ನಿಟ್ಟೆ: 'ಪ್ರಸ್ತುತ ದಿನಗಳಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿ ಬೋಧನೆ, ಸಂಶೋಧನೆ, ಆವಿಷ್ಕಾರ ಹಾಗೂ ಉದ್ಯಮಶೀಲತೆಗೆ ಪ್ರಾಮುಖ್ಯತೆ ನೀಡುವುದು ಅತ್ಯಗತ್ಯವೆನಿಸಿದೆ. ಈ ಎಲ್ಲಾ ಕೆಲಸಗಳಿಗೂ ಪ್ರಾಮುಖ್ಯತೆಯನ್ನು ನೀಡುವಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರೆ ತಪ್ಪಾಗದು' ಎಂದು ಐಐಟಿ ಬಾಂಬೆಯ ಇನ್ಸ್ಟಿಟ್ಯೂಟ್ ಚೇರ್ ಪ್ರೊಫೆಸರ್ ಡಾ.ಭಲ್ಲಮುಡಿ ರವಿ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ನಲ್ಲಿ ಸ್ಥಾಪಿಸಿದ ನಿಟ್ಟೆ ಇಂಜಿನಿಯರಿಂಗ್ ಎಜುಕೇಶನ್ ಯುನಿಟ್ (ಎನ್.ಇ.ಇ.ಯು) ನ್ನು ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಸ್ಟಾಫ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಹಮ್ಮಿಕೊಳ್ಳಲಾದ 'ರೋಲ್ ಆಫ್ ಔಟ್ಕಮ್ ಬೇಸ್ಡ್ ಎಜುಕೇಶನ್ ಇನ್ ಟೆಕ್ನಿಕಲ್ ಎಜುಕೇಶನ್' ಎಂಬ ಎರಡು ದಿನಗಳ ಕಾರ್ಯಾಗಾರವನ್ನು ನ.14 ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸೆಲರ್ ಡಾ.ಎಂ.ಎಸ್ ಮೂಡಿತ್ತಾಯ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಪ್ರತಿಯೋರ್ವ ಮಾನವನೂ ಅವನಲ್ಲಿರುವ ವಿಶಿಷ್ಟ ಕೌಶಲ್ಯತೆಯನ್ನು ಪೋಷಿಸಿ ಆ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಪಡೆದು ಸಾಧನೆಮಾಡಬೇಕು ಎಂದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಸತೀಶ್ ಕುಮಾರ್ ಭಂಡಾರಿ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ತಾಂತ್ರಿಕ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಗಳು ಜೊತೆಯಾಗಿ ಮುನ್ನಡೆದರೆ ಹಲವಾರು ಸವಾಲುಗಳಿಗೆ ಉತ್ತರ ಸಿಗಬಹುದಾಗಿದೆ. ಇಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಹಲವಾರು ಸವಾಲುಗಳನ್ನು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಎನ್.ಇ.ಇ.ಯು ಹಲವಾರು ಕಾರ್ಯಕ್ರಮಗಳ ಮೂಲಕ ಜ್ಞಾನಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಿದೆ' ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ನಿಟ್ಟೆ ವಿಶ್ವವಿದ್ಯಾಲಯದ ಸ್ಟಾಫ್ ಡೆವಲಪ್ಮೆಂಟ್ ಸೆಂಟರ್ ನ ನಿರ್ದೇಶಕಿ ಶ್ರೀಮತಿ ಸಾಧನಾ ದೇಶ್ಮುಖ್ ಹಾಗೂ ನಿಟ್ಟೆ ಸಂಸ್ಥೆಯ ವಿವಿಧ ವಿಭಾಗಗಳ ನಿರ್ದೇಶಕರು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಇಂಡಸ್ಟ್ರೀ ಇನ್ಸ್ಟಿಟ್ಯೂಟ್ ಇಂಟರಾಕ್ಷನ್ ವಿಭಾಗದ ನಿರ್ದೇಶಕ ಡಾ. ಎ.ಎನ್ ಪರಮೇಶ್ವರನ್ ಅವರು ಎನ್. ಇ.ಇ.ಯು ಬಗೆಗೆ ವಿವರಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಪೈ ಅತಿಥಿಗಳನ್ನು ಪರಿಚಯಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಕರಿಕುಲಂ ಡೆವಲಪ್ಮೆಂಟ್ ವಿಭಾಗದ ನಿರ್ದೇಶಕ ಡಾ. ನಾಗೇಶ್ ಪ್ರಭು ವಂದಿಸಿದರು. ಎನ್.ಇ.ಇ.ಯು ಸದಸ್ಯೆ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕಿ ಡಾ.ಮಮತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ