ಪುತ್ತೂರು : ಗುರುಕೇಂದ್ರಿತವಾಗಿದ್ದ ಶಿಕ್ಷಣ ವ್ಯವಸ್ಥೆ ಇಂದು ಪೋಷಕ ಕೇಂದ್ರಿತವಾಗಿಯೂ ಉಳಿಯದೇ ಬರೀ ಯಂತ್ರ ಕೇಂದ್ರಿತವಾಗಿ ಮಾರ್ಪಟ್ಟಿದೆ. ಹಾಗಾಗಿ ನಾವು ಭಾವನಾತ್ಮಕ ಸಂಬಂಧಗಳನ್ನು, ನೈತಿಕ ಜವಾಬ್ದಾರಿಗಳನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದೇವೆ ಎಂಬುದಾಗಿ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು
ಉಜಿರೆ ಶ್ರೀ ಧ. ಮಂ. ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಕೋಶ ಹಾಗೂ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ 'ಚಿಂತನ ಸಿರಿ' ಸಾಹಿತ್ಯ ಸಂಸ್ಕೃತಿ ಮನೋಲ್ಲಾಸ ಕಾರ್ಯಕ್ರಮದಲ್ಲಿ 'ದೇಸಿ ಜ್ಞಾನ ಪರಂಪರೆ ಮತ್ತು ಶಿಕ್ಷಣ' ಎಂಬ ವಿಷಯದ ಕುರಿತಾಗಿ ಮಾತನಾಡುತ್ತಿದ್ದರು.
ಹಿಂದೆ ಗ್ರಾಮಗಳಲ್ಲಿ ಒಬ್ಬರ ಭಾವನೆಗಳಿಗೆ ಇನ್ನೊಬ್ಬರು ಸ್ಪಂದಿಸುವಂತಹ ಪ್ರಪಂಚವಿತ್ತು. ಆದರೆ ಈಗಿನ ಕಾಲದಲ್ಲಿ ಹಳ್ಳಿಗಳ ಸಂಬಂಧ, ಸಹವಾಸ ಶಿಥಿಲವಾಗುತ್ತಿದೆ ಎಂದು ಅವರು ನುಡಿದರು.
ಹೊಸ ತಲೆಮಾರಿಗೆ ಸುಸ್ಥಿರ ಭೂಮಿಯನ್ನು ಹಸ್ತಾಂತರಿಸಲು ನಮ್ಮ ಪರಂಪರೆಯಲ್ಲಿನ ಹೊಳಹನ್ನು ತುಂಬುವ ಮಾರ್ಗ ಹುಡುಕುವುದು ಅನಿವಾರ್ಯವಾಗಿದೆ. ಅನುಭವ ಸತ್ಯದಿಂದ ಮಾತ್ರ ಬರದೆ ಸಂಬಂಧ ,ಸಹವಾಸಗಳ ಮೂಲಕ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಸ್ತುತ ದಿನದಲ್ಲಿ ಪರಿಸರವೂ ಸೇರಿದಂತೆ ಎಲ್ಲವೂ ಕಲುಷಿತವಾಗಿದೆ. ಇದಕ್ಕೆ ಮನಸ್ಸು ಕೂಡ ಹೊರತಾಗಿಲ್ಲ. ಮುಂದಿನ ತಲೆಮಾರಿಗೆ ವಿಷರಹಿತ ಪರಿಸರ ಹಾಗೂ ಮನಸ್ಸನ್ನು ನೀಡುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎ.ಜಯಕುಮಾರ್ ಶೆಟ್ಟಿ, ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ. ಯದುಪತಿ ಗೌಡ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ ವೈ, ಪ್ರಾಧ್ಯಾಪಕ ಹಳೆಮನೆ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಜಯಶ್ರೀ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ