಾಧನೆಗಳಿಗೂ ಸ್ಫೂರ್ತಿ ನೀಡುವ ದೈವದತ್ತ ಕಲೆ ಎಂದು ನಿವೃತ್ತ ಇಂಜಿನಿಯರ್ ಅನಂತಯ್ಯ ಹೇಳಿದರು. ಅವರು ನಗರದ ಮಾ.ಕಂ. ಕಲ್ಯಾಣ ಮಂದಿರದಲ್ಲಿ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು ಕರ್ನಾಟಕದ ಪ್ರಖ್ಯಾತ ಸಂಗೀತ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಆಯೋಜಿಸಿದ್ದ ಶ್ರೀ ತ್ಯಾಗರಾಜರ ಮತ್ತು ಶ್ರೀ ಪುರಂದರದಾಸರ ಆರಾಧನೋತ್ಸವಕ್ಕೆ ಗುರುವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.
ವರ್ತಮಾನದ ದಿನಗಳಲ್ಲಿ ಬಹುತೇಕ ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರೆಲ್ಲರಿಗೂ ಸಂಗೀತ ಕೇಳುವಿಕೆಯೇ ಪರಿಹಾರವೆಂದು ಮನೋ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಿರುವಾಗ ಮಕ್ಕಳಿಗೆ ಬಾಲ್ಯದಲ್ಲೇ ಸಂಗೀತ ಸಂಸ್ಕಾರ ನೀಡುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.
ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶ್ರೀ ಕಂಠ ಭಟ್ ಮಾತನಾಡಿ, ಯಾವ ಮಕ್ಕಳಿಗೆ ಸಂಗೀತ ಮತ್ತು ಸಂಸ್ಕೃತಿಗಳ ಪರಿಚಯ ಮತ್ತು ಶಿಕ್ಷಣ ದೊರಕುವುದೋ ಅವರು ನಮ್ಮ ಪರಂಪರೆಯ ಪ್ರತಿನಿಧಿಗಳಾಗುತ್ತಾರೆ. ದೇಶದ ಸನಾತನ ಕಲೆಗಳ ರಾಯಭಾರಿ ಗಳಾಗುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಗಳೂ ಮಹತ್ವ ಪಡೆದಿವೆ ಎಂದರು.
ಸಂಗೀತ ಕೇಳುವಿಕೆಯಿಂದ ಅನೇಕ ರೋಗ ವಾಸಿಯಾಗುತ್ತವೆ. ಮಾತೆಯರು ಮನೆಯಲ್ಲಿ ಹಾಡುತ್ತಿದ್ದರೆ ಇಡೀ ಕುಟುಂಬದ ಪ್ರಗತಿಯಾಗುತ್ತದೆ. ನಮ್ಮ ಸಂಪ್ರದಾಯ ಮುಂದಿನ ಪರಂಪರೆಗೆ ಪರಿಚಯವಾಗುತ್ತದೆ. ಅದಕ್ಕಾಗಿ ನಮ್ಮ ವಿದ್ಯಾಲಯ ಪ್ರತಿವರ್ಷ ಮಾತೆಯರಿಗೆ ದೇವರನಾಮ ಕಲಿಕೆ ಉಚಿತ ಶಿಬಿರ ಆಯೋಜನೆ ಮಾಡುತ್ತಿದೆ ಎಂದರು.
ವಿದ್ಯಾಲಯದ ವಿದ್ಯಾರ್ಥಿಗಳು ದೇವರನಾಮ ಹಾಡುವ ಮೂಲಕ ಮೂರು ದಿನಗಳ ಸಂಗೀತ ಆರಾಧನೋತ್ಸವಕ್ಕೆ ಚಾಲನೆ ನೀಡಿದರು. ಹಿರಿಯ ವಿದ್ಯಾರ್ಥಿಗಳಾದ ಮೀನಾ ಕಾಂತ, ಪ್ರಭಾ ವೇಣುಗೋಪಾಲ, ಸಂಧ್ಯಾ ದಿವೇಕರ್, ಕುಸುಮಾ ಕರುಣಾಕರ ಮತ್ತು ಶಾಂತಲಾ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ಕೇಳುಗರನ್ನು ರಂಜಿಸಿತು.
ಪಂಚರತ್ನ ಗೋಷ್ಠಿ:
ನಂತರ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಸದ್ಗುರು ಶ್ರೀ ತ್ಯಾಗರಾಜರ "ಘನರಾಗ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ"
ಮನೋಜ್ಞವಾಗಿ ಮೂಡಿಬಂತು. ನಾಡಿನ ಹಿರಿಯ ಗಾಯಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕಲಾವಿದರು ಏಕ ಕಂಠದಲ್ಲಿ ಪಂಚರತ್ನ ಕೃತಿಗೆ ದನಿಗೂಡಿಸಿದರು. ಪಕ್ಕವಾದ್ಯದಲ್ಲಿ ವಿದ್ವಾನ್ ಪಿ.ಎಸ್. ಶ್ರೀ ಧರ್, ವಯೋಲಿನ್ ನಲ್ಲಿ ವಿದ್ವಾನ್ ಸುಬೋಧ ಸಹಕರಿಸಿದರು.