ಮಂಗಳೂರಿನಲ್ಲಿ 2 ಲಕ್ಷ ಚದರಡಿ ವಿಸ್ತಾರದ ಇನ್ನೋವೇಶನ್ ಹಬ್ : ಅಶ್ವತ್ಥನಾರಾಯಣ

Upayuktha
0


ಮಂಗಳೂರು : ರಾಜ್ಯದ ಕರಾವಳಿ ತೀರದ ಜಿಲ್ಲೆಗಳಲ್ಲಿ ಉದ್ದಿಮೆಗಳ ಬೆಳವಣಿಗೆಯನ್ನು ಉತ್ತೇಜಿಸಲು ನಗರದಲ್ಲಿ 2 ಲಕ್ಷ ಚದರ ಅಡಿ ವಿಸ್ತಾರದ  'ಮಂಗಳೂರು ಇನ್ನೋವೇಶನ್ ಹಬ್' ಸ್ಥಾಪಿಸಲಾಗುವುದು. ಕಿಯೋನಿಕ್ಸ್ ಮೂಲಕ ಇದನ್ನು ನಿರ್ಮಿಸಲಾಗುವುದು. ಜತೆಗೆ ಮಂಗಳೂರು ಔದ್ಯಮಿಕ ಕ್ಲಸ್ಟರ್ ಗೆ 25 ಕೋಟಿ ರೂಪಾಯಿಗಳ ಬೀಜನಿಧಿ ಕೊಡಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ. ಸಿ ಎನ್. ಅಶ್ವತ್ಥ ನಾರಾಯಣ ಅವರು ಡಿ.17ರ ಶನಿವಾರ ಹೇಳಿದರು.


ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮಂಗಳೂರು ಕ್ಲಸ್ಟರ್ ವತಿಯಿಂದ ಆಯೋಜಿಸಲಾಗಿರುವ ಮಂಗಳೂರು ಟೆಕ್ನೋವಾನ್ಜಾ ಅಂಗವಾಗಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಇನ್ಫೋಸಿಸ್ ಮತ್ತು ಇತರ ಕಂಪನಿಗಳ ಸಹಕಾರ ಪಡೆದು 2 ಲಕ್ಷ ಚದರಡಿ ವಿಸ್ತೀರ್ಣದ ಜಾಗದ ವ್ಯವಸ್ಥೆ ಮಾಡಿಕೊಂಡು 'ಮಂಗಳೂರು ಇನ್ನೋವೇಶನ್ ಹಬ್' ಸ್ಥಾಪಿಸಲು ಅನುವು ಮಾಡಿಕೊಡಲಾಗುವುದು. ಇದು ದಕ್ಷಿಣ ಕನ್ನಡ ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಇಂಬು ನೀಡಲಿದೆ ಎಂದು ತಿಳಿಸಿದರು.


ದಕ್ಷಿಣ ಕನ್ನಡ ಭಾಗವು ಮೊದಲಿನಿಂದಲೂ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಹೆಸರಾಗಿದೆ. ಅದಕ್ಕೆ ಪೂರಕವಾದ ಕಾರ್ಯ ಪರಿಸರ ಇಲ್ಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಮಂಗಳೂರು ವಲಯವನ್ನು ಫಿನ್ ಟೆಕ್ ಹಬ್ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದರು.


ಮಂಗಳೂರು ಕ್ಲಸ್ಟರ್ ನಲ್ಲಿ 50 ಫಿನ್ಟೆಕ್ ಕಂಪನಿಗಳನ್ನು ಸ್ಥಾಪಿಸಬೇಕು ಎನ್ನುವುದು ಸರಕಾರದ ಗುರಿ ಆಗಿದೆ. ಈ ಮೂಲಕ 2030ರ ವೇಳೆಗೆ ರಾಜ್ಯವು ನಡೆಸಲು ಉದ್ದೇಶಿಸಿರುವ 500 ಬಿಲಿಯನ್ ಡಾಲರ್ ವಹಿವಾಟಿನಲ್ಲಿ ಅರ್ಧದಷ್ಟು ಕೊಡುಗೆ ಈ ಭಾಗದ ಉದ್ದಿಮೆಗಳಿಂದಲೇ ಬರುವಂತೆ ಆಗಬೇಕು ಎಂದು ಅವರು ಆಶಿಸಿದರು.


ಬೆಂಗಳೂರು ನಗರವು ದೇಶದ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿರುವಂತೆ ಮಂಗಳೂರು ನಗರವು ದೇಶದ 'ಸಿಲಿಕಾನ್ ಬೀಚ್' ಎಂದು ಹೆಸರಾಗಬೇಕೆಂದು ಇದೇ ಸಂದರ್ಭದಲ್ಲಿ ಅವರು ಆಶಿಸಿದರು.

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top