ವಿದ್ಯಾರ್ಥಿಯು ಪುಸ್ತಕ ಜ್ಞಾನದ ಜೊತೆಗೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವ ದೃಷ್ಟಿಕೋನವನ್ನಿಟ್ಟುಕೊಂಡು ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ವಿದ್ಯಾ ಸಂಸ್ಥೆಯ ವತಿಯಿಂದ ಹಿರಿಯರ ಮನೆಗೆ ಭೇಟಿ ನೀಡುವ ಕಾರ್ಯವನ್ನು ಹಮ್ಮಿಕೊಂಡಾಗ ಅದರಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ನಮ್ಮ ಪಾಲಿಗೆ ಒದಗಿ ಬಂದಿತ್ತು. ಹಿರಿಯರ ಮನೆಗೆ ಭೇಟಿ ನೀಡಲು ಚೈತನ್ಯ ಎಂಬ ಹದಿನಾಲ್ಕು ವಿದ್ಯಾರ್ಥಿಗಳ ತಂಡವನ್ನು ರಚಿಸಿ ಹಿರಿಯರಿಗೆ ದಿನನಿತ್ಯದ ಬಳಕೆಗೆ ಅಗತ್ಯವಿರುವ ಸಾಮಗ್ರಿಗಳನ್ನು ವಿದ್ಯಾಸಂಸ್ಥೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ವಇಚ್ಛೆಯಿಂದ ಒಟ್ಟುಗೂಡಿಸಲಾಯಿತು. ಈ ಪುಟ್ಟ ಅಳಿಲು ಸೇವೆ ನಮ್ಮಿಂದದಾಗ ಮನಸ್ಸಿಗೊಂದು ವಿಭಿನ್ನ ನಿರಾಳತೆಯೂ ದೊರೆತಿತ್ತು. ನಿರೀಕ್ಷೆಗೂ ಮಿಗಿಲಾದ ಸಾಮಗ್ರಿಗಳ ಜೋಡಣೆಯನ್ನು ನೋಡಿದಾಗ ವಿದ್ಯಾಸಂಸ್ಥೆಯ ವಿಭಿನ್ನ, ಅರ್ಥಪೂರ್ಣ ಕಲ್ಪನೆಯು ಅದಾಗಲೇ ಸಾರ್ಥಕತೆಯನ್ನು ಪಡೆದಿತ್ತು.
ಉಪನ್ಯಾಸಕರ ಸಂಪೂರ್ಣ ಸಲಹೆ ಸಹಕಾರಗಳೊಂದಿಗೆ ಹಿರಿಯರ ಮನೆಯಲ್ಲಿ ಆಯೋಜಿಸಬೇಕಾದ ಚಟುವಟಿಕೆಗಳ ಬಗ್ಗೆ ಚರ್ಚಿಸಿ ಪೂರ್ಣಸಿದ್ಧತೆಗಳೊಂದಿಗೆ 09-11-2022 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಸೇವಾಭಾವ ಚಾರಿಟೇಬಲ್ ಟ್ರಸ್ಟ್ ಗೆ ಭೇಟಿ ನೀಡಿದೆವು. ಸ್ವಚ್ಛಂದ ಪರಿಸರದ ನಡುವೆ ನಿರ್ಮಿತವಾದ ಈ ಚಾರಿಟೇಬಲ್ ಟ್ರಸ್ಟ್ ನ ಒಳಹೊಕ್ಕಂತೆ ಆ ಪ್ರಶಾಂತವಾದ ವಾತಾವರಣ ದೇವಾಲಯದಂತೆ ಗೋಚರಿಸುತ್ತಿತ್ತು. ಒಳ ಪ್ರವೇಶಿಸುತ್ತಿದ್ದಂತೆ ಮುಗ್ಧತೆಯ ನಗು ಬೀರಿದ ಹಿರಿಯರಿಗೆ ನಮಸ್ಕರಿಸಿದೆವು. ತಮ್ಮ ಪ್ರೀತಿಯ ಆಲಿಂಗನದಿಂದಲೇ ಸ್ವಾಗತಿಸಿದ ರೀತಿಗೆ ಭಾವುಕತೆಗೆ ಮನಸ್ಸು ಶರಣಾಯಿತು. ಮೂವತ್ತೇಳು ಜನ ಮಹಿಳೆಯರನ್ನು ಒಳಗೊಂಡ ಹಿರಿಯರ ಮನೆ ಇದಾಗಿದ್ದು ಇದರ ಮುಖ್ಯ ಉಸ್ತುವಾರಿ ಗೀತಾ ಮೇಡಂ ತಮ್ಮ ಉತ್ಸಾಹಿ ನಗುವಿನೊಂದಿಗೆ ಬರಮಾಡಿಕೊಂಡರು. ನಂತರ ಸೇವಾ ಭಾವ ಟ್ರಸ್ಟ್ ನಡೆದು ಬಂದ ಹಾದಿ ಹಾಗೂ ಅಲ್ಲಿನ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.
ಆಡು ಮುಟ್ಟದ ಸೊಪ್ಪಿನಂತಾಗಿ ಬಾಡಿ ಹೋಗುವ ಹಿರಿಯ ಜೀವಗಳಿಗೆ ಆಶ್ರಯ ತಾಣವನ್ನು ನಿರ್ಮಿಸಬೇಕೆಂಬ ಗುರಿಯನ್ನು ಹೊಂದಿದ್ದರೂ, ಕುಟುಂಬದ ಸಹಕಾರ ಸಿಗದೇ ಇದ್ದಾಗ ತನ್ನ ಸ್ನೇಹಿತ ಬಳಗ ನೀಡಿದ ಸಾಥ್ ನೊಂದಿಗೆ ಚಾರಿಟೇಬಲ್ ಟ್ರಸ್ಟನ್ನು ನಿರ್ಮಿಸಿ ವೃದ್ಧೆಯರ ಪಾಲಿನ ಅನಾಥ ಬಂಧುವಾಗಿ, ದೇವರ ರಾಯಭಾರಿಯಂತೆ ಸೇವಾಶ್ರಮದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ತಂಡದ ಮಾದರಿ ಮೇರು ವ್ಯಕ್ತಿತ್ವವನ್ನು ಕಂಡಾಗ ನಿಜಕ್ಕೂ ಹೆಮ್ಮೆಯೆನಿಸಿತು. ಹಿರಿಯ ಮುಖಗಳನ್ನು ನೋಡಿದೊಡನೆ ನವ ಮಾಸ ಗರ್ಭದಿ ಹೊತ್ತು ಹೆತ್ತು ಸಾಕಿ ಸಲಹಿದ ತಾಯಿಯ ಮಮತೆ, ಬಾಲ್ಯದಲ್ಲಿ ತೊಡೆಯ ಮೇಲೆ ಕೂರಿಸಿಕೊಂಡು ಕಥೆ ಹೇಳಿದ ಅಜ್ಜಿಯ ವಾತ್ಸಲ್ಯ ಕಣ್ಣೆದುರು ಹಾಗೆಯೇ ಹಾದುಹೋಯಿತು. ನಮ್ಮನ್ನು ಅವರ ಮಕ್ಕಳಂತೆ ಅಪ್ಪಿಕೊಂಡು ಅವರ ಬದುಕಿನ ಸಿಹಿ ಕಹಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಬಾಯಿ ಬಾರದ ಮುಖ ಪ್ರಾಣಿಗಳಿಗಿಂತಲೂ ಕೀಳಾಗಿ ಕಂಡ ನಿಷ್ಕರುಣಿ ಮಕ್ಕಳು, ಪ್ರೀತಿ ಎಂಬ ಆಸರೆಯ ಮರ ಇಲ್ಲದೆ ನೆರಳಿನ ತಾಣಕ್ಕಾಗಿ ಮಾಡಿದ ಹೋರಾಟಗಳ ಕಥೆಯ ಕೇಳಿ ಮಾತುಗಳೇ ಹೊರಬಾರದೆ ಅರಿವಿಲ್ಲದಂತೆ ಹರಿಯುತ್ತಿದ್ದ ಕಣ್ಣೀರ ಹನಿಗಳೇ ಒಳ ಮನಸ್ಸಿನ ಚಟಪಡಿಕೆಯನ್ನು ತೋರ್ಪಡಿಸುತ್ತಿತ್ತು. ಆಸ್ತಿಪಾಸ್ತಿಯ ಮೋಹಕ್ಕೆ ಆಶ್ರಮದ ಹಾದಿಗೆ ದೂಡಿಬಿಟ್ಟ ಕಣ್ಣೀರ ಕೆಲ ಕಥೆಗಳಾದರೆ, ಉನ್ನತ ಹಾದಿಯನ್ನು ಹಿಡಿದ ನಂತರ ತುತ್ತು ಕೊಟ್ಟ ಕೈಯನ್ನೇ ಮರೆತ ನತ ದೃಷ್ಟ ಮನಗಳನ್ನು, ಕಹಿ ನೆನಪುಗಳನ್ನು ಬದಿಗೊತ್ತಿ ನಾಳಿನ ಭರವಸೆಯೊಂದಿಗೆ ಬದುಕುತ್ತಿರುವ ಹಿರಿಯ ಜೀವಗಳನ್ನು ನೆನೆದು ನಮ್ಮ ಸಮಾಜದ ಶೋಚನೀಯ ಸ್ಥಿತಿಯ ಬಗ್ಗೆ ಬೇಸರ ವ್ಯಕ್ತವಾಯಿತು. ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಮನೆ ಎಂಬ ಮಮತೆ, ಹೆತ್ತವರ ವಾತ್ಸಲ್ಯ, ಕೂಡಿ ಬಾಳುವ ಸಂಭ್ರಮದ ಸೊಗಸು ಎಂದಿಗೂ ಮರೆಮಾಚದಿರಲಿ ರೆಕ್ಕೆ ಬಲಿತ ಹಕ್ಕಿಗಳು ಎಷ್ಟೇ ದೂರ ಹಾರಿ ಹೋದರು ಮೂಲತಾಣವನ್ನು ಮರೆಯದಿರಲಿ ಎನ್ನುವ ಜೀವನ ಪಾಠವನ್ನು ಅರ್ಥೈಸಿದರು.
ನಂತರ ನಮ್ಮ ವಿದ್ಯಾರ್ಥಿ ಬಳಗದಿಂದ ಪ್ರತಿಭಾ ಪ್ರದರ್ಶನವನ್ನಿತ್ತು ಹಿರಿಯರ ಮನಸ್ಸಿಗೆ ತುಸು ಸಂತಸ ನೀಡುವ ಪ್ರಯತ್ನವನ್ನು ಮಾಡಿದೆವು. ಸೊಗಸಾದ ಗಾಯನಕ್ಕೆ, ಸಾಕ್ಸೋಫೋನ್ ವಾದನಕ್ಕೆ ತಲೆದೂಗುತ್ತಿದ್ದ ಹಿರಿಯ ಜೀವಗಳು ತಮ್ಮದೇ ಮಗುವಿನ ವಿಶೇಷ ಪ್ರತಿಭೆಗೆ ಸಂಭ್ರಮ ಪಡುವ ರೀತಿಯಲ್ಲಿ ನಮ್ಮ ಬೆನ್ನು ತಟ್ಟಿ ಸಂತಸಪಟ್ಟರು. ವಯಸ್ಸು ದೇಹಕ್ಕೆ ಸೀಮಿತವೇ ಹೊರತು ಪ್ರತಿಭೆಗಲ್ಲ ಎನ್ನುವ ರೀತಿಯಲ್ಲಿ ಹಿರಿಯರು ತಾ ಮುಂದೆ ನಾ ಮುಂದೆ ಎಂಬಂತೆ ಭಕ್ತಿಗೀತೆ, ಭಾವಗೀತೆ ಹಾಗೂ ಅಭಿನಯ ಗೀತೆಯೊಂದಿಗೆ ನಮ್ಮೆಲ್ಲರನ್ನೂ ಭಾವಪರವಶರನ್ನಾಗಿಸಿದರು. ನಂತರ ಹಲವಾರು ಚಟುವಟಿಕೆಗಳನ್ನು ವಿದ್ಯಾರ್ಥಿ ಬಳಗ ಆಯೋಜಿಸಿದಾಗ ಯಾವುದೇ ಅಂಜಿಕೆಯಿಲ್ಲದೆ ಉತ್ಸಾಹಿ ತರುಣರಂತೆ ಎದ್ದು ಬರುತ್ತಿದ್ದರು. ಅವಕಾಶಗಳು ಎದುರಿದ್ದರೂ ವಿನಿಯೋಗಿಸದೇ ಸುಮ್ಮನಾಗುವ ನಮಗದೊಂದು ಅದ್ಭುತ ಪಾಠ ತಿಳಿ ಹೇಳಿದಂತಿತ್ತು.
ಭಾವುಕ ಕ್ಷಣಗಳು ಕಣ್ಣಿದುರಿಗಿದ್ದರೂ ಜೀವನಕ್ಕೆ ನೂರು ಪಾಠಗಳನ್ನು ಮತ್ತೆ ಮತ್ತೆ ಸಾರಿ ಹೇಳುತ್ತಿತ್ತು. ಮಂದಹಾಸದ ಮನೆಯ ಹಿರಿಯರು ಹಿಂದಿನ ನೋವಿನ ಅಧ್ಯಾಯವನ್ನು ಮರೆತು ನಮ್ಮೊಂದಿಗೆ ಸಂಭ್ರಮಿಸುತಿದ್ದ ರೀತಿ ನಮಗೆಲ್ಲರಿಗೂ ಸ್ಪೂರ್ತಿದಾಯಕವೆನಿಸಿದರೆ, ಗೀತಾ ಮೇಡಂನಂತಹ ಮಾದರಿ ವ್ಯಕ್ತಿತ್ವಗಳು ಜೀವನದಲ್ಲಿ ಸೋಲನ್ನು ಎದುರಿಸಿ ಮುನ್ನುಗ್ಗಿ ಗುರಿಯನ್ನು ಯಶಸ್ಸಿನ ಗರಿಯಾಗಿಸಬೇಕೆನ್ನುವುದನ್ನು ಅರ್ಥ ಮಾಡಿಸಿತು. ಮೋಜು ಮಸ್ತಿಯಲ್ಲಿ ಸಮಯ ಕಳೆಯುವ ನಾವುಗಳು ಇಂತಹ ಪುಣ್ಯಧಾಮಕ್ಕೊಮ್ಮೆ ಭೇಟಿ ನೀಡಿದಾಗ ಮನಸ್ಸಿಗೆ ಸಿಗುವ ತೃಪ್ತಿ, ಸಾರ್ಥಕತೆ ಇದೆಯಲ್ಲಾ.. ಆ ಸಂತೋಷ ಅದೆಷ್ಟು ಕೋಟಿ ಸಂಪಾದನೆ ಮಾಡಿದರೂ ಸಿಗದು. ಬಾಳಿನಲ್ಲಿ ಎಷ್ಟೇ ಉನ್ನತ ಪಥಕ್ಕೇರಿದರೂ ಸಮಾಜಕ್ಕೊಂದು ಸವಿಯುನಿಸುವ ಮನಸ್ಸಿಗೊಂದು ತೃಪ್ತಿ ಕೊಡುವ ಕಾರ್ಯ ನನ್ನಿಂದಾಗಬೇಕೆಂಬ ಆಶಯ ಮನಸ್ಸಿನಲ್ಲಿ ದೃಢವಾಗಿತ್ತು. ಮನಸ್ಸನ್ನು ತಣಿಸಿದ, ಬದುಕಿಗೆ ಪಾಠ ತಿಳಿಸಿದ ಸೇವಾಭಾವ ಟ್ರಸ್ಟ್ ಗೆ ಧನ್ಯವಾದಗಳನ್ನು ತಿಳಿಸಿ, ಕಳೆದ ಸುಂದರ ಕ್ಷಣಗಳ ಮೆಲುಕು ಹಾಕುತ್ತಾ ವಿದ್ಯಾಸಂಸ್ಥೆಗೆ ಹಿಂದಿರುಗಿದೆವು.
-ಅಖಿಲಾ ಶೆಟ್ಟಿ
ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್, ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ