ಎದೆ ಹರವಿನ ನಡುವೆ ಚುಕ್ಕಿ ಇಟ್ಟು ರಂಗೋಲಿ ಬರೆಯುತ್ತಿದ್ದವಳಿಗೆ
ನಿಜಕ್ಕೂ ರಂಗೋಲಿ ಬರೆವಾಗ
ಚುಕ್ಕಿ ತಪ್ಪಿ ಕೈ ನಡುಗಿತ್ತು.
ನಿನ್ನ ನೆನೆಯುತ್ತ ಕದಪು ರಂಗೇರಿಸಿಕೊಂಡವಳಿಗೆ ಬಣ್ಣಗಳ
ಗೊಡವೆ ಬೇಡವಾಯ್ತು
ನಿನ್ನದೇ ತಪನೆ, ಮನದ ತುಂಬಾ ನಿನ್ನ ನೆನಪುಗಳದೆ
ಹಾವಳಿ ನಿನ್ನ ತೆಕ್ಕೆಗೆ ಸೇರಿ, ನಿನ್ನ ಕಣ್ ದೀಪಕ್ಕೆ
ನನ್ನೊಲವ ತೈಲ ಧಾರೆ ಎರೆದು ನಂದಾದೀಪ ಉರಿಸುವ
ನನಗೆ, ನಿತ್ಯವೂ ದೀಪಾವಳಿ...
ಬೆನ್ನ ಹರವಿನಲ್ಲಿ ಬೆರಳಾಟ ಆಡುತ್ತಾ ಅದೇನೋ ಕೇಳಿದೆ,
ಅವನುತ್ತರಕ್ಕೆ ನನ್ನದೂ ಒಂದು ಪ್ರತ್ಯುತ್ತರ,
ಉತ್ತರ ನೀಡಿದಮೇಲಷ್ಟೇ ಅರ್ಥವಾಯ್ತು ನಾನು ಹೆಣ್ಣೆಂದು,
ಹುದುಗಿಸಿದ ಮುಖ ಮೇಲೆತ್ತಿ ಅವ ನನ್ನ ನೋಡಿ ನಕ್ಕಾಗ
ನಾ ನಾಚಿಕೆಯಲಿ ಮಿಂದೆದ್ದಿದ್ದೆ,
ಮತ್ತವನು ನನ್ನ ಪ್ರೇಮದಲ್ಲಿ...
ಹೆಚ್ಹೆಚ್ಚು ಅರ್ಥವಾಗದೆ ಹಾಗೆಯೇ ಉಳಿದುಬಿಡು,
ಅರ್ಥಮಾಡಿಕೊಳ್ಳುವ ನೆಪಕ್ಕೆ ಮತ್ತಷ್ಟು ಹತ್ತಿರವಾಗುವ
ಪ್ರಯತ್ನ ಮಾಡುತ್ತಲೇ ಇರುತ್ತೇನೆ,
ಹಾಂ, ಹಾಗೆಯೇ ನನ್ನನ್ನು ಹೆಚ್ಚು ಅರ್ಥ ಮಾಡಿಕೊಳ್ಳುವ
ಪ್ರಯತ್ನಕ್ಕಿಳಿಯಬೇಡ
ನನ್ನೊಳಗೆ ನಿನ್ನ ಹೊರತು ಬೇರೇನೂ ಇರಲು ಸಾಧ್ಯವಿಲ್ಲ!
- ಶ್ವೇತಾ ಭಿಡೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ