|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ವಸ್ಥ ಮಹಿಳಾ ಸಮಾಜಕ್ಕಾಗಿ ಸಜ್ಜಾಗಿದೆ 'ನಮ್ಮ ಆರೋಗ್ಯ ಕೇಂದ್ರ'

ಸ್ವಸ್ಥ ಮಹಿಳಾ ಸಮಾಜಕ್ಕಾಗಿ ಸಜ್ಜಾಗಿದೆ 'ನಮ್ಮ ಆರೋಗ್ಯ ಕೇಂದ್ರ'

ಟೂಡಾ ಶಶಿಧರ್ ಕನಸಿನ ‘ಆಕೆ’ಗೋಸ್ಕರ ಆರೋಗ್ಯ ಸಖಿ ಯೋಜನೆ ಅನುಷ್ಠಾನಕ್ಕೆ ಕ್ಷಣಗಣನೆ


ತಿಪಟೂರು: ಬದುಕಿನ ಸಾರ್ಥಕತೆ ಇರುವುದು ಇನ್ನೊಬ್ಬರಿಗೆ ನೆರವಾಗುವುದರಲ್ಲಿ. ತಮ್ಮತಮ್ಮ ಸಾಮರ್ಥ್ಯಕ್ಕನುಗುಣವಾಗಿ ಸಮಾಜದಲ್ಲಿ ಬಹಳಷ್ಟು ಜನ ಅನ್ಯರಿಗೆ, ಅಸಹಾಯಕರಿಗೆ ನೆರವು ನೀಡುತ್ತಿದ್ದಾರೆ. “ಲೋಕ ಹಿತಂ ಮಮ ಕರಣೀಯಂ” ಎಂಬ ಉದಾತ್ತ ನುಡಿಯನ್ನೇ ಜೀವನದ ನಡೆಯಾಗಿಸಿಕೊಂಡಿದ್ದಾರೆ. ಆದರೆ ಸೇವೆ ಅರ್ಥಪೂರ್ಣವಾಗಿಸಲು ಹೊಸತೊಂದು ಪರಿಕಲ್ಪನೆಯ ಆವಿಷ್ಕಾರ, ಯೋಚನೆಯನ್ನು ಯೋಜನೆಯಾಗಿಸಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಚಾಣಾಕ್ಷತೆ, ಧೈರ್ಯ, ಸಾಮರ್ಥ್ಯ ಅಗತ್ಯ. ಇವೆಲ್ಲವೂ ಮೇಳೈಸಿದ ವಿರಳರಲ್ಲಿ ಅಗ್ರಪಂಕ್ತಿಯವರಾಗಿ ತಿಪಟೂರಿನ ಕಾಂಗ್ರೆಸ್ ಮುಖಂಡ, ತುಮಕೂರು ಜಿಲ್ಲಾ ವಾರ್ ರೂಂ ಸಂಯೋಜಕ ಹಾಗೂ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ (ಟೂಡಾ) ಗುರುತಿಸಿಕೊಂಡಿದ್ದಾರೆ.


‘ಆಕೆ’ಗೋಸ್ಕರ ಆರೋಗ್ಯ ಸಖಿ ಎಂಬ ಅವರ ಹೊಸ ಯೋಜನೆ ಆರೋಗ್ಯ ಕ್ಷೇತ್ರದಲ್ಲೇ ಅಪರೂಪ ಹಾಗೂ ಅನನ್ಯವೆನಿಸಿದೆ. ಈ ಕನಸು ನನಸಾಗುವ ಕ್ಷಣಗಳ ಗಣನೆ ಈಗಾಗಲೇ ಆರಂಭವಾಗಿದೆ. ಜನಪ್ರಾತಿನಿಧ್ಯದ ಅಧಿಕಾರ ಹೊಂದದೆ ಸಮಾಜ ಸೇವಕರೊಬ್ಬರು ಸರಕಾರವೊಂದಕ್ಕೆ ಸಮಾನವಾಗಿ ಹುಟ್ಟುಹಾಕಿ ಅನುಷ್ಠಾನಗೊಳಿಸುತ್ತಿರುವ ಈ ಯೋಜನೆ ದೇಶದಲ್ಲೇ ಮಾದರಿ ಎಂದರೆ ಅತಿಶಯೋಕ್ತಿಯಂತೂ ಅಲ್ಲ.


ಯೋಜನೆಯ ತಿರುಳೇನು?


ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನಮಾನವಿರುವುದು ವಿದಿತ. ಈ ಸಂಸ್ಕೃತಿ ಜಗತ್ತಿಗೇ ಮಾದರಿಯೂ ಹೌದು. ಕುಟುಂಬವೊಂದರ ಯಶಸ್ಸು, ಶ್ರೇಯಸ್ಸು ಎಲ್ಲದರ ಹಿಂದೆ ಮಹಿಳೆಯ ತ್ಯಾಗ, ಶಕ್ತಿ ಇದ್ದೇ ಇದೆ ಎಂಬುದು ಸತ್ಯ. ಆದಾಗ್ಯೂ ಕಾಲಮಾನದ ಬೆಳವಣಿಗೆಗಳು, ವಿಚಾರಗಳ ಪಲ್ಲಟಗಳ ಪರಿಣಾಮ ಮಹಿಳೆ ನಿರ್ಲಕ್ಷ್ಯಕ್ಕೆ, ಕಡೆಗಣನೆಗೆ ಒಳಗಾಗಿರಬಹುದು. ಆದರೆ ಕಾಲೋಚಿತ ಪ್ರಜ್ಞೆಗಳು ಅದರಿಂದ ಹೊರಬಂದು ಮಹಿಳೆಯ ಸ್ಥಾನಮಾನ ಕಾಪಾಡುವ ನಿಟ್ಟಿನಲ್ಲಿ ನೆರವಾಗಿವೆ. ಅದರ ಫಲವೇ ಇತ್ತೀಚಿನ ಮಹಿಳಾ ಸಬಲೀಕರಣದ ಯತ್ನಗಳು ಎನ್ನಬಹುದು.


ಈ ಸಬಲೀಕರಣದ ಪ್ರಕ್ರಿಯೆಯಿಂದ ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹಿಳೆಯರ ದಾಪುಗಾಲು ತೀವ್ರತೆ ಪಡೆದಿದ್ದರೂ ‘ಮಹಿಳಾ ಆರೋಗ್ಯ’ ಎಂಬುದು ಎಲ್ಲದರ ಬೆನ್ನ ಹಿಂದಿನ ಶಕ್ತಿ ಎಂಬುದನ್ನು ಮನದಟ್ಟಾಗಿಸಿಕೊಂಡು ಟುಡಾ ಶಶಿಧರ್ ಈ ಹೊಸ ಯೋಜನೆ ಹೆಣೆದಿದ್ದಾರೆ. ತನ್ಮೂಲಕ ಪ್ರಸ್ತುತ ತಿಪಟೂರು ತಾಲೂಕಿನಾದ್ಯಂತ “ನಮ್ಮ ಆರೋಗ್ಯ ಕೇಂದ್ರ' ಆರಂಭಿಸಲು ಸಂಕಲ್ಪಿಸಿದ್ದಾರೆ. ಬರುವ ಡಿಸೆಂಬರ್


6 ರಂದು ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಈ ಯೋಜನೆ ವಿವಿಧ ಶ್ರೀಗಳ, ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. 3 ಸಾವಿರಕ್ಕೂ ಅಧಿಕ ಮಹಿಳೆಯರು ಈ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ.


ಬರುವ ದಿನಗಳಲ್ಲಿ ತಿಪಟೂರು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಂದೊಂದು ಕೇಂದ್ರ ಸ್ಥಾಪಿಸುವುದು ಟೂಡಾ ಶಶಿಧರ್ ಅವರ ಹೆಗ್ಗುರಿ.


ಈ ಮಹತ್ಕಾರ್ಯಕ್ಕೆ ಕನ್ನಡತಿಯೇ ಆಗಿರುವ ಖ್ಯಾತ ಪ್ರಸೂತಿ ತಜ್ಞೆ, ಆರ್ಟಿಸ್ಟ್ ಫಾರ್ ಹರ್ ನ ಮುಖ್ಯಸ್ಥೆ ಹೇಮಾ ದಿವಾಕರ ಅವರು ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಕನಸಿನ ಯೋಜನೆಯ ಕಾರ್ಯಾನುಷ್ಠಾನ ಇನ್ನಷ್ಟು ಬಲ ಪಡೆದಿದೆ.


ಏನೆಲ್ಲ ಸೇವೆಗಳು?


‘ನಮ್ಮ ಆರೋಗ್ಯ ಕೇಂದ್ರ’ ಮಹಿಳೆಯರ ಆರೋಗ್ಯದ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಸಂಜೀವಿನಿಯಾಗಲಿದೆ. ಯುವತಿಯರಿಗೂ ಹಾಗೂ ಮಹಿಳೆಯರಿಗೂ ಅವರ ಜೀವನದಲ್ಲಿ ಪ್ರತಿ ಹಂತದಲ್ಲಿ ಬರುವ ಆರೋಗ್ಯ ಸಮಸ್ಯೆಗಳಿಗೆ ಸಲಹೆ ಹಾಗು ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆ ವಿಡಿಯೋ ಕನ್ಸಲ್ಟೇಷನ್‌ ಮೂಲಕ ಇಲ್ಲಿ ದೊರೆಯಲಿದೆ. ಕಾಲಕ್ರಮೇಣ ಮಹಿಳೆಯರ ಸ್ಪಂದನೆಯನ್ನಾಧರಿಸಿ ಸೇವೆಗಳ ವ್ಯಾಪ್ತಿ ಹೆಚ್ಚಿಸಲಾಗುವುದು.


ಉದ್ಯೋಗದ ಸೃಷ್ಟಿ:


‘ನಮ್ಮ ಆರೋಗ್ಯ ಕೇಂದ್ರ’ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳ ಸೃಷ್ಟಿಯಲ್ಲೂ ಮಹತ್ತರ ಪಾತ್ರ ವಹಿಸಲಿದೆ. ಉದ್ಘಾಟನೆಯ ದಿನವೇ 50ರಿಂದ 100 ಆರೋಗ್ಯ ಸಖಿಯರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಆಯ್ದ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಇವರು ಆರೋಗ್ಯ ಕೇಂದ್ರದಲ್ಲಿದ್ದು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗೆ ಸಮಾಲೋಚನೆಯೊಂದಿಗೆ ಆರೋಗ್ಯದ ಸಲಹೆ ನೀಡಲಿದ್ದಾರೆ. ಜತೆಗೆ ಆರೋಗ್ಯದ ಸೌಲಭ್ಯಗಳ ಸದುಪಯೋಗದ ಕುರಿತು ಮಾಹಿತಿ ನೀಡಲಿದ್ದಾರೆ.


ಉದ್ಘಾಟನಾ ಸಮಾರಂಭ:


ಡಿಸೆಂಬರ್ 6 ರಂದು ಬೆಳಗ್ಗೆ 10.30ಕ್ಕೆ ಹಾಲ್ಕುರಿಕೆ ಯಲ್ಲಿ ‘ನಮ್ಮ ಆರೋಗ್ಯ ಕೇಂದ್ರ’ವನ್ನು ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀಶ್ರೀ ಗುರುಪರದೇಶಿ ಕೇಂದ್ರ ಮಹಾಸ್ವಾಮೀಜಿಯವರು ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ನಂತರ ಗ್ರಾಮದ ಶ್ರೀ ಕೆಂಪಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಶ್ರೀಕ್ಷೇತ್ರ ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮಿಗಳು, ಅರಸೀಕೆರೆಯ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಹೊನ್ನವಳ್ಳಿಯ ಶ್ರೀ ಗುರು ಕರಿಸಿದ್ಧೇಶ್ವರ ಸ್ವಾಮಿ ಮಠದ ಶಿವಪ್ರಕಾಶ ಸ್ವಾಮಿಗಳು, ಸಾನ್ನಿಧ್ಯ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಆರ್ಟಿಸ್ಟ್ ಫಾರ್ ಹರ್ ನ ಮುಖ್ಯಸ್ಥೆ ಡಾ. ಹೇಮಾ ದಿವಾಕರ್, ಬೆಂಗಳೂರಿನ ದಿವಾಕರರ್ಸ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಜಿ.ವಿ. ದಿವಾಕರ್, ಬೆಂಗಳೂರಿನ ಎಂಜೆಎಸ್ ಪಿಆರ್ ನ ಎಂ.ಜೆ. ಶ್ರೀಕಾಂತ್ ಪಾಲ್ಗೊಳ್ಳುವರು. ಅತಿಥಿಯಾಗಿ ಹಾಲ್ಕುರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಮಹೇಶ್ ಭಾಗವಹಿಸುವರು.


ಬಳುವನೇರಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ, ಗ್ಯಾರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಎಂ.ಎಂ., ಘಟಕಿನಕೆರೆ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತ್ರಿಯಂಬಕ ಮತ್ತು ಮಮತಾ ಉಮಾ ಮಹೇಶ್, ಹಾಲ್ಕುರಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೋಲಾಕ್ಷಮ್ಮ ಉಪಸ್ಥಿತರಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم