ಬದಿಯಡ್ಕ: ಧಾರ್ಮಿಕವಾಗಿಯೂ ಸಾಂಸ್ಕೃತಿಕವಾಗಿಯೂ ಗುರುತಿಸಿಕೊಂಡ ವಿಶೇಷ ಶಕ್ತಿಯುಳ್ಳ ಯಕ್ಷಗಾನ ಕಲೆಯು ಇಂದು ಇತಿಹಾಸದ ಮಹತ್ವವನ್ನು ಕರಾವಳಿಯಾದ್ಯಂತ ತಿಳಿಹೇಳುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಈ ದೃಷ್ಟಿಯಲ್ಲಿ ಪರಂಪರೆಯನ್ನು ಉಳಿಸಿಕೊಂಡು ಅದರದ್ದೇ ಆದ ಚೌಕಟ್ಟಿನಲ್ಲಿ ಯಕ್ಷಗಾನ ಕಲೆ ಉಜ್ವಲವಾಗಿ ಬೆಳಗಲಿ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
ಪರಮಪೂಜ್ಯ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯ ಸ್ಮರಣೆಯ ದಿನದಂದು ಎಡನೀರು ಮಠದಲ್ಲಿ ಹಮ್ಮಿಕೊಂಡ ದ್ವಿದಿನ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.
ಶ್ರೀಗಳ ಕಾಲದಲ್ಲಿ ನಿರಂತರವಾಗಿ ಯಕ್ಷಗಾನ ನಡೆಯುತ್ತಿದ್ದ ಮಣ್ಣು ಇದು. ಅವರ ಯಕ್ಷಗಾನ ಪ್ರೀತಿ, ಅಭಿಮಾನವನ್ನು ಯಾವತ್ತೂ ಹಸಿರಾಗಿಡುವ ದೃಷ್ಟಿಯಿಂದ ದ್ವಿದಿನ ಯಕ್ಷೋತ್ಸವ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸನ್ಮಾನಿತ ಯಕ್ಷಗಾನ ಕಲಾವಿದರ ಕುರಿತು ಮಾತನಾಡುತ್ತಾ, ಪ್ರಶಸ್ತಿಗಳು ಯಾವತ್ತೂ ಕಲಾವಿದನಿಗೆ ಆತನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು. ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ, ಕಲಾಪೋಷಕ ಡಿ. ಶ್ಯಾಮ್ ಭಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಿಗೆ ಸನ್ಮಾನ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಸರಕಾರದ ವತಿಯಿಂದ ನಡೆಯುವ ಯಕ್ಷಗಾನ ಸಮ್ಮೇಳನದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎಂ. ಪ್ರಭಾಕರ ಜೋಷಿ, ಬಡಗುತಿಟ್ಟಿನ ಹಿರಿಯ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ತೆಂಕುತಿಟ್ಟಿನ ಯಕ್ಷಗಾನ ಕಲಾವಿದ, ಸಾಮಾಜಿಕ ಕಾರ್ಯಕರ್ತ ಸರಪಾಡಿ ಅಶೋಕ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಶ್ರೀಗಳು ಶ್ರೀದೇವರ ಪ್ರಸಾದ, ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ರಾಜಾರಾಮ ಪೆರ್ಲ ಪ್ರಶಸ್ತಿ ಪತ್ರ ವಾಚಿಸಿದರು. ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಣಿಪುರ ಮಾಸಪತ್ರಿಕೆಯ ಸಂಚಾಲಕ ಎಂ.ನಾ. ಚಂಬಲ್ತಿಮಾರು ನಿರೂಪಿಸಿದರು. ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಕಯ್ಯೂರು ನಾರಾಯಣ ಭಟ್ ವಂದಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ ಸೇವೆಗೈದ ಶಿಷ್ಯವೃಂದದವರನ್ನು ಶ್ರೀಗಳು ಶಾಲು ಹೊದಿಸಿ ಆಶೀರ್ವದಿಸಿದರು.
ದ್ವಿದಿನ ಯಕ್ಷೋತ್ಸವ ಸಂಪನ್ನ
ಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಗಳವರ ಸ್ಮರಣಾರ್ಥ ಮಂಗಳವಾರ ಹಾಗೂ ಬುಧವಾರ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಹಮ್ಮಿಕೊಳ್ಳಲಾಗಿತ್ತು. ಶ್ರೀಕೃಷ್ಣ ತುಲಾಭಾರ, ಮೈರಾವಣ ಕಾಳಗ, ವೀರೋಚನ ಕಾಳಗ ಹಾಗೂ ಬುಧವಾರ ರಾತ್ರಿ ಶಿವಪಂಚಾಕ್ಷರೀ ಮಹಿಮೆ-ರಕ್ತರಾತ್ರಿ ಯಕ್ಷಗಾನ ಪ್ರದರ್ಶನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ