ಅಂಬಿಕಾ ಮಹಾವಿದ್ಯಾಲಯದಿಂದ ಅನ್ವೇಷಣಾ - 2022 ಆಯೋಜನೆ

Chandrashekhara Kulamarva
0

ಯುವಜನತೆಯ ಕೊಡುಗೆಯಿಂದ ದೇಶದ ಅಭಿವೃದ್ಧಿ: ಹರಿಪ್ರಕಾಶ್ ಬೈಲಾಡಿ


ಪುತ್ತೂರು: ವಿದ್ಯಾರ್ಥಿಗಳ ಚಿಂತನೆ ಹಾಗೂ ನಿರ್ಧಾರಗಳ ಮೇಲೆ ದೇಶದ ಭವಿಷ್ಯ ನಿಂತಿದೆ. ದೇಶದ ಯುವಜನತೆ ನಾನಾ ಬಗೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಬೇಕು. ವ್ಯಕ್ತಿತ್ವ ನಿರ್ಮಾಣದೊಂದಿಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲು ಸಾಧ್ಯ ಎಂದು ಬೆಳಿಯೂರುಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಅನ್ವೇಷಣಾ - 2022 ಎಂಬ ಸಾಂಸ್ಕೃತಿಕ ಹಾಗೂ ಸೃಜನಶೀಲ ಸ್ಪರ್ಧೆಗಳನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.


ವಿದ್ಯಾರ್ಜನೆಯ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಲಭಿಸುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ಗೌರವ ಸಿಗುವ ಕೆಲಸ ಗಳಿಸುವ ಉದ್ದೇಶದಿಂದ ಪೂರ್ವ ತಯಾರಿ ಅತ್ಯಂತ ಅಗತ್ಯ. ಯೋಜಿತವಾಗಿ ಕಾರ್ಯ ನಿರ್ವಹಿಸುವುದರಿಂದ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳುವುದಕ್ಕೆ ಸಾಧ್ಯ. ಸೋಲಿನಿಂದ ಪಾಠ ಕಲಿಯುವ ಪರಿಪಾಠ ರೂಢಿಸಿಕೊಂಡಾಗ ಗೆಲುವನ್ನು ಸಾಧಿಸಿ ಸಾಧನೆ ಮಾಡಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಶೇಷ ಕೌಶಲ ಹೊಂದಿದವರಿಗೆ ಹೆಚ್ಚು ಆದ್ಯತೆ ಲಭಿಸುತ್ತಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.


ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಸ್ಪರ್ಧಾತ್ಮಕ ಜಗತ್ತಿಗೆ ಒಡ್ಡಿಕೊಳ್ಳಲು ಮೊಬೈಲ್‌ನಿಂದ ಹಲವಾರು ಪ್ರಯೋಜನಗಳಿವೆ. ಜ್ಞಾನವನ್ನು ಪಡೆಯಲೂ ಇದು ಸಹಕಾರಿಯಾಗಿದೆ. ಆದರೆ ಅನ್ಯ ಉದ್ದೇಶಗಳಿಗೆ ಅತಿಯಾಗಿ ಬಳಸುವ ಕಾರಣ ನಮ್ಮನ್ನೇ ನಾವು ನಾಶ ಮಾಡುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ಭವಿಷ್ಯದ ನಿರ್ಮಾತೃಗಳು ನಾವೇ ಆಗಿದ್ದು, ಉತ್ತಮ ನಿರ್ಧಾರಗಳ ಮೂಲಕ ದೇಶ ಹೆಮ್ಮೆ ಪಡುವಂತೆ ಜೀವಿಸಬೇಕು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಪಠ್ಯ ಚಟುವಟಿಕೆಗಳೊಂದಿಗೆ ನಮ್ಮಲ್ಲಿರುವ ವಿಶೇಷ ಹವ್ಯಾಸಗಳು ನಮ್ಮ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಲೆ, ಸಾಹಿತ್ಯ, ನೃತ್ಯ ಮೊದಲಾದವುಗಳ ಮೂಲಕ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬಹುದು. ಒತ್ತಡ ನಿವಾರಣೆಗೆ ಲಲಿತ ಕಲೆಗಳ ಕೊಡುಗೆ ಅಪಾರ ಎಂದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎಂ. ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು. ಅನ್ವೇಷಣಾ-2022ರ ಸಂಯೋಜಕ ಹಾಗೂ ಕಾಲೇಜಿನ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು, ಬಂಟ್ವಾಳ ಹಾಗೂ ಸುಳ್ಯ ತಾಲೂಕಿನ ವಿವಿಧ ಪದವಿಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top