ಪುತ್ತೂರು: ಖ್ಯಾತ ಹಿರಿಯ ವಿದ್ವಾಂಸ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಅಮೃತ ಸೋಮೇಶ್ವರ ಇವರಿಗೆ ಯಕ್ಷಗಾನಾರ್ಚನೆ ಮತ್ತು ಯಕ್ಷಾಮೃತ ಗೌರವ ಸಮರ್ಪಣಾ ಕಾರ್ಯಕ್ರಮವು ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸಂಶೋಧನಾ ಕೇಂದ್ರ ,ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ದಯಾನಂದ ಪೈ ಮತ್ತು ಶ್ರೀ ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ ನವಂಬರ್ ತಿಂಗಳಿನ ಬುಧವಾರ ಕೋಟೆಕಾರಿನ ಅವರ ಸ್ವಗೃಹದಲ್ಲಿ ನಡೆಯಲಿದೆ.
ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಾ ಶ್ರೀಪತಿ ಕಲ್ಲುರಾಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ ತಾಳ್ತಜೆ ವಸಂತ ಕುಮಾರ ಗೌರವ ನುಡಿಗಳನ್ನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ ಎನ್, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಉಪಸ್ಥಿತರಿರುವರು.
ಪ್ರೊ ಅಮೃತ ಸೋಮೇಶ್ವರ:
ಪ್ರೊ. ಅಮೃತ ಸೋಮೇಶ್ವರ ಇವರು ಕನ್ನಡ ಮತ್ತು ತುಳು ಸಾಹಿತ್ಯ, ಜಾನಪದ, ಸಂಶೋಧನೆ, ಯಕ್ಷಗಾನ, ವಿಮರ್ಶೆಯ ಕ್ಷೇತ್ರದಲ್ಲಿ ವಿಶೇಷವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಹಿರಿಯ ವಿದ್ವಾಂಸರು. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕನ್ನಡ ಸಂಘ ಮತ್ತು ಯಕ್ಷರಂಜಿನಿಯನ್ನು ಹುಟ್ಟು ಹಾಕಿದವರು.
ಎಲೆಗಾಳಿ,ಕೆಂಪು ನೆನಪು,ವನಮಾಲೆ, ಭ್ರಮಣ ಮುಂತಾದ ಅಪೂರ್ವ ಕನ್ನಡ ಕೃತಿಗಳನ್ನು ರಚಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಶ್ರೇಷ್ಟ ಪ್ರಶಸ್ತಿಗಳಿಗೆ ಭಾಜನರಾದ ಇವರಿಗೆ ವಿವೇಕಾನಂದ ಕಾಲೇಜಿನ ವತಿಯಿಂದ ದಿನಾಂಕ 23.11. 2022 ರಂದು ಯಕ್ಷಗಾನಾರ್ಚನೆ ಹಾಗೂ ಯಕ್ಷಾಮೃತ ಗೌರವವನ್ನು ನೀಡಿ ಗೌರವಿಸಲಾಗುವುದು ಎಂದು ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಹಾಗೂ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ ಮನಮೋಹನ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ