ಕಾರ್ಕಳ: ತುಳುನಾಡಿನ ಮೂಲ ಪರಂಪರೆಯಲ್ಲಿ ಪ್ರಥಮವಾಗಿ ಆರಾಧಿಸಿಕೊಂಡು ಬಂದ ಪ್ರಮುಖ ಶಕ್ತಿಯಾದ ಬೆರ್ಮರು ತುಳುನಾಡಿನ ಉದ್ದಗಲಕ್ಕೂ ನಾನಾ ಹೆಸರುಗಳೊಂದಿಗೆ ಆರಾಧಿಸಲ್ಪಡುತ್ತಿದ್ದಾರೆ. ಕುಟುಂಬದ ಆರಾಧನೆಯಲ್ಲಿ, ನಾಗಸಾನಿಧ್ಯದಲ್ಲಿ, ಗರಡಿಗಳಲ್ಲಿ, ಆಲಡೆ ದೇವಸ್ಥಾನಗಳಲ್ಲಿ ಹೀಗೆ ಎಲ್ಲ ಕಡೆಗಳಲ್ಲಿಯೂ ಬೆರ್ಮೆರ್ ಆರಾಧನೆಗೊಳ್ಳುತ್ತಿರುವುದನ್ನು ಕಾಣಬಹುದಾಗಿದೆ ಎಂಬುದಾಗಿ ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಗಳಿಸಿರುವಂತೆ, ಪರಿಸರ ಪ್ರೇಮಿಯಾಗಿ, ಗಾಯಕರಾಗಿ, ಬರಹಗಾರರಾಗಿ ಮತ್ತು ವಾಗ್ಮಿಯಾಗಿಯೂ ಪ್ರಸಿದ್ಧರಾಗಿರುವ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ ಮತ್ತು ಅ.ಭಾ.ಸಾ.ಪ. ಕಾರ್ಕಳ ತಾಲೂಕು ಸಮಿತಿ ಇವುಗಳ ಜಂಟಿ ಆಯೋಜನೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದೊಂದಿಗೆ ಕಾರ್ಕಳದ ಪ್ರಕಾಶ್ ಹೋಟೆಲಿನ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ‘ಅರಿವು-ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ತುಳುನಾಡಿನ ಬೆರ್ಮರು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ತುಳುನಾಡು ವಿವಿಧ ಸಂಸ್ಕೃತಿ, ನಂಬಿಕೆ, ನಡವಳಿಕೆಗಳಿಗೆ ಆಶ್ರಯ ನೀಡಿದ ತಾಣವಾಗಿದ್ದು ಆದಿಯಿಂದಲೇ ಜನರು ಇಲ್ಲಿ ಪ್ರಕೃತಿಯ ಎಲ್ಲ ಸ್ವರೂಪಗಳಲ್ಲಿಯೂ ದೇವತಾ ಸಾನಿಧ್ಯವನ್ನು ಕಂಡುಕೊಂಡವರು. ಹಾಗೆ ಆರಾಧಿಸಿಕೊಂಡು ಬಂದ ವಿಶ್ವಪ್ರಜ್ಞೆಯ ಆ ಶಕ್ತಿಯನ್ನು ಬೆರ್ಮೆರ್ ಎಂದು ಗುರುತಿಸಿಕೊಂಡರು. ಬೆರ್ಮೆರ್ ಅನ್ನುವ ಶಕ್ತಿಯೇ ವನದೇವತೆ ಎಂಬುದಾಗಿ ಸಂಶೋಧಕರು, ವಿದ್ವಾಂಸರೂ ಅಭಿಪ್ರಾಯಪಟ್ಟಿದ್ದಾರೆ. ಈ ಶಕ್ತಿಯನ್ನೇ ತುಳುವರು ಬ್ರಹ್ಮಸ್ಥಾನದಲ್ಲಿ ಆರಾಧಿಸಿಕೊಂಡು ಬಂದರು ಎಂದರು.
ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದು, ಅ.ಭಾ.ಸಾ.ಪ.ದ ಗೌರವಾಧ್ಯಕ್ಷರಾದ ಎಸ್.ನಿತ್ಯಾನಂದ ಪೈ, ಅಧ್ಯಕ್ಷರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು. ಶ್ರೀಮತಿ ಮನಿಷಾ ಕಾಮತ್ ಪ್ರಾರ್ಥಿಸಿ ಶ್ರೀಮತಿ ಮಾಲತಿ ವಸಂತರಾಜ್ ಅವರು ಉಪನ್ಯಾಸಕರನ್ನು ಪರಿಚಯಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ ವೀಣಾ ರಾಜೇಶ್ ವಂದಿಸಿದರು.
ವರದಿ: ಸದಾನಂದ ನಾರಾವಿ
ದೂ: 9008978366
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ