ಮೂಡಬಿದಿರೆ: ಆಳ್ವಾಸ್ ಕಾಲೇಜು ಆಯೋಜಿಸಿದ್ದ 2022ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿಸಿರಿ ವೇದಿಕೆಯಲ್ಲಿ ಹೆಸರಾಂತ ಹಾಸ್ಯ ಕಲಾವಿದರರಾದ ನರಸಿಂಹ ಜೋಶಿ ತಂಡದ ‘ಹಾಸ್ಯ ರಸಾಯನ’ ಕಾರ‍್ಯಕ್ರಮ ಬದುಕಿನ ವೈರುಧ್ಯಗಳನ್ನು ಹಾಸ್ಯಮಿಶ್ರಿತ ಶೈಲಿಯಲ್ಲಿ ಅನಾವರಣಗೊಳಿಸಿತು.
ನರಸಿಂಹ ಜೋಶಿ ಅವರು ಹಾಸ್ಯ ಪ್ರೇಮಿಗಳ ಮನ ಸೆಳೆಯಲು ದೇಶದ ಹೆಸರಾಂತ ಜನಪ್ರಿಯ ವ್ಯಕ್ತಿತ್ವಗಳಾದ ಯಶ್, ರವಿ ಬೆಳೆಗರೆ, ನರೇಂದ್ರ ಮೋದಿ, ರಜನಿ ಕಾಂತ್, ಹಾಗು ಡಾ.ರಾಜ್‌ಕುಮಾರ್ ರಂತೆ ಅನುಕರಣೆ ಮಾಡಿದರು. ‘ನಮ್ಮ ಮನೆಯಲಿ ದಿನವೂ ಮಿನುಗೊ ಚೈತ್ರವೇ’ ಎಂಬ ಹಾಡಿನ ಸಾಹಿತ್ಯವನ್ನು ಪ್ರಸ್ತುತ ದಿನಕ್ಕೆ ಬದಲಾಯಿಸಿ ಹಾಸ್ಯಬದ್ಧವಾಗಿ ಹಾಡುವುದರ ಮೂಲಕ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದರು.
ಆ ಕಾಲ ಚೆಂದವೋ ಈ ಕಾಲ ಚೆಂದವೋ ಎಂಬ ಜಾನಪದ ಗೀತೆಯನ್ನು ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಹಿಂದಿನ ಕಾಲದ ಜೀವನ ಶೈಲಿಯನ್ನು ನವಯುಗಕ್ಕೆ ಹೋಲಿಸಿ ಬಿಂಬಿಸಿದ ಶೈಲಿ ಮೆಚ್ಚುಗೆಗೆ ಪಾತ್ರವಾಯಿತು. ಹಳ್ಳಿಗಳಲ್ಲಿ ಹೆಣ್ಣು ಕೇಳಲು ಹೋದಾಗ ನಡೆಯುವ ಕೆಲವು ಪ್ರಸಂಗಗಳನ್ನು ಉಲ್ಲೇಖಿಸಿ ರಂಜಿಸಿದರು.
‘ನನ್ನ ಗೆಳತಿ ನನ್ನ ಗೆಳತಿ’ ಎಂದು ಉತ್ತರ ಕರ್ನಾಟಕ ಶೈಲಿಯ ಜಾನಪದ ರಂಗ ಗೀತೆಯನ್ನು ಹಾಡುತ್ತ ನೆರೆದಿದ್ದ ಪ್ರೇಕ್ಷಕರನ್ನು ಕೂತಲ್ಲೇ ಕುಣಿಸಿದರು. ಜೊತೆಗೆ ಅವರ ಹಾಸ್ಯ ಪ್ರಜ್ಞೆಯಿಂದ ಜನಸಮೂಹವನ್ನು ಸೆಳೆದರು.
ವರದಿ: ತೇಜಶ್ವಿನಿ ಕಾಂತರಾಜ್
ದ್ವಿತೀಯ ವರ್ಷ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರ : ವಿನೀತ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ