ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಸುವರ್ಣ ವರ್ಷಾಚರಣೆಯ ಅಂಗವಾಗಿ ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿ, ವಾಣಿಜ್ಯ ಹಾಗೂ ಗಣಕವಿಜ್ಞಾನ ವಿಭಾಗಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸುಗ್ಗಿ ನೇಜಿನಾಟಿ ಕಾರ್ಯಕ್ರಮವು ಉಜಿರೆ ಗ್ರಾಮದ ದೊಂಪದಪಲ್ಕೆಯ ಡೀಕಯ್ಶ ಪೂಜಾರಿ ಅವರ ಭತ್ತದ ಗದ್ದೆಯಲ್ಲಿ 13.12.2022ರಂದು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ. ಎಸ್ ಹಾಗೂ ದೀಪಾ ಆರ್ ಪಿ, ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯದ ಸಹಾಯಕರಾದ ಪರಮೇಶ್ವರ್ ಅವರ ಸಹಕಾರದೊಂದಿಗೆ ಆಯೋಜಿಸಿದ್ದರು. ಮರೆಯಾಗುತ್ತಿರುವ ಕೃಷಿ ಪದ್ಧತಿಗಳು, ಬೇಸಾಯದ ಹಂತಗಳು, ಭೂಮಿ ತಾಯಿಯ ಸೇವೆಯ ಪ್ರಯೋಜನಗಳು ವಿದ್ಯಾರ್ಥಿಗಳಿಗೆ ಮನವರಿಕೆಯಾಗಬೇಕು ಎಂಬ ಮೂಲ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಹಾಗೂ ವಾಣಿಜ್ಯ ಮತ್ತು ಗಣಕ ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು, ಊರಿನ ಹಿರಿಯರು ಉತ್ಸಾಹದಿಂದ ಭಾಗವಹಿಸಿದ್ದರು.