ಉಡುಪಿ: ಲಕ್ಷ ದೀಪೋತ್ಸವದ ಅಂಗವಾಗಿ ಶನಿವಾರ ಕೃಷ್ಣಮಠದ ರಥಬೀದಿಯ ಪರಿಸರ ಲಕ್ಷ ದೀಪಗಳಿಂದ ಕಂಗೊಳಿಸುತ್ತಿತ್ತು. ಸಾವಿರಾರು ಭಕ್ತರು ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು. ಇಡೀ ರಥಬೀದಿಯ ಪರಿಸರ ಬೆಳಕಿನಿಂದ ಪ್ರಜ್ವಲಿಸುತ್ತಿತ್ತು. ದೀಪೋತ್ಸವ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಲಕ್ಷ ದೀಪೋತ್ಸವ ಪೂರ್ವಭಾವಿಯಾಗಿ ಸಂಜೆ ಅಷ್ಟಮಠಾಧೀಶರು ಅಟ್ಟಣಿಗೆಗಳಲ್ಲಿ ದೀಪಗಳನ್ನು ಜೋಡಿಸಿದರು. ಈ ಸಂದರ್ಭ ಸಾರ್ವಜನಿಕರು ಮಠದ ಸಿಬ್ಬಂದಿ ಭಾಗಿಯಾದರು.
ತುಳಸಿ ಪೂಜೆ:
ಕೃಷ್ಣಮಠದಲ್ಲಿ ಉತ್ಥಾನದ್ವಾದಶಿಯಂದು ಅಷ್ಟಮಠಾಧೀಶರು ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ತುಳಸಿಗೆ ಕ್ಷೀರಾಬ್ಧಿ ಪೂಜೆ ನೆರವೇರಿಸಿದರು.
ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಮಠಾಧೀಶರಾದ ಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಸಾರ್ವಜನಿಕರ ಮನೆಗಳಲ್ಲೂ ತುಳಸಿ ಪೂಜೆಯ ಸಂಭ್ರಮ ಮನೆಮಾಡಿತ್ತು. ತುಳಸಿ ಗಿಡವನ್ನು ಅಲಂಕರಿಸಿ, ಬೆಟ್ಟದ ನೆಲ್ಲಿಯ ಗಿಡವನ್ನು ಪಕ್ಕದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ಮನೆಯ ಮಂದಿ ಒಟ್ಟಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶ್ರೀಕೃಷ್ಣಮಠದಲ್ಲಿ,ಅಷ್ಟಮಠಾಧೀಶರು ಲಕ್ಷದೀಪೋತ್ಸವದ ಪ್ರಯುಕ್ತ ಅಟ್ಟಣಿಗೆಗಳಲ್ಲಿ ತಿಪಿಲೆಗಳನ್ನು ಜೋಡಿಸಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಭಾಗವಹಿಸಿದರು.
ಶ್ರೀಕೃಷ್ಣಮಠದಲ್ಲಿ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ ನೆರವೇರಿತು. ಅಷ್ಟಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


