ವಿವೇಕಾನಂದ ಕಾಲೇಜಿನಲ್ಲಿ ಪರೀಕ್ಷಾಂಗ ವಿಭಾಗದ ನೂತನ ಕಛೇರಿಯ ಉದ್ಘಾಟನೆ

Upayuktha
0


ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಹಾಗೂ ಸ್ನಾತಕೋತ್ತರ ಸಂಸ್ಥೆಗಳಿಗೆ ಸ್ವಾಯತ್ತ ಸ್ಥಾನಮಾನ ದೊರಕಿರುವ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ನೂತನ ಪರೀಕ್ಷಾಂಗ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ  ಮಾತನಾಡಿದ ಇವರು, ಸ್ವಾಯತ್ತತೆ ಹೊಂದಿರುವ ಸಂಸ್ಥೆಗಳಿಗೆ ಪರೀಕ್ಷಾಂಗ ಕೇಂದ್ರ ಎನ್ನುವುದು ಹೃದಯವಿದ್ದಂತೆ. ಪರೀಕ್ಷಾಂಗ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು.ಹಾಗೂ ಇಲ್ಲಿ ನಡೆಯುವ ಎಲ್ಲಾ ಕೈಂಕರ್ಯಗಳು ಅತ್ಯಂತ ಸೂಕ್ಷ್ಮ ಹಾಗೂ ಜವಾಬ್ದಾರಿಯಿಂದ ನಡೆಯಬೇಕು.ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಕಲ ರೀತಿಯಲ್ಲಿಯೂ ಪೂರಕವಾಗುವಂತೆ ಕೆಲಸಗಳು ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನೂತನ ಪರೀಕ್ಷಾಂಗ ಕುಲಸಚಿವರಾಗಿ ನೇಮಕಗೊಂಡ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್.ಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ವಿಚಾರದಲ್ಲಿ ಯಾವುದೇ ತೆರನಾದ ಸಮಸ್ಯೆ ಹಾಗೂ ಗೊಂದಲಗಳು ಉಂಟಾಗದಂತೆ ನ್ಯಾಯಯುತವಾದ ಫಲಿತಾಂಶವನ್ನು ಕೊಡಬೇಕಾದುದು ಸ್ವಾಯತ್ತ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ನನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುತ್ತೇನೆ ಇದಕ್ಕೆ ತಮ್ಮೆಲ್ಲರ ಸಹಾಯ ಹಾಗೂ ಸಹಕಾರವನ್ನು ಕೋರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೋ.ವಿಷ್ಣು ಗಣಪತಿ ಭಟ್ ನೂತನವಾಗಿ ನೇಮಕಗೊಂಡ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಒ ಭಾಸ್ಕರ್, ಕಾಲೇಜಿನ ವಿಶೇಷಾಧಿಕಾರಿಗಳು, ವಿವಿಧ ವಿಭಾಗಗಳ ಡೀನ್ ಗಳು, ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ, ವಿಶೇಷಾಧಿಕಾರಿ ಡಾ.ಶ್ರೀಧರ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಯೋಜಕಿ ಡಾ.ವಿಜಯ ಸರಸ್ವತಿ ವಂದಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top