ಹಾಲಾಡಿಯಲ್ಲಿ ಅಪರೂಪದ ಶಾಸನ ಶೋಧ

Upayuktha
0

 




ಉಡುಪಿ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕು 76 ಹಾಲಾಡಿಯ ಹುಯ್ಯಾರುವಿನಲ್ಲಿ ಅತಿ ವಿರಳ ಎನ್ನಬಹುದಾದ ಶಾಸನಪತ್ತೆಯಾಗಿದೆ. ಹುಯ್ಯಾರು ಪಟೇಲ್ ದಿ.ಹಿರಿಯಣ್ಣ ಶೆಟ್ಟಿ ಕುಟುಂಬಿಕರ ಜಾಗದಲ್ಲಿ ಈ ಶಾಸನವಿದೆ. ಸುಮಾರು 10 ಅಡಿ ಎತ್ತರ, 5 ಅಡಿ ಅಗಲ ಮತ್ತು 3.5 ಇಂಚು ದಪ್ಪ ಗ್ರಾನೈಟ್ ಶಿಲೆಯಲ್ಲಿ ಶಾಸನವನ್ನು ರಚಿಸಲಾಗಿದೆ. ಆಯತಾಕಾರದ ರಚನೆಯನ್ನು ಹೊಂದಿರುವ ಇದರ ಮೇಲ್ಭಾಗವನ್ನು ಕೋನಾಕೃತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಶಾಸನವನ್ನು ಎರಡು ಪಟ್ಟಿಕೆಗಳನ್ನಾಗಿ ವಿಂಗಡಿಸಲಾಗಿದ್ದು, ಮೇಲಿನ ಕೋನಾಕೃತಿಯ ಪಟ್ಟಿಕೆಯ ಮೇಲೆ ಎಂಟು ಸಾಲುಗಳಲ್ಲಿ ಶಾಸನವನ್ನು ಬರೆಯಲಾಗಿದೆ. ಬರವಣಿಗೆ ಪೂರ್ಣವಾಗಿ ಸವೆದುಹೋಗಿದ್ದು ಅಲ್ಲೊಂದು ಇಲ್ಲೊಂದು ಅಕ್ಷರಗಳನ್ನು ಕಂಪ್ಯೂಟರ್ ನೆರವಿನೊಂದಿಗೆ ಗುರುತಿಸಬಹುದಾಗಿದೆ. 


ಶಾಸನದ ಮೂರನೇ ಸಾಲಿನಲ್ಲಿ ಬಸವ .....ಸೋ ..... ಎಂಬ ಅಕ್ಷರಗಳನ್ನು ಗುರುತಿಸಲು ಸಾದ್ಯವಾಗಿದೆ. ಶಾಸನೋಕ್ತ ಈ ಅಕ್ಷರಗಳ ನೆರವಿನಿಂದ ಪ್ರಸ್ತುತ ಶಾಸನ ಆಳುಪ ಚಕ್ರವರ್ತಿ ಬಸವ ಶಂಕರ ಸೋಯಿದೇವನ ಶಾಸನವೆಂದು ನಿರ್ಧರಿಸಬಹುದಾಗಿದೆ. ಶಿಲ್ಪಗಳ ನಡುವಿನಲ್ಲಿ ವಸಂತಯ್ಯನ ಬರಹ ಎಂದಿದೆ, ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಶಾಸನದ ಎರಡನೇ ಪಟ್ಟಿಕೆಯಲ್ಲಿ ಶಿಲ್ಪಗಳನ್ನು ಕಂಡರಿಸಲಾಗಿದೆ. ಈ ಪಟ್ಟಿಕೆಯ ಮಧ್ಯಭಾಗದಲ್ಲಿ ದೊಡ್ಡ ಶಿವಲಿಂಗವನ್ನು ಚಿತ್ರಿಸಲಾಗಿದ್ದು, ಅದರ ಕೆಳಭಾಗದಲ್ಲಿ ಶಿವಲಿಂಗವನ್ನು ಹೊತ್ತು ಕುಳಿತ ನಂದಿಯ ಶಿಲ್ಪವನ್ನು ಚಿತ್ರಿಸಲಾಗಿದೆ. ನಂದಿವಾಹನ ಶಿವಲಿಂಗದ ಬಲಭಾಗದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಹಸುವಿನ ಶಿಲ್ಪವಿದೆ. ಎಡಭಾಗದಲ್ಲಿ ದೊಡ್ಡ ನಂದಿಯ ಶಿಲ್ಪವಿದೆ. ಇದರ ಕೆಳಭಾಗದಲ್ಲಿ ಒಂದು ಅಧಿಷ್ಠಾನದ ಮೇಲೆ ನಿಂತಿರುವ ನಂದಿಯ ಶಿಲ್ಪವಿದೆ. ಇಡೀ ಪಟ್ಟಿಕೆಯ ಶಿಲ್ಪದ ಚಿತ್ರಣವೇ ಅತ್ಯಂತ ಕೌತುಕ ಹಾಗೂ ಅಪರೂಪದ ಉದಾಹರಣೆಯಾಗಿದೆ.


ಶಾಸನದ ಮಹತ್ವ :

ಈ ಶಾಸನ ಕರ್ನಾಟಕದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲಿ ಬಹಳ ಮಹತ್ವಪೂರ್ಣವಾದ ಒಂದು ಶಾಸನವಾಗಿದೆ. ಶಾಸನದ ಕೆಳಗಿನ ಪಟ್ಟಿಕೆಯಲ್ಲಿ ಚಿತ್ರಿಸಿರುವ ಆಲಂಕೃತ ನಂದಿವಾಹನ ಶಿವಲಿಂಗವು ಸಾಂಕೇತಿಕವಾಗಿ ಆಳುಪ ಚಕ್ರವರ್ತಿ ಸೋಯಿದೇವನ ಪ್ರತಿರೂಪವಾಗಿದೆ. ಸೋಯಿದೇವನ ಹೆಚ್ಚಿನ ಶಾಸನಗಳಲ್ಲಿ ಆತನನ್ನು ಬಸವ ಶಂಕರ ಸೋಯಿದೇವನೆಂದೇ ಹೆಸರಿಸಲಾಗಿದೆ. ಚಿತ್ರಿತ ಶಿಲ್ಪದ ನಂದಿ ಆತನ ಬಸವ ಎಂಬ ಬಿರುದಿನ ಸಂಕೇತವಾದರೆ, ಶಿವಲಿಂಗವು ಶಂಕರ ಎಂಬ ಹೆಸರಿನ ಸಂಕೇತವಾಗಿದೆ. ಈ ಶಿಲ್ಪದ ಬಲಭಾಗದಲ್ಲಿ ಹಾಲೂಡಿಸುತ್ತಿರುವ ಹಸುವಿನ ಚಿತ್ರವು ಬ್ರಾಹಣ ಭೋಜನಕ್ಕೆ ನೀಡಿದ ದಾನದ ಸಂಕೇತವಾಗಿದೆ. ಹುಯ್ಯಾರು ಇಂದಿಗೂ ನಂದಿ ಪಂಥದ ಪ್ರಮುಖ ನೆಲೆಯಾಗಿದೆ. ಎಡಭಾಗದಲ್ಲಿ ನಿಂತಿರುವ ದೊಡ್ಡನಂದಿಯು ಹ್ಯಾಗುಳಿಯ ಶಿಲ್ಪವಾಗಿದ್ದು, ಅದರ ಕೆಳಭಾಗದಲ್ಲಿ ಪೀಠದ ಮೇಲೆ ನಿಂತಿರುವ ಚಿಕ್ಕ ನಂದಿಯು ಗೆಂಡದ ಹ್ಯಾಗುಳಿಯ ಸಂಕೇತವಾಗಿದೆ. ಇದರಿಂದ ಪಟ್ಟಿಕೆಯಲ್ಲಿ ಚಿತ್ರಿತ ಶಿಲ್ಪಗಳು ಇತರೆ ಶಾಸನಗಳಲ್ಲಿ ಕಂಡು ಬರುವ ಶಿವಲಿಂಗ, ನಂದಿ, ಸೂರ್ಯ-ಚಂದ್ರ ರ ಶಿಲ್ಪಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಸ್ಥಳೀಯ ಸಂಸ್ಕೃತಿಯ ಪ್ರಾತಿನಿಧಿಕ ಚಿತ್ರಣಗಳಾಗಿವೆ ಎಂದು ನಿರ್ಧರಿಸಬಹುದಾಗಿದೆ.


ಅರ್ಧ ಭೂಮಿಯಲ್ಲಿ ಹೂತು ಹೋಗಿದ್ದ ಈ ಶಾಸನದಕಲ್ಲನ್ನು ಅಗೆದು ತೆಗೆದು ಅಧ್ಯಯನಕ್ಕೆ ಸಹಕರಿಸಿದ ನನ್ನ ವಿದ್ಯಾರ್ಥಿಗಳಾದ ಗೌತಮ್, ಶ್ರೇಯಸ್, ಕಾರ್ತಿಕ್ ಮತ್ತು ರವೀಂದ್ರ ಕುಷ್ವಾರಿಗೆ ನನ್ನ ಮನದಾಳದ ಅಭಿನಂದನೆಗಳು. ಅಧಿಕೃತವಾಗಿ ಶಾಸನಾಧ್ಯಯನಕ್ಕೆ ಆಹ್ವಾನಿಸಿದ 76 ಹಾಲಾಡಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಚೋರಡಿ ಅಶೋಕ್ ಶೆಟ್ಟಿಯವರಿಗೆ, ಹುಯ್ಯಾರುವಿನ ಮುರುಳೀಧರ ಶೆಟ್ಟಿ ಮತ್ತು ರಾಜೀವ್ ಶೆಟ್ಟಿಯವರಿಗೆ ನಾನು ಅಭಾರಿಯಾಗಿದ್ದೇನೆ.

- ಮುರುಗೇಶ್‌ ಟಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top