'ಮತ್ತೆ ಹಾಡಿತು ಕೋಗಿಲೆ' ಖ್ಯಾತಿಯ ಯಕ್ಷಭಾಗವತ ಸದಾಶಿವ ಅಮೀನ್ ಕೊಕ್ಕರ್ಣೆ

Upayuktha
0

ಸಾಹಿತ್ಯ, ಸಂಗೀತ, ನೃತ್ಯದೊಂದಿಗೆ ಸಮನ್ವಿತಗೊಂಡ ವಿಶಿಷ್ಟ ಜನಪದ ಕಲೆ ಯಕ್ಷಗಾನ. ಅತ್ಯಂತ ಪ್ರಾಚೀನವಾದ ಈ ಪ್ರದರ್ಶನ ಕಲಾ ಪ್ರಕಾರವು ಆಯಾ ಸ್ಥಳಕ್ಕೆ ಅನುಗುಣವಾಗಿ ಬಹುರೂಪಗಳೊಂದಿಗೆ ಜನರ ಜೊತೆ ಮಿಳಿತವಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಪಡುವಲಪಾಯ ಎಂತಲೂ, ಹಳೇ ಮೈಸೂರು ಭಾಗದಲ್ಲಿ ಮೂಡಲಪಾಯ ಎಂದು ಗುರುತಿಸಿಕೊಂಡಿದೆ. ಇಂತಹ ಒಂದು ಪ್ರಾಚೀನ ಕಲೆಯಲ್ಲಿ ಮಿಂಚುತ್ತಿರುವ ಭಾಗವತರು ಶ್ರೀಯುತ ಸದಾಶಿವ ಅಮೀನ್ ಕೊಕ್ಕರ್ಣೆ.


22.06.1967 ರಂದು ತುಂಗಕ್ಕ ಹಾಗೂ ಸುಕ್ರ ಬಂಗೇರ ಇವರ ಮಗನಾಗಿ ಜನನ. 8ನೇ ತರಗತಿವರೆಗೆ ವಿದ್ಯಾಭ್ಯಾಸ. ಶಾಲಾ ದಿನಗಳಲ್ಲಿ ಯಕ್ಷಗಾನದ ಬಗ್ಗೆ ಇದ್ದ ಅತೀವ ಆಸಕ್ತಿ ಮತ್ತು ಬಡತನ ಇವರನ್ನು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಅಮೀನ್ ಅವರು ಹೇಳುತ್ತಾರೆ.

ನೀಲಾವರ ರಾಮಕೃಷ್ಣಯ್ಯ ಇವರ ಯಕ್ಷಗಾನ ಗುರುಗಳು, ದಿ.ಕಾಳಿಂಗ ನಾವುಡರು ಇವರ ರಂಗದ ಗುರುಗಳು. 


ಚೆಲುವೆ ಚಿತ್ರಾವತಿ, ನಾಗಶ್ರೀ, ಶನೀಶ್ವರ ಮಹಾತ್ಮೆ, ಭಸ್ಮಾಸುರ ಮೋಹಿನಿ, ರತ್ನಾವತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಚಂದ್ರಹಾಸ, ಶ್ವೇತಕುಮಾರ ಚರಿತ್ರೆ ಹೀಗೆ ಹಲವಾರು ಪೌರಾಣಿಕ ಪ್ರಸಂಗಗಳು ಇವರ ಇಷ್ಟದ ಪ್ರಸಂಗಗಳು.

ಕಾಳಿಂಗ ನಾವುಡ, ಸುಬ್ರಹ್ಮಣ್ಯ ಆಚಾರ್ಯ ಯುವ ಪೀಳಿಗೆಯಲ್ಲಿ ಗಣೇಶ್ ಆಚಾರ್ಯ, ಚಂದ್ರಕಾಂತ್ ಮೂಡುಬೆಳ್ಳೆ ಇವರ ನೆಚ್ಚಿನ ಭಾಗವತರು.

ಪ್ರಿಯ, ಹಂಸಾನಂದಿ, ಶಿವರಂಜಿನಿ, ಪೂರ್ವಿ, ಆನಂದ ಭೈರವಿ, ಕಾನಡ, ಮದ್ಯಮಾವತಿ, ನಾಟಿ, ಅಠಾಣ ನೆಚ್ಚಿನ ರಾಗಗಳು.

ಅಮರಮಂಜರಿ, ಮಧುರ ಮಂಜರಿ, ಸ್ವಪ್ನ ಮಾಂಗಲ್ಯ, ಮದು ಮಾಲತಿ, ಪದ್ಮಶ್ರೀ ಕಲಾವತಿ, ಷಣ್ಮುಖ ಇವರು ಬರೆದ ಪ್ರಸಂಗಗಳು.

ಮಂದಾರ್ತಿ ರಾಮಕೃಷ್ಣ ಇವರ ನೆಚ್ಚಿನ ಚೆಂಡೆ ವಾದಕರು. ಪ್ರಭಾಕರ ಭಂಡಾರಿ ಕರ್ಕಿ, ರಾಘವೇಂದ್ರ ಹೆಗ್ಡೆ ಯಲ್ಲಾಪುರ ನೆಚ್ಚಿನ ಮದ್ದಳೆಗಾರರು.

ಯಕ್ಷಗಾನ ಪ್ರಾರಂಭದಲ್ಲಿ ಪ್ರಹ್ಲಾದ, ಪರಶುರಾಮ, ಬಾಲಸುದೀರ, ರತಿ, ಕನಕಾಂಗಿ, ಬಾಲಕೃಷ್ಣ, ಬಾಲ ಚಂದ್ರಹಾಸ ಮುಂತಾದ ವೇಷ ಮಾಡಿದ್ದೆ ಎಂದು ಸದಾಶಿವ ಅಮೀನ್ ಕೊಕ್ಕರ್ಣೆ.


ಯಕ್ಷಗಾನ ಕಲೆಗೆ ವರ್ತಮಾನದಲ್ಲಿ ತುಂಬಾ ಬೆಲೆಯಿದೆ. ಶ್ರೀ ಪಟ್ಲ ಸತೀಶ್ ಶೆಟ್ಟಿಯವರಂತಹ ಮಹಾನುಭಾವರಿಂದ ಕಲಾವಿದರು ಸ್ವಾಭಿಮಾನಿಗಳಾಗಿ ಶಿಸ್ತಿನಿಂದ ಬದುಕಲು ಅವಕಾಶವಿದೆ. ವಿದ್ಯಾವಂತ ಶ್ರೀಮಂತ ವರ್ಗದವರೂ ಯಕ್ಷಗಾನವನ್ನು ಗೌರವಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಈಗ ಯಕ್ಷಗಾನಕ್ಕೆ ಅಪರಿಮಿತ ಪ್ರೋತ್ಸಾಹಕರು ಇದ್ದಾರೆ. ಆದರೆ ಸಾರ್ವಜನಿಕ ಬದುಕಿನ ಜಂಜಾಟದಲ್ಲಿ ಪ್ರೇಕ್ಷಕರ ಕೊರತೆಯಿದೆ, ಅದಕ್ಕೆ ಕಾಲಮಿತಿ ಪ್ರಯೋಗವೇ ಮದ್ದು. ಇಡೀ ರಾತ್ರಿ ಆಟ ನೋಡುವ ಪ್ರೇಕ್ಷಕ ವರ್ಗ ಶೇಕಡಾ ಹತ್ತು ಇದೆ, ಸಂಪ್ರದಾಯವಾದಿಗಳು ಸರಿಯಾಗಿ ಎಂಟು ತಾಸು ಆಟನೋಡಿ ವಿಮರ್ಶೆ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ ಸದಾಶಿವ ಅಮೀನ್ ಕೊಕ್ಕರ್ಣೆ.


ಮಂದಾರ್ತಿ, ಸೌಕೂರು, ಕಮಲಶಿಲೆ, ಸಾಲಿಗ್ರಾಮ ಮೇಳದಲ್ಲಿ ಒಟ್ಟು ಮೊದಲು ಹದಿನೈದು ವರುಷ ತಿರುಗಾಟ ಮಾಡಿ ಕಾರಣಾಂತರದಿಂದ ಮದ್ಯದಲ್ಲಿ ಇಪ್ಪತ್ತು ವರುಷ ಯಕ್ಷಗಾನದಿಂದ ದೂರ ಉಳಿದೆ. ಪ್ರಸ್ತುತ ಆರು ವರ್ಷಗಳಿಂದ ಮತ್ತೆ ಮಂದಾರ್ತಿ ಮೇಳದಲ್ಲಿ ಸೇವೆಯನ್ನು ಮಾಡುತ್ತಿದ್ದೇನೆ. ನಾನು ಯಕ್ಷಗಾನ ರಂಗಕ್ಕೆ ಪುನಃ ಬರಲು ಶ್ರೀ ಅಶೋಕ್ ಕುಂದರ್ ಮಂದಾರ್ತಿ ಹಾಗೂ ಅಪರಿಮಿತ ಕಲಾಭಿಮಾನಿಗಳು ಕಾರಣ ಎಂದು ಹೇಳುತ್ತಾರೆ ಸದಾಶಿವ ಅಮೀನ್ ಕೊಕ್ಕರ್ಣೆ.


ಮಳೆಗಾಲದಲ್ಲಿಯೂ ಯಕ್ಷಗಾನ ಮಾಡುವ ಮೂಲಕ ನಮ್ಮ ಆರ್ಥಿಕ ಭದ್ರತೆಯ ಜತೆಗೆ ಹಲವಾರು ಕಲಾವಿದರಿಗೆ ಸಹಾಯ ಆಗುವುದರಿಂದ ಸಹೋದರ ದಿನಕರ ಕುಂದರ್ ಅವರ ಜೊತೆಗೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಎಂಬ ಮಂಡಳಿಯನ್ನು ಸ್ಥಾಪಿಸಿದ್ದೇವೆ. ಈಗಾಗಲೇ ಎರಡು ವರ್ಷದಿಂದ ಮುಂಬೈ, ಗೋವ, ಕರ್ನಾಟಕದಾದ್ಯಂತ ನೂರಕ್ಕೂ ಅಧಿಕ ಪ್ರದರ್ಶನ ನೀಡಿದ್ದೇವೆ. ಮುಂದಕ್ಕೂ ಪ್ರತಿವರ್ಷ ಮಳೆಗಾಲದಲ್ಲಿ ನೂರು ಪ್ರದರ್ಶನ ನೀಡುವ ಇಚ್ಚೆಯಿದೆ ಸಹೃದಯಿ ಕಲಾಭಿಮಾನಿಗಳ ಸಹಕಾರ ಬಯಸುತ್ತೇನೆ.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮುಂಬೈ, ಹೈದರಾಬಾದ್, ಬೆಂಗಳೂರು, ಮೈಸೂರು ಹಾಗೂ ಹಲವಾರು ಸಂಘ ಸಂಸ್ಥೆಯವರಿಂದ ಇನ್ನೂರಕ್ಕೂ ಹೆಚ್ಚು ಗೌರವ ಸನ್ಮಾನ ದೊರೆತಿದೆ.


ಸದಾಶಿವ ಅಮೀನ್ ಕೊಕ್ಕರ್ಣೆ ಅವರು 30.05.1989 ರಂದು ಮೀನಾಕ್ಷಿಯವರನ್ನು ಮದುವೆಯಾಗಿ ಮಗಳು ಸುಜನ, ಅಳಿಯ ನವನೀತ, ಮಗ ಶೋಧನ, ಮೊಮ್ಮಗಳು ಸಂಸ್ಕೃತಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top