ನಿಟ್ಟೆ: "ಶಿಕ್ಷಣ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉದ್ಯೋಗಾರ್ಹತೆ ಪಡೆಯುವ ನಿಟ್ಟಿನಲ್ಲಿ ವಿವಿಧ ರೀತಿಯ ಕೌಶಲ್ಯತೆಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ. ಪ್ರಸ್ತುತ ದಿನಗಳಲ್ಲಿ ಕಾಣಲಾಗುತ್ತಿರುವ ತಂತ್ರಜ್ಞಾನದ ಬೆಳವಣಿಗೆಯನ್ನು ನಾವೆಲ್ಲರೂ ಅರಗಿಸಿಕೊಳ್ಳುವ ಅಗತ್ಯತೆಯಿದ್ದು ಐಇಇಇ ಯಂತಹ ಪ್ರೊಫೆಶನಲ್ ಸೊಸೈಟಿಗಳು ಇದನ್ನು ವಿವಿಧ ಕಾರ್ಯಾಗಾರಗಳ ಮೂಲಕ ಸುಲಭದಾಯವಾಗಿಸುತ್ತಿದೆ" ಎಂದು ಹರ್ಮನ್ ಇಂಟರ್ನ್ಯಾಶನಲ್ ಸಂಸ್ಥೆಯ ಅಟೊಮೊಟಿವ್ ಆಡಿಯೋ ಸಾಫ್ಟ್ ವೇರ್ ವಿಭಾಗದ ನಿರ್ದೇಶಕ ಹಾಗೂ ಐಇಇಇ ಸಿಗ್ನಲ್ ಪ್ರೊಸೆಸಿಂಗ್ ಸೊಸೈಟಿ, ಬೆಂಗಳೂರು ಚಾಪ್ಟರ್ ನ ಮುಖ್ಯಸ್ಥ ಶ್ರೀ ಶೈಲೇಶ್ ಸಕ್ರಿ ಅಭಿಪ್ರಾಯಪಟ್ಟರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ವಿಭಾಗವು ಐಇಇಇ ಸಿಗ್ನಲ್ ಪ್ರೊಸೆಸಿಂಗ್ ಸೊಸೈಟಿ, ಬೆಂಗಳೂರು ಚಾಪ್ಟರ್ ಇದರ ಸಹಯೋಗದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನ.14 ರಿಂದ ಐದು ದಿನಗಳ ಕಾಲ ಹಮ್ಮಿಕೊಂಡಿರುವ 'ಸಿಗ್ನಲ್ ಪ್ರೊಸೆಸಿಂಗ್ ಫಾರ್ ಬಯೋಮೆಡಿಕಲ್ ಎಪ್ಲಿಕೇಶನ್ಸ್' ಎಂಬ ವಿಷಯದ ಬಗೆಗಿನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಬಯೋಮೆಡಿಕಲ್ ಸೈನ್ಸ್ ನಲ್ಲಿ ಸಿಗ್ನಲ್ ಪ್ರೊಸೆಸಿಂಗ್ ಉಪಯೋಗ ಹಾಗೂ ಪ್ರಾಮುಖ್ಯತೆಗಳ ಬಗೆಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜ್ಞಾನ ಬೆಳೆಯಬೇಕು. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕು" ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ "ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗವು ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿರುವುದು ಜ್ಞಾನಾಭಿವೃದ್ದಿಯ ಹಸಿವಿಗೆ ಹಿಡಿದಕೈಗನ್ನಡಿ ಎಂದರೆ ತಪ್ಪಾಗದು. ಇಂದಿನ ದಿನಕ್ಕೆ ಇಂತಹ ಕಾರ್ಯಾಗಾರ-ವಿಷಯ ಬಹಳ ಪ್ರಸ್ತುತವೆನಿಸುತ್ತದೆ. ನಮ್ಮ ಸಂಸ್ಥೆಯು ಇಂದು ಪಠ್ಯ ಮತ್ತು ಪಠ್ಯೇತರವಾಗಿ ಮಾತ್ರವಲ್ಲದೆ ಪ್ರಾಯೋಗಿಕ ಜ್ಞಾನವನ್ನೂ ಬೆಳೆಸಿಕೊಳ್ಳುವ ಹಾದಿಯಲ್ಲಿದೆ" ಎಂದು ಅವರು ಹೇಳಿದರು.
ವೇದಿಕೆಯಲ್ಲಿ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಎಸ್.ಎಸ್.ಎಸ್.ಎಸ್ ಸಾಯಿರಾಮ್ ಹಾಗೂ ಕಾರ್ಯಾಗಾರದ ಸಹಸಂಯೋಜಕ ಡಾ.ಶಿವಪ್ರಕಾಶ ಕೆ.ಎಸ್ ಉಪಸ್ಥಿತರಿದ್ದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಉಪಕುಲಸಚಿವೆ ಹಾಗೂ ಕಾರ್ಯಾಗಾರದ ಸಂಯೋಜಕಿ ಡಾ.ರೇಖಾ ಭಂಡಾರ್ಕರ್ ಸ್ವಾಗತಿಸಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದರು. ಸಹಪ್ರಾಧ್ಯಾಪಕ ಡಾ.ದುರ್ಗಾಪ್ರಸಾದ್ ವಂದಿಸಿದರು. ಸಹಪ್ರಾಧ್ಯಾಪಕಿಯರಾದ ಡಾ.ಶ್ರೀವಿದ್ಯಾ ಹಾಗೂ ಡಾ.ಪದ್ಮಾವತಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಅನುಷಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ