ಜಗತ್ತಿಗೆ ಮಂಗಳವನ್ನುಂಟು ಮಾಡುವ ಏಕಮೇವ ದೇಶ ಭಾರತ: ಡಾ. ಪ್ರಭಾಕರ ಭಟ್‌ ಕಲ್ಲಡ್ಕ

Upayuktha
0

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ


ಪುತ್ತೂರು: ದೇಶ ಹಾಗೂ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಲು ಬಿಸಿನೆತ್ತರಿನ ಚಿಂತನಾಶೀಲ ಹಾಗೂ ಕ್ರಿಯಾಶೀಲ ವಿದ್ಯಾರ್ಥಿ ಸಮುದಾಯದ ಅಗತ್ಯವಿದೆ. ಜಗತ್ತಿಗೆ ಶ್ರೇಷ್ಠತೆಯನ್ನು ನೀಡಿದ ದೇಶ ನಮ್ಮ ಭಾರತ ಅಂತೆಯೇ ನಮ್ಮ ಈ ಭವ್ಯ ಭಾರತದಲ್ಲಿ ಪವಿತ್ರವಾದ ಅನೇಕ ಸಂಗತಿಗಳನ್ನು ಕಾಣಬಹುದು. ಅಂತಹ ಪುಣ್ಯ ಭೂಮಿಯ, ಏಳಿಗೆಗಾಗಿ ಈ ವಿದ್ಯಾರ್ಥಿ ಸಮುದಾಯ ಪ್ರಯತ್ನಿಸಬೇಕು. ತಮ್ಮಿಂದ ದೇಶಕ್ಕಾಗಿ ಏನು ನೀಡಲು ಸಾಧ್ಯವಿದೆ ಎಂಬುವುದನ್ನು ತಿಳಿದುಕೊಂಡು ತಮ್ಮ ಮಾತೃ ಭೂಮಿಯ ಅಭ್ಯುದಯಕ್ಕಾಗಿ ದುಡಿಯಬೇಕು. ಅದರೊಂದಿಗೆ ಪ್ರತಿದಿನ ಮಹಾಪುರುಷರ ಕತೆಗಳನ್ನು ಆಲಿಸಿ ಅವರ ಬಗ್ಗೆ ತಿಳಿದುಕೊಂಡು ಜ್ಞಾನವಂತರಾಗಬೇಕು. ದೇಶಕ್ಕಾಗಿ ಬಲಿದಾನಗೈದ ವೀರರ ಕಥೆಗಳು ಎಲ್ಲರಿಗೂ ಪ್ರೇರಣಾದಾಯಕವಾಗಲಿ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ (ಸ್ವಾಯತ್ತ) ದ 2022-23 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಮಾತನಾಡಿ, ಮನುಷ್ಯ ಸ್ವಭಾವತಃ ಸಂಘಜೀವಿ. ವಿದ್ಯಾರ್ಥಿಗಳು ಸಂಘ ಜೀವನದಿಂದ ಕಲಿಯುವುದು ಬಹಳ ಇದೆ. ಅದರೊಂದಿಗೆ ನಮ್ಮ ಕುಟುಂಬ, ಸಮಾಜ, ದೇಶ, ಸಮುದಾಯದ ಅಭ್ಯುದಯದತ್ತ ಆಲೋಚನೆಗಳನ್ನು ಮಾಡಿಕೊಂಡು ನಾವು ಬದುಕಬೇಕು. ದೇಶದ ಬಗ್ಗೆ ಭಕ್ತಿ ಭಾವವನ್ನು ಬೆಳೆಸಿಕೊಂಡು ಬದುಕಬೇಕು. ಆದುದರಿಂದ ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಅರಿತುಕೊಂಡು ವಿದ್ಯಾರ್ಥಿಗಳು ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಕಾಲೇಜಿನಲ್ಲಿ ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳು ವಿದ್ಯಾರ್ಥಿ ಸಂಘದ ಮೂಲಕ ನಡೆಯಬೇಕು. ಅದಕ್ಕೆ ಉತ್ತಮ ನಾಯಕನ ಆವಶ್ಯಕತೆಯಿದೆ. ನಾಯಕನಾಗಬೇಕಾದವನಿಗೆ ಉತ್ತಮ ಮಾತಿನ ಕೌಶಲ್ಯದ ಅಗತ್ಯತೆಯಿದೆ. ಅಂತಹ ನಾಯಕನ ನಾಯಕತ್ವದಲ್ಲಿ ಜ್ಞಾನ, ಶೀಲ, ಏಕತೆ ಎಂಬುದನ್ನು ಧ್ಯೇಯವಾಗಿರಿಸಿಕೊಂಡು ಈ ಶೈಕ್ಷಣಿಕ ವರ್ಷ ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದು ಹೇಳಿದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ವಿಕಸನ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.


ವಿದ್ಯಾರ್ಥಿ ಪ್ರತಿನಿಧಿಗಳಿಗೆ ಭಗವದ್ಗೀತಾ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಭಗವದ್ಗೀತೆಯನ್ನು ವಾಚಿಸಿದರು.


ಜೊತೆಗೆ ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಅರುಣ್ ಪ್ರಕಾಶ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ವಿದ್ಯಾರ್ಥಿಗಳಾದ ಹೇಮಸ್ವಾತಿ ಪ್ರಾರ್ಥಿಸಿದರು. ಮಂಜುನಾಥ್ ಸ್ವಾಗತಿಸಿ, ವಿಖ್ಯಾ ಜೆ ಸಿ ವಂದಿಸಿದರು. ಹರಿಪ್ರಸಾದ್ ಕಾರ‍್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top