ಮೂಡುಬಿದಿರೆ: ದೊಡ್ಡ ಕನಸು ಕಂಡರೆ ಸಾಲದು ಅದನ್ನು ಯಶಸ್ವಿಗೊಳಿಸಲು, ದಿನನಿತ್ಯ ಕಾರ‍್ಯ ಪ್ರವೃತ್ತರಾಗುವುದು ಮುಖ್ಯ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳ "ಚಿಗುರು" ತಂಡದ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ವಿಭಿನ್ನವಾದ ಪ್ರತಿಭೆಗಳಿವೆ. ನಮ್ಮೊಳಗಿನ ಪ್ರತಿಭೆಯನ್ನು ಗುರುತಿಸಿ ಹೊರಗೆ ತರುವುದು ಶಿಕ್ಷಣ. ಶಿಕ್ಷಣವನ್ನು ಕೇವಲ ಅಂಕಕ್ಕಾಗಿ ಮಾತ್ರ ಸೀಮಿತವಾಗಿರಿಸದೆ, ಶಿಕ್ಷಣದ ಜೊತೆಗೆ ಮೌಲ್ಯಗಳು, ಕೌಶಲ್ಯಗಳ ವೃದ್ಧಿಗೆ ಶ್ರಮಿಸಬೇಕು. ಜೀವನದಲ್ಲಿ ಅಡೆತಡೆಗಳು ಸೋಲು ಗೆಲುವುಗಳು ಸರ್ವೇಸಾಮಾನ್ಯ. ಹೇಗೆ ಫುಟ್ಬಾಲ್‌ನಲ್ಲಿ ಆಟಗಾರ ಎದುರಾಳಿಯನ್ನು ಭೇದಿಸಿ ತಂಡದ ಒಗ್ಗಟ್ಟಿನಿಂದ ಗೋಲ್ ಮಾಡುತ್ತಾನೋ, ಹಾಗೆ ಜೀವನದಲ್ಲಿ ಬಂದ ಕಷ್ಟಗಳನ್ನು ಎದುರಿಸಿ ಮುನ್ನಗ್ಗಬೇಕು. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಜೀವನದಲ್ಲಿ ಪ್ರಗತಿಯನ್ನು ಕಾಣುವುದರ ಕಡೆಗೆ ಒತ್ತು ನೀಡಬೇಕು ಹೊರತು, ತಂತ್ರಜ್ಞಾನದಿಂದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು. ಸಕರಾತ್ಮಕ ಆಲೋಚನೆಗಳನ್ನು ರೂಢಿಸಿಕೊಂಡು, ನಮ್ಮೊಳಗಿನ ಅದ್ಭುತವಾದ ಶಕ್ತಿಯನ್ನು ಬಳಸಿ ರಾಷ್ಟ್ರ ನಿರ್ಮಾಣಕ್ಕೆ ನಾವು ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾನಾಡಿದ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಿದ್ಯಾರ್ಥಿಗಳು ಮಾಡುವ ಪ್ರತಿಯೊಂದು ಕೆಲಸವನ್ನು ಸಂಪೂರ್ಣ ಮನಸ್ಸಿನಿಂದ ಮಾಡಬೇಕು. ಹೇಗೆ ಸೈನಿಕ ಶತ್ರುಗಳನ್ನು ಗಡಿಯ ಒಳಗಡೆ ಬರಲು ಬಿಡುವುದಿಲ್ಲವೋ, ಹಾಗೆ ವಿದ್ಯಾರ್ಥಿಗಳ ಜೀವನದಲ್ಲಿ ಅಡಚಣೆಗಳು ಎದುರಾದರೂ, ಅವುಗಳನ್ನು ಎದುರಿಸಿ ಗುರಿಯತ್ತ ಪ್ರಯತ್ನ ಬೆಳೆಸಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕರು ಉಪಸ್ಥಿತರಿದ್ದರು.
ಶ್ರೀಜಿತ್ ತಂಡದವರು ಪ್ರಾರ್ಥನೆ ಹಾಡಿ, ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ ಆಶಿಕ ಸ್ವಾಗತಿಸಿ, ಶ್ರಾವ್ಯ ಬಳೆಗಾರ ವಂದಿಸಿ, ಹರ್ಷಿತಾ ಶಿರೂರು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ