ಉಪಯುಕ್ತತೆ, ಸಾರ್ಥಕತೆ, ಮತ್ತೊಂದಿಷ್ಟು ಹಿತವಾದ ಅಚ್ಚರಿ!

Upayuktha
0


ಹಾಸನ ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲಿ ಕನ್ನಡ ವಿಷಯ ಶಿಕ್ಷಣ ತಪಾಸಣಾಧಿಕಾರಿ (ಇನ್ಸ್‌ಪೆಕ್ಟರ್) ಆಗಿರುವ ಶೇಖರೇ ಗೌಡ ಅವರು, ಪತ್ರಿಕೆಯಲ್ಲಿ ಪ್ರಕಟವಾಗುವ ತಿಳಿರುತೋರಣ ಅಂಕಣ ಮತ್ತು ಅಂತರಜಾಲದಲ್ಲಿ ಪ್ರಕಟವಾಗುವ  ‘ಸ್ವಚ್ಛ ಭಾಷೆ ಅಭಿಯಾನ’ ಸರಣಿಯ ನಿಯತ ಓದುಗರು. ಅದರಲ್ಲಿ ಮೌಲ್ಯವನ್ನು ಕಂಡುಕೊಂಡವರು. ಅವರು ಈಗ ನನ್ನನ್ನೂ ಒಬ್ಬ ಸಂಪನ್ಮೂಲ ವ್ಯಕ್ತಿಯೆಂದು ಗುರುತಿಸಿದ್ದಾರೆ! ಹಾಸನ ಜಿಲ್ಲೆಯಾದ್ಯಂತದ ಕನ್ನಡ ಶಿಕ್ಷಕರಿಗೆಂದು ಅವರು ನಡೆಸುವ ವೆಬಿನಾರ್ ಉಪನ್ಯಾಸ ಸರಣಿಯಲ್ಲಿ ನಿನ್ನೆ (ಬುಧವಾರ ಜನವರಿ 4ರಂದು ಸಂಜೆ 7ಗಂಟೆಯಿಂದ 8ರವರೆಗೆ) ನನ್ನಿಂದ ಒಂದು ವೆಬಿನಾರ್ ಕಾರ್ಯಕ್ರಮ ಮಾಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 


ನಿನ್ನೆಯ ವೆಬಿನಾರ್ ವಿಷಯ: "ಕನ್ನಡ ಕಬ್ಬಿಣದ ಕಡಲೆಯಲ್ಲ, ಕಬ್ಬಿನ ಹಾಲು!"


ಹಾಸನ ಜಿಲ್ಲೆಯಷ್ಟೇ ಅಲ್ಲದೇ ಕಾರ್ಯಕ್ರಮ ವ್ಯಾಪ್ತಿಯನ್ನು "ಕರ್ನಾಟಕ ರಾಜ್ಯ ಕನ್ನಡ ಭಾಷಾ ಶಿಕ್ಷಕರ ಕೂಟ" ಟೆಲಿಗ್ರಾಂ ಗ್ರೂಪಿಗೆ ವಿಸ್ತರಿಸಿದ್ದರಿಂದ ಬೇರೆ ಜಿಲ್ಲೆಗಳ ಕನ್ನಡ ಶಿಕ್ಷಕ/ಕಿಯರೂ ಇದರಲ್ಲಿ ಭಾಗವಹಿಸಿದ್ದರು.


45 ಸ್ಲೈಡ್‌ಗಳ ಒಂದು ಪವರ್‌ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ನಾನು 1. ಕನ್ನಡದ ಹಿರಿಮೆ-ಗರಿಮೆ, 2. ಕನ್ನಡ ಭಾಷೆಯ ಸೊಗಡು, 3. ಕನ್ನಡ ಚಿತ್ರಕಾವ್ಯ, 4. ಕನ್ನಡದಲ್ಲಿ ಛಂದೋಬದ್ಧ ರಚನೆಗಳ ಸಾಧ್ಯತೆ, 5. ಪತ್ರಿಕೆಗಳಿಗೆ ಬರೆಯುವುದು ಹೇಗೆ?, 6. ಸ್ವಚ್ಛ ಭಾಷೆ ಅಭಿಯಾನ - ಈ ವಿಷಯಗಳಿಂದ ಉಪನ್ಯಾಸವನ್ನು ಅರ್ಥಪೂರ್ಣಗೊಳಿಸಿದೆ (ಎಂದು ನನ್ನ ಭಾವನೆ). ಶಾಲಾಮಕ್ಕಳಲ್ಲಿ ಕನ್ನಡ ಕಲಿಕೆಯನ್ನು ಆಕರ್ಷಕವಾಗಿಸುವುದು ಹೇಗೆ, ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದು ಹೇಗೆ ಎಂಬುದು ಉಪನ್ಯಾಸದ ಮುಖ್ಯ ಆಶಯ, ಉದ್ದೇಶ. ಕೊನೆಯಲ್ಲಿ ಹತ್ತು ನಿಮಿಷ ಪ್ರಶ್ನೋತ್ತರ/ಸಂವಾದ ಸಹ ಇತ್ತು. ಕಾರ್ಯಕ್ರಮ ಬಹಳ ಚೆನ್ನಾಗಿತ್ತು, ಉಪಯುಕ್ತವಾಗಿತ್ತು ಎಂಬ ಪ್ರತಿಕ್ರಿಯೆ ಕೇಳಿಬಂತು.


ನಾನೇನೂ ಅಂಥ ದೊಡ್ಡ ಭಾಷಣಕಾರನಲ್ಲ, ಭಾಷಾತಜ್ಞನಲ್ಲ. ಹಾಗಾಗಿ ಈ ಕಾರ್ಯಕ್ರಮವಾಗಲಿ, ಇದನ್ನಿಲ್ಲಿ ನಾನೀಗ ಹಂಚಿಕೊಳ್ಳುತ್ತಿರುವುದಾಗಲಿ, ನನ್ನ ಹಿರಿಮೆ ಎಂದು ಖಂಡಿತ ಅಲ್ಲ. ಆದರೆ ನನಗೆ ಮೆಚ್ಚುಗೆಯಾದದ್ದೇನೆಂದರೆ, ಶೇಖರೇಗೌಡ ಎಂಬುವ ಈ ಶಿಕ್ಷಣಾಧಿಕಾರಿ (ಅವರ ಭಾವಚಿತ್ರವನ್ನೂ ಸೇರಿಸಿದ್ದೇನೆ) ನಿಜಕ್ಕೂ ಅಪರೂಪದವರು, ಆದರ್ಶಪ್ರಾಯರು. ಶಿಕ್ಷಕರಿಗೆ, ತನ್ಮೂಲಕ ಮಕ್ಕಳಿಗೆ ಒಳ್ಳೆಯದಾಗಬೇಕೆಂದು ಬಯಸುವವರು. ಈಗಿನ ಕಾಲದಲ್ಲಿ ಸರಕಾರಿ ಇಲಾಖೆಗಳಲ್ಲಿ ಅದೂ ಕನ್ನಡ ಭಾಷಾ ಶಿಕ್ಷಣದ ಬಗ್ಗೆ ಕಾಳಜಿಯುಳ್ಳವರು, ನಿಃಸ್ವಾರ್ಥ ಸೇವಾಮನೋಭಾವದವರು ಸಿಗುವುದು ಇಲ್ಲವೇಇಲ್ಲ ಎನ್ನುವಷ್ಟು ವಿರಳ. ಅಂಥದರಲ್ಲಿ ಇವರು ಇಷ್ಟು ಆಸಕ್ತಿವಹಿಸಿ ಈ ಕಾರ್ಯಕ್ರಮ ಏರ್ಪಡಿಸಿದ್ದಾರೆಂದರೆ ಮೆಚ್ಚಬೇಕಾದ್ದೇ. ಬೇರೆಲ್ಲ ಬೇಡ, ವೆಬಿನಾರ್‌ನ ಈ ಪೋಸ್ಟರ್‌ನಲ್ಲಿ (ಚಿತ್ರದ ಬಲಭಾಗದಲ್ಲಿರುವುದು) ಅಚ್ಚುಕಟ್ಟುತನ, ಸಂಕ್ಷಿಪ್ತ ವಿವರಗಳನ್ನು ದಾಖಲಿಸಿದ ರೀತಿ ನೋಡಿದಾಗಲೇ ಗೊತ್ತಾಗುತ್ತದೆ ಅವರ ಕಾರ್ಯದಕ್ಷತೆ ಮತ್ತು ಕರ್ತವ್ಯನಿಷ್ಠೆ.


ಈ ಕಾರ್ಯಕ್ರಮದಲ್ಲಿ ಶಿಕ್ಷಕ/ಕಿಯರೂ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡರು. ಕನ್ನಡ ಭಾಷೆ ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಲಿಕ್ಕೆ, ಅದನ್ನು ಆಕರ್ಷಕವಾಗಿಸುವುದಕ್ಕೆ ತಾವು ಕೈಗೊಂಡಿರುವ ವಿವಿಧ ಪ್ರಯೋಗಗಳ ಬಗ್ಗೆ ತಿಳಿಸಿದರು. ಇದೆಲ್ಲವನ್ನೂ ನೋಡಿ ನನಗೆ ತುಂಬ ಸಂತೋಷವಾಯಿತು. "ಈಗಿನ ಶಿಕ್ಷಣ ಪದ್ಧತಿ ಸರಿ ಇಲ್ಲ, ಭಾಷೆ ವಿಷಯದಲ್ಲಂತೂ ಶಿಕ್ಷಕರಿಗೂ ಆಸಕ್ತಿಯಿಲ್ಲ, ಮಕ್ಕಳಿಗೂ ಉಮೇದಿಯಿಲ್ಲ" ಎಂದು ನಾವು ಸಾರಾಸಗಟಾಗಿ ಒಂದು ರೀತಿಯ ಪೂರ್ವಗ್ರಹ ಇಟ್ಟುಕೊಂಡಿರುತ್ತೇವೆ. ಅದು ತಪ್ಪು. ಒಳ್ಳೆಯ ಶಿಕ್ಷಕರು, ಮತ್ತು ಅಷ್ಟೇ ಒಳ್ಳೆಯ ಶಿಕ್ಷಣಾಧಿಕಾರಿಗಳು ಈಗಲೂ ಇದ್ದಾರೆ ಎನ್ನುವುದು ಇದರಿಂದ ಸಾಬೀತಾಗಿದೆ. ಇಂಥವರನ್ನು ನಾವು ಹೆಚ್ಚುಹೆಚ್ಚು ಗುರುತಿಸಬೇಕು, ಪ್ರೋತ್ಸಾಹಿಸಬೇಕು.


ವೆಬಿನಾರ್‌ ಕೊನೆಯಲ್ಲಿ ‘ಸ್ವಚ್ಛ ಭಾಷೆ ಅಭಿಯಾನ- ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ’ ಪುಸ್ತಕದ ಬಗ್ಗೆಯೂ ಶೇಖರೇಗೌಡ ಅವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವನ್ನು ಕರ್ನಾಟಕದಲ್ಲಿ ಪ್ರತಿಯೊಬ್ಬ ಕನ್ನಡ ಶಿಕ್ಷಕರೂ ಓದಬೇಕು, ಉಪಯೋಗಿಸಬೇಕು ಎಂದು ಅವರ ಅಂಬೋಣ. ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಅವರನ್ನು ಈ ಬಗ್ಗೆ ಸಂಪರ್ಕಿಸಲಾಗಿ ಅವರು ಶಿಕ್ಷಕರಿಗೆ/ ಶಾಲಾಗ್ರಂಥಾಲಯಗಳಿಗೆ ರಿಯಾಯಿತಿ ದರದಲ್ಲಿ ಪುಸ್ತಕ ಒದಗಿಸುವ ಭರವಸೆ ನೀಡಿದ್ದಾರೆ. ಅವರ ಈ ನಡೆಯೂ ಶ್ಲಾಘನಾರ್ಹ.


ಒಟ್ಟಿನಲ್ಲಿ, "ಒಡೆಯು"ವುದೊಂದೇ ಮೆರೆಯುತ್ತಿರುವ, ಕೆಟ್ಟದಕ್ಕೇ ಹೆಚ್ಚು ಪ್ರಚಾರ ಸಿಗುತ್ತಿರುವ ಈ ಕಾಲದಲ್ಲಿ ಇಂತಹ "ಕಟ್ಟುವೆವು ನಾವು" ಕಾರ್ಯಕ್ರಮಗಳು, ನವೆಂಬರ್ ತಿಂಗಳಿಗೆ ಸೀಮಿತವಾಗದೆ, ಅನವರತವೂ ಸದ್ದಿಲ್ಲದೆ ನಡೆಯುತ್ತಿವೆಯೆನ್ನುವುದು ಸಂತೋಷಾಭಿಮಾನಗಳ ಸಂಗತಿ.


ಸಿರಿಗನ್ನಡಂ ಗೆಲ್ಗೆ!


- ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ. 5 ಜನವರಿ 2023.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top