ಅಂಧತ್ವದಲ್ಲಿಯೂ ಸಂಗೀತ ಆಸ್ವಾದಿಸಿದ 'ವಿಜಯ್ - ಪೂರ್ಣ'

Upayuktha
0

ಮೂಡುಬಿದಿರೆ: ಒಂದೆಡೆ ಬೃಹದಾಕಾರದ ವೇದಿಕೆ, ಅಲ್ಲಿ ಹಾರ್ಮೋನಿಯಂ ಸ್ವರನಾದ, ತಬಲದ ಬೀಟ್ಸ್ಗೆ ತಲೆತೂಗುವ ಕಲಾಪ್ರೇಮಿಗಳು, ಇನ್ನೊಂದೆಡೆ, ಹಾರ್ಮೋನಿಯಂನಲ್ಲಿ ನುಡಿಸುವ ಸದ್ದನ್ನು ಕೇವಲ ಆಲಿಸಿಕೊಂಡೇ ಭೂಪ ರಾಗದ 'ಸರೆ ಗಪ' ಎಂದು ಥಟ್ ಅಂತ ಗುರುತಿಸುವ ಮುಗ್ಧ ಯುವ ಮನಸ್ಸುಗಳು.


ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ‘ನುಡಿಸಿರಿ’ ವೇದಿಕೆಯಲ್ಲಿ.


ಸಾಮಾನ್ಯವಾಗಿ ಅಂಧರಿಗೆ ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಕೇವಲ ಆಲಿಸುವಿಕೆಯಿಂದಲೇ ಸಂಗೀತದ ಸಂಪೂರ್ಣ ಮಾಹಿತಿ ಹೇಳುವ ಇಬ್ಬರು ಪ್ರತಿಭಾನ್ವಿತರು ಜಾಂಬೂರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂಲತಃ ಬಿಜಾಪುರ ಮತ್ತು ತುಮಕೂರಿನ ವಿಜಯ್ ಕುಮಾರ್ ಮತ್ತು ಪೂರ್ಣಚಂದ್ರ ಹುಟ್ಟಿನಿಂದಲೇ ಅಂಧರು. ದೈಹಿಕ ನ್ಯೂನ್ಯತೆಯನ್ನು ಮೀರಿ ಸಂಗೀತದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಯಾವುದೇ ಸಂಗೀತ ಕಾರ್ಯಕ್ರಮವಿದ್ದರೂ ಬಲು ಉತ್ಸುಕರಾಗಿ ಸಂಗೀತ ಆಲಿಸುವುದಕ್ಕೆ ತೆರಳುತ್ತಾರೆ. ಇವರ ವೈಶಿಷ್ಟ್ಯವೆಂದರೆ ಯಾವುದೇ ಸಂಗೀತ ವಾದನದ ಸ್ವರ ಕೇಳಿದರೂ ಯಥಾವತ್ತಾಗಿ ಇದೇ ರಾಗದ ಇದೇ ಸ್ವರ ಎಂದು ಗುರುತಿಸುವಂತಹ ಚಾಕಚಕ್ಯತೆ ಹೊಂದಿದ್ದಾರೆ.


ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿರುವ ಇವರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದಲ್ಲದೇ ತುಮಕೂರಿನ ಪೂರ್ಣಚಂದ್ರ ಕೇವಲ ಬೇರೆ ವ್ಯಕ್ತಿಗಳು ವಾದ್ಯ ನುಡಿಸುವುದನ್ನು ಕೇಳಿಸಿಕೊಂಡೇ ಕೊಳಲು ವಾದನವನ್ನು ಕಲಿತಿದ್ದಾರೆ. ಇದರ ಜೊತೆಗೆ ಹಾರ್ಮೋನಿಯಂ, ತಬಲ ಕೀಬೋರ್ಡ್ ಮತ್ತು ವಯೋಲಿನ್ ಕೂಡ ನುಡಿಸುತ್ತಾರೆ.


ಸಂಗೀತ ಗಾಯನ ಮತ್ತು ವಾದನದಲ್ಲಿ ವಿಶೇಷ ಒಲವು ಹೊಂದಿರುವ ವಿಜಯ್ ಕುಮಾರ್ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾಗಿ ನಾಗರಿಕ ಸೇವೆ ಮಾಡುವ ಆಸೆ ಹೊಂದಿದ್ದಾರೆ. ಇನ್ನು ಪೂರ್ಣಚಂದ್ರ ಅವರು ಕಾಮರ್ಸ್ ಓದುತ್ತಿದ್ದು, ಚಾರ್ಟೆಡ್ ಅಕೌಂಟೆಂಟ್ ಆಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.


ಚಿತ್ರ-ವರದಿ: ಭಾರತಿ ಹೆಗಡೆ

ದ್ವಿತೀಯ ವರ್ಷ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top