ಉಜಿರೆ: ಎಸ್‌ ಡಿ ಎಂ ಕಾಲೇಜು ಪ್ರಾಂಶುಪಾಲರಾಗಿ ಡಾ. ಎ.ಜಯಕುಮಾರ ಶೆಟ್ಟಿ ನೇಮಕ

Upayuktha
0

ಉಜಿರೆ: ಶ್ರೀ ಧ.ಮ. ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಉಪಪ್ರಾಂಶುಪಾಲ ಡಾ. ಎ.ಜಯಕುಮಾರ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.


ಡಾ. ಉದಯಚಂದ್ರ ಅವರ ಸೇವಾ ನಿವೃತ್ತಿಯಿಂದಾಗಿ ತೆರವಾದ ಪ್ರಾಂಶುಪಾಲರ ಹುದ್ದೆಗೆ ಡಾ.ಎ.ಜಯಕುಮಾರ ಶೆಟ್ಟಿ ನೇಮಕವಾಗಿದ್ದಾರೆ. ಕಳೆದ 38 ವರ್ಷಗಳಿಂದ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿಭಾಗದ ಮುಖ್ಯಸ್ಥರಾಗಿ, ಕಲಾ ನಿಕಾಯದ ಡೀನ್‌ ಆಗಿ ಹಾಗೂ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ಈಗ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ್ದಾರೆ.


ಮಂಗಳೂರು ತಾಲೂಕಿನ ಅರ್ಕುಳ ಬೀಡು ಮನೆತನದವರಾದ ಡಾ.ಎ.ಜಯಕುಮಾರಶೆಟ್ಟಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಅರ್ಕುಳ ಶ್ರೀರಾಮ ಶಾಲೆ, ಪದವಿ ಶಿಕ್ಷಣವನ್ನು ಮಂಗಳೂರು ವಿವಿ ಕಾಲೇಜಿನಲ್ಲಿ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ರ್ಯಾಂಕ್‌ ಮನ್ನಣೆಯೊಂದಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಮಂಗಳೂರಿನ ಶ್ರೀ ಧ.ಮಂ ಆಡಳಿತ ಮಹಾವಿದ್ಯಾಲಯದಲ್ಲಿ 1985ರಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ ನಂತರ ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು.


ಕೈಗಾರಿಕಾ ಪ್ರೋತ್ಸಾಹಕಗಳ ಮೇಲಿನ ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ, ಸಿಬ್ಬಂದಿ ನಿರ್ವಹಣೆಯಲ್ಲಿ ಭಾರತೀಯ ವಿದ್ಯಾಭವನದಿಂದ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಎಂ.ಬಿ.ಎ ಪದವಿ ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಹಾಗೂ ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಅಧಿಕೃತ ಸಂಶೋಧನಾ ಮಾರ್ಗದರ್ಶಕರಾಗಿರುವ ಇವರ ಮಾರ್ಗದರ್ಶನದಲ್ಲಿ 8 ಸಂಶೋಧನಾರ್ಥಿಗಳು ಪಿ.ಎಚ್.ಡಿ. ಪದವಿ ಪಡೆದಿದ್ದು, ಪ್ರಸ್ತುತ ನಾಲ್ಕು ವಿದ್ಯಾರ್ಥಿಗಳು ಸಂಶೋಧನಾನಿರತರಾಗಿದ್ದಾರೆ.


ಯು.ಜಿ.ಸಿ ಪ್ರಾಯೋಜಿತ ಮೂರು ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಪೂರೈಸಿರುವ ಇವರ 50ಕ್ಕೂ ಅಧಿಕ ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಮ್ಮಟಗಳಲ್ಲಿ 50ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಆರ್ಥಿಕ ಅಭಿವೃದ್ಧಿ, ಹಕ್ಕುಗಳ ಪರಿಭಾಷೆಯಲ್ಲಿ ಅಭಿವೃದ್ಧಿ, ಒಳಗೊಳ್ಳುವ ಅಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ ಹಾಗೂ ಸಿರಿ ಮತ್ತಿತರ 10 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.


ಮಂಗಳೂರು ವಿಶ್ವವಿದ್ಯಾಲಯದ ಗ್ರಾಮೀಣಾಭಿವೃದ್ಧಿ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿ ಅತ್ಯುತ್ತಮ ಯೋಜನಾಧಿಕಾರಿಯಾಗಿ ರಾಜ್ಯಪ್ರಶಸ್ತಿಯನ್ನು ಪಡೆದಿದ್ದಾರೆ. ರೋಟರಿ ಕ್ಲಬ್‌ ಅಧ್ಯಕ್ಷರಾಗಿ ಅತ್ಯುತ್ತಮ ಸಮಾಜ ಸೇವೆಗಾಗಿ ಜಿಲ್ಲಾ ಅತ್ಯುತ್ತಮ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ. ಸಮಕಾಲೀನ ಆರ್ಥಿಕ ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗುತ್ತಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top