ದಯಾ ಗಂಗನಘಟ್ಟ ಅವರ "ಉಪ್ಪುಚ್ಚಿಮುಳ್ಳು" ಕಥಾ ಸಂಕಲನ ಲೋಕಾರ್ಪಣೆ

Upayuktha
0

ಬೆಂಗಳೂರು: ವಿನಯತೆ ಇಲ್ಲವಾಗಿ, ಉದಯೋನ್ಮುಖ ಎಂಬ ಪರಿಧಿ ಇಲ್ಲದ ಈ ಸಾಹಿತ್ಯ ಕಾಲಘಟ್ಟದಲ್ಲಿ ದಯಾ ಗಂಗನಗಟ್ಟ ಅವರ ಕತೆಗಳು ವಿನಯ ಹಾಗು ವಿದೇಯತೆಯ ಜೊತೆಗೆ ನಮ್ಮ ಮುಂದೆ ನಿಲ್ಲುತ್ತವೆ ಎಂದು ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರು ಅಭಿಪ್ರಾಯ ಪಟ್ಟರು.


ಅವರು ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಚಿತ್ರಕಲಾ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ದಯಾ ಗಂಗನಘಟ್ಟ ಅವರ "ಉಪ್ಪುಚ್ಚಿಮುಳ್ಳು" ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.


ಈ ಸಮಯದಲ್ಲಿ ಮಹಿಳಾ ಸಾಹಿತ್ಯ ಮಂಚೂಣಿಗೆ ಬರುತ್ತಿವೆ‌. ಅದು ಪ್ರಖರವಾಗಿ ಎಲ್ಲೆಡೆ ಪ್ರಕಟವಾಗುತ್ತಿದೆ ಎಂದು ಹಿರಿಯ ಸಾಹಿತಿ ಕೇಶವ ಮಳಗಿ ಅವರು ಹೇಳಿದರು. ದಾವಂತದ ವಾತಾವರಣವನ್ನು ಈಗಿನ ಸ್ಪರ್ದೆಗಳು ರೂಪಿಸುತ್ತಿವೆ. ಅಂತಹಾ ದಾವಂತವನ್ನು ದಾಟ ಬೇಕಾದ ಅನಿವಾರ್ಯತೆ ಈ ಕಾಲದ ಕತೆಗಾರರಿಗೆ ಇದೆ ಎಂದರು.


ಉಪ್ಪುಚ್ಚಿಮುಳ್ಳು ಕಥಾಸಂಕಲನ ಆರ್ದ್ರ ಅನುಭವಗಳನ್ನು ಹೊಂದಿದ ಒಂದು ತೀವ್ರತರವಾದ ಭಾವಗುಚ್ಚವಾಗಿದೆ ಎಂದು ತಮ್ಮ ಕಥಾಸ್ಪಂದನದಲ್ಲಿ ತಿಳಿಯಪಡಿಸಿದರು‌.


ಲೇಖಕ, ಪ್ರಕಾಶಕ ಚಲಂ ಹಾಡ್ಲಹಳ್ಳಿ ಮಾತನಾಡಿ ಪುಸ್ತಕ ಪ್ರಕಟಣೆ ಅಂತಹಾ ದುಸ್ಸಾಹಸದ ಕೆಲಸವೇನೂ ಅಲ್ಲ. ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು. ಇದುವರೆಗೂ ಹಲವಾರು ಲೇಖಕರ ಮೊದಲ ಪುಸ್ತಕ ಪ್ರಕಟಿಸಿದ ಹೆಮ್ಮೆ ಹಾಡ್ಲಹಳ್ಳಿ ಪ್ರಕಾಶನಕ್ಕೆ ಇದೆ ಎಂದರು.


ಭಾರತದ, ಸ್ತ್ರೀಭಾರತವನ್ನು ಕಟ್ಟಿಕೊಡುವ ದಯಾ ಗಂಗನಗಟ್ಟ ಕತೆಗಾರರಾಗಿ ಗಂಭೀರವಾಗಿ ಪರಿಗಣಿಸುವ ಹೆಸರಾಗಿದೆ ಎಂದು ಡಾ ಬೇಲೂರು ರಘುನಂದನ್ ಅವರು ಅಭಿಪ್ರಾಯಪಟ್ಟರು‌. ಹೆಣ್ಣುಮಕ್ಕಳಿಗೆ ಇರಬೇಕಾದ ಶೌಚದ ಸಮಸ್ಯೆಯನ್ನು ನಮ್ಮ ಮುಂದಿಟ್ಟಿರುವ ಪರಿ ಈ ಕಥೆಗಳ ಮಹತ್ವವನ್ನು ಹೇಳುತ್ತದೆ ಎಂದರು.


ನಾವಿರುವ ಜಾಗದಲ್ಲೇ ನಮ್ಮ ಪ್ರಾದೇಶಿಕತೆ ಕಟ್ಟಿ ಕೊಡುವ ಸಾಧ್ಯತೆಯನ್ನು ದಯಾ ಗಂಗನಗಟ್ಟ ಅವರು ತೋರಿಸಿಕೊಟ್ಟಿದ್ದಾರೆ ಎಂದರು. ನನ್ನ ಸಮಸ್ಯೆಗಳನ್ನು ಮೀರುವ ಒಂದು ಪ್ರಕಾರಕ್ಕಾಗಿ ಕಥೆಯ‌ ಆಸರೆಗೆ ಹೋದೆ ಎಂದು ಉಪ್ಪುಚ್ಚಿಮುಳ್ಳು ಕಥೆಗಾರ್ತಿ ಹೇಳಿದರು‌. ಪ್ರತಿ ಪಾತ್ರಗಳ ಜತೆ ಒಡನಾಡುತ್ತಾ ನಾ ಕಂಡ ಸಮಾಧಾನವೇ ಈ ಕಥೆಗಳು ಎಂದರು.


ಬಯಲುಸೀಮೆಯ ಮುಚ್ಚುಮರೆಯಿಲ್ಲದ ಸೌಂದರ್ಯದ ನಾಡಿನಿಂದ ಬಂದವಳಿಗೆ ಅಲ್ಲಮ ಹೇಳಿದ ಬಯಲು ಸಾಕಷ್ಡು ಕಾಡಿದೆ. ಅದು ಕೂಡ ನನ್ನನ್ನು ಕತೆಗಳ ಕಡೆಗೆ ಸೆಳೆದವು ಎಂದರು.


ಹೆಣ್ಣಿನ ಅಭಿವ್ಯಕ್ತಿಯ ಅದಷ್ಟೂ ಲೆಕ್ಕಾಚಾರಗಳು ದಾರಿ ತಪ್ಪಿಸುವ ಹುನ್ನಾರವೇ ಆಗಿರಬಹುದು ಎಂದು ಖ್ಯಾತ ವಿಮರ್ಶಕಿ ಎಂ ಎಸ್ ಆಶಾದೇವಿ ಅಭಿಪ್ರಾಯ ಪಟ್ಟರು‌. ನೀವು ಪುರುಷಾನುಭವವನ್ನೇ ಸಾಮಾಜಿಕ ಅನುಭವ ಎಂದು ಆರೋಪಿಸಿ ಸಾಮಾಜಿಕ ಅಂಗವೈಕ್ಯಲ್ಯವನ್ನು ಈ ಕಾಲದ ಈ ರೀತಿಯ ಕತೆಗಳು ಸರಿ ಮಾಡುತ್ತಿವೆ ಎಂದು ಅಭಿಪ್ರಾಯ ಪಟ್ಟರು‌.


ಹೆಣ್ಣಿನ ನೋಟದಿಂದ ನೋಡಿದ ಕತೆಗಳು ಗೆದ್ದ ಕತೆಗಳಾಗಿವೆ. ಹೆಣ್ಣಿಗೆ ಲೋಕದ ಬಂಧನ ದಾಟುವುದಕ್ಕಿಂತ ನಮಗೆ ನಾವೇ ಹಾಕಿಕೊಳ್ಳುವ ಬಂಧನ ಮಹಿಳಾ ಲೋಕದ ಬಹಳ ದೊಡ್ಡ ಸಮಸ್ಯೆ ಎಂದರು. ಇಂತಹಾ ಕೆಲವು ತೊಡಕುಗಳನ್ನು ಮೀರುವ ಕೆಲಸ ದಯಾ ಗಂಗನಗಟ್ಟ ಅವರು ತಮ್ಮ ಕಥೆಗಳ ಮೂಲಕ ಮೀರಿದ್ದಾರೆ ಎಂದು ಹೇಳಿದರು.


ಕಾರ್ಯಕ್ರಮದ ಆರಂಭದಲ್ಲಿ ಗಂಗನಘಟ್ಟದ ಸೋಬಾನೆ ಗಾಯಕರ ಕಾರ್ಯಕ್ರಮ ಮನ ಸೆಳೆಯಿತು. ಸೋಬಾನೆ ಹಾಡುವವರ ಮಡಿಲಿನಿಂದ ಪುಸ್ತಕ ತೆಗೆಯುವುದರ ಮೂಲಕ ಪುಸ್ತಕ ಲೋಕಾರ್ಪಣೆ ಮಾಡಿದ್ದು ವಿಶೇಷವೆನಿಸಿತು‌.


ಪುನೀತ್ ತಥಾಗತ ಕಾರ್ಯಕ್ರಮ ನಿರೂಪಿಸಿದರೆ ಚಲಂ ವಂದನಾರ್ಪಣೆ ನೆರವೇರಿಸಿದರು. ಇದೇ ಸಮಯದಲ್ಲಿ ದಯಾ ಗಂಗನಘಟ್ಟ ಅವರ ತಾಯಿ ರಾದಮ್ಮ ಅವರನ್ನು ಸನ್ಮಾನಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top