ಕ್ಯಾಲೆಂಡರ್ ಜೊತೆ ನಮ್ಮ ಯೋಚನೆಗಳು ಬದಲಾಗಲಿ

Upayuktha
0

 



ಡಿಸಂಬರ್ 31 ಗಂಟೆ ಹನ್ನೆರಡು ತೋರಿಸಿದ್ದೇ ತಡ ಎಲ್ಲರೂ ಹ್ಯಾಪಿ ನ್ಯೂ ಇಯರ್, ಹ್ಯಾಪಿ ನ್ಯೂ ಇಯರ್ಅಂತ ಕೂಗಿದ್ದೇ ಕೂಗಿದ್ದು, ಮೊಬೈಲ್ ಹಿಡಿದು ಫೋನ್, ಮೆಸೇಜ್ ಮಾಡಿದ್ದೇ ಮಾಡಿದ್ದು. ನಂತರ  ಕೇಕ್ ಕಟ್ ಮಾಡಿ ಕೂಗು, ನಗು, ಕೇಕೆ ಹಾಕಿ ಎಲ್ಲರಿಗೂ ಹಂಚಿ, ಕೈಲಿದ್ದ ಕೇಕ್ ಪಕ್ಕದವರ ಮುಖದ ಮೇಲೂ ಹಚ್ಚಿ, ರಾಗ ತಾಳವಿಲ್ಲದ ಕರ್ಕಶ ಹಾಡುಗಳನ್ನು ಹಾಕಿ ಮನಸು ಬಂದಂತೆ ಹೆಜ್ಜೆ ಹಾಕುತ್ತಾ, ಗಂಡು ಹೆಣ್ಣು ಎಂಬ ಭೇದವಿಲ್ಲದೆ ಕುಡಿದು ಕುಪ್ಪಳಿಸಿ ತಡ ರಾತ್ರಿ ಮನೆಗೆ ಹೋಗುವುದು. ಗಂಡ, ಮಗ, ಮಗಳು ಇನ್ನು ಮನೆಗೆ ಬಂದಿಲ್ಲ ಅಂತ ದಾರಿ ಕಾಯಿತ್ತಿರುವ ಅಪ್ಪ-ಅಮ್ಮ, ಹೆಂಡತಿ, ಮಕ್ಕಳ ಸಂಕಟ ಯಾರಿಗೂ ಗೊತ್ತಾಗಲ್ಲ. ಇದು ನಮ್ಮ ಇಂದಿನ ಪೀಳಿಗೆಯ ಹೊಸ ವರ್ಷ ಆಚರಣೆ! ಸಾರ್ವಜನಿಕವಾಗಿ ಇಷ್ಟೆಲ್ಲಾ ಗದ್ದಲಗಳನ್ನು ಮಾಡಿಕೊಂಡು ಆಚರಿಸಿದ ಈ ಸಂದರ್ಭ ಕೇವಲ ಕ್ಷಣಿಕ. ಈ ರೀತಿಯ ಆಚರಣೆಯ ಮುಂದೆ ನಿಜವಾದ ಹೊಸ ವರ್ಷದ ಅರ್ಥ ಮರೆತೇ ಹೋಗಿದೆ.


ವರ್ಷದ ಮೊದಲ ದಿನ ಹೇಗೆ ಇರ್ತೀವಿ ಹಾಗೆ ವರ್ಷವಿಡೀ ಇರ್ತೀವಿ ಅನ್ನೋ ನಂಬಿಕೆ ಇನ್ನೂ ನಮ್ಮಂತವರ ಮನಸಲ್ಲಿ ಇದೆ. ಅದಕ್ಕೆ ಮೊದಲ ದಿನ ನಮ್ಮವರ ಜೊತೆ, ಕುಟುಂಬದವರ ಜೊತೆ, ನೆಚ್ಚಿನ ಸ್ನೇಹಿತರ ಜೊತೆ ಖುಷಿ ಖುಷಿಯಿಂದ ಕಳಿಯಬೇಕು. ದೇವಸ್ಥಾನಕ್ಕೆ ಹೋಗಿ ಭಗವಂತನಲ್ಲಿ ಪ್ರಾರ್ಥಿಸಬೇಕು. ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆದು ದಿನ ನಿತ್ಯದ ಕೆಲಸದಲ್ಲಿ ತೊಡಗಬೇಕು. ಇಂದು ಯಾವುದಾದ್ರು ಹೊಸ ಕೆಲಸದ ಪ್ರಾರಂಭವಾಗಬೇಕುಹೀಗೆ ನಮ್ಮ ಹೊಸ ವರ್ಷ ಶುರು ಮಾಡೋಣ.

 

ಹೊಸ ವರ್ಷ ನಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ಉಲ್ಲಾಸ,ಹೊಸ ಹುಮ್ಮಸ್ಸು, ಹೊಸ ನೆನಪು ತರಲಿ. ಹೊಸ ವರ್ಷಕ್ಕೆ ಹೊಸ ಬದುಕನ್ನು ಕಟ್ಟಿಕೊಳ್ಳೋಣ. ಹಳೆಯ ಕಹಿನ್ನು ಮರೆತು ಖುಷಿಯಿಂದ ಹೆಜ್ಜೆ ಇಡೋಣ. ಸಾಧಿಸಬೇಕಾದ ಗುರಿಯನ್ನು ಮುಟ್ಟುವ ತನಕ ಶ್ರಮಿಸೋಣ. ಹೊಸ ಆಲೋಚನೆ, ಯೋಜನೆಗಳು ಚಿಗುರೊಡೆಯಲಿ. ಮುಂಬರುವ ವರ್ಷ ನಮ್ಮ ಬದುಕಿನಲ್ಲಿ ಬರೀ ಖುಷಿಯೊಂದೇ ತುಂಲಿ. ಕೊರೊನಾ ಮಹಾಮಾರಿಯ ಅಬ್ಬರ ನಿಲ್ಲಲಿ. ನೋವೆಲ್ಲಾ ಮರೆಯಾಗಿ ಖುಷಿಯೊಂದೇ ಬಾಳಿನಲ್ಲಿ ನೆಲೆಯಾಗಲಿ. ಕಲಿಸಿದ ಗುರುಗಳಿಗೆ, ಹಿತ ಬಯಸಿದ ಹಿತೈಷಿಗಳಿಗೆ, ಸದಾ ಜೊತೆಯಾಗಿ ನಿಂತ ಕುಟುಂಬ ಮತ್ತು ಸ್ನೇಹಿತರಿಗೆ, ಅರ್ಧದಲ್ಲೇ ಕೈ ಬಿಟ್ಟು ಹೋಗಿ ಜೀವನದ ಕಹಿ ಸತ್ಯ ತಿಳಿಸಿಕೊಟ್ಟ ನಾನು ನಂಬಿದ ಕೆಲವು ಆತ್ಮೀಯ ಜೀವಗಳಿಗೆ ಹೊಸ ವರ್ಷದ ಶುಭಾಶಯಗಳು.

 

ಹೊಸತನವನ್ನು ಹೊತ್ತು ತರುವ ಖುಷಿಯ ಹೊಸ ವರ್ಷ ಮತ್ತೆ ಬಂದಿದೆ. ಇದು 2022 ಕ್ಕೆ ವಿದಾಯ ಹೇಳಿ 2023 ನೇ ವರ್ಷವನ್ನು ಹರ್ಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ. ವರ್ಷದಿಂದ ಗೋಡೆಯ ಮೊಳೆಗೆ ನೇತಾಡಿಕೊಂಡು ತಿಂಗಳಿಗೊಮ್ಮೆ ಮಗ್ಗಲು ಬದಲಿಸಿಕೊಂಡಿದ್ದ ಕ್ಯಾಲೆಂಡರ್ ಗೆ ವಿಶ್ರಾಂತಿ ನೀಡುವ ಕ್ಷಣ. ಹೊಸ ಕ್ಯಾಲೆಂಡರ್ ಜೊತೆಗೆ ನಮ್ಮ ಯೋಚನೆಗಳು, ಯೋಜನೆಗಳು, ಕನಸುಗಳು ಹೊಸತಾಗಿರಲಿ, ಬದುಕಿಗೆ ಭರವಸೆ ಬೆಳಕಾಗಿರಲಿ.


ಹಳೆ ವರ್ಷ ಮುಗಿದು ಹೊಸ ವರ್ಷ ಬರುವ ಸಂದರ್ಭ, ಕಳೆದ ವರ್ಷದಲ್ಲಿ ನಾನು ಏನೇನು ಮಾಡಿದೆ, ಎಷ್ಟು ಜನಕ್ಕೆ ಒಳ್ಳೇದು ಮಾಡಿದೆ, ನಿಮ್ಮ ಜೊತೆ ಎಷ್ಟು ಜನ ಇದ್ರು, ವರ್ಷ ಮುಗಿಯುವಷ್ಟರಲ್ಲಿ ಎಷ್ಟು ಜನ ಇನ್ನೂ ನಿಮ್ ಜೊತೆಯಲ್ಲೇ ಇದ್ದಾರೆ, ಎಷ್ಟು ಜನ ನಿಮ್ಮನ್ನು ದಾಟಿ ಹೋದ್ರು, ಎಷ್ಟು ಜನ ನಿಮ್ಮನ್ನ ಉಪಯೋಗಿಸಿಕೊಂಡು ಹೋದ್ರು ಅಂತ ನಿಮಗೆ ನೀವೇ ಪ್ರಶ್ನೆ ಕೇಳಿಕೊಳ್ಳಿ. ನೀವು ತಿಳಿಯಬೇಕಾಗಿದ್ದು ಇಷ್ಟೆ, ನಿಮಗೆ ನೀಷ್ಟೇ ಶಾಶ್ವತ, ನಿಮಗೆ ನೀವೆ ರಾಜ, ರಾಣಿ. ಇದರ ಮಧ್ಯೆ ಒಂದಷ್ಟು ಜನ ಬರ್ತಾರೆ, ಅವಶ್ಯಕತೆ ಮುಗಿದ ಮೇಲೆ ಹೋಗ್ತಾರೆ. ಬಂದವರಿಗೆ ಹಾಯ್ ಹೇಳಿ, ಬಿಟ್ಟು ಹೋಗುವವರಿಗೆ ಗುಡ್ ಬೈ ಹೇಳಿ. ಯಾರನ್ನು ದ್ವೇಷಿಸುವುದು ಬೇಡ. ಜೊತೆಗೆ ಇದ್ದವರಿಗೆ, ಬಿಟ್ಟೋದವರಿಗೆಲ್ಲ ಗೌರವ, ಪ್ರೀತಿ ಕೊಡೋಣ. ಈ ಹೊಸ ವರ್ಷ ಇನ್ನೊಂದಷ್ಟು ಜನರ ಪ್ರೀತಿ ಗೌರವವನ್ನ ಸಂಪಾದಿಸೋಣ. ಬೇರೆಯವರಲ್ಲಿ ಇರುವ ಒಳ್ಳೆತನ ನೋಡಿ ಕಲಿಯೋಣ. ಬೇರೆಯವರಿಗೆ ಒಳ್ಳೇದು ಬಯಸೋಣ. ಇದ್ದಿದ್ದರಲ್ಲೇ ಹಂಚಿ ತಿನ್ನೋಣ. ನಾಲ್ಕು ದಿನದ ಬದುಕು ಅಷ್ಟೇ.


ಹೊಸ ಕ್ಯಾಲೆಂಡರ್ ಗೆ ಅಷ್ಟೇ ಹೊಸ ವರ್ಷ, ನಮಗೆಲ್ಲ ಯುಗಾದಿನೇ ಹೊಸ ವರ್ಷ. ಆದ್ರೂ ಸಂಭ್ರಮಿಸುವವರ ಜೊತೆ ನಾವು ಸಂಭ್ರಮಿಸುವದರಲ್ಲಿ ತಪ್ಪೇನಿಲ್ಲ ಅಲ್ವಾ. ಹೊಸ ವರ್ಷ ಬರೀ ಕ್ಯಾಲೆಂಡರ್ ಬದಲಾಯಿಸುವ ಕ್ಷಣ ಅಲ್ಲ. ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡಾ ಹೌದು. ಮತ್ತೆ ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಜತೆಗೆ, ಕಳೆದ ವರ್ಷದತ್ತ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಹೀಗೆ ತಿರುಗಿ ನೋಡಿದಾಗ ಮಾತ್ರ ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು, ಆದ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಯನ್ನು ಬದಲಾಯಿಸಿಕೊಳ್ಳಲು ಸಾಧ್ಯ.


-ಸರಸ್ವತಿ ವಿಶ್ವನಾಥ್ ಪಾಟೀಲ್. ಕಾರಟಗಿ


Post a Comment

0 Comments
Post a Comment (0)
Advt Slider:
To Top