ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾವಿಶ್ವಸಭಾಂಗಣದಲ್ಲಿ 'ಪ್ರತಿಪದಾನಂದ' ಸಂಗೀತೋತ್ಸವ ಗುರುವಾರ ಸಂಜೆ ನಡೆಯಿತು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಡಿನ ಪ್ರಖ್ಯಾತ ಸಂಗೀತಗಾರರಾದ ಕಾಂಚನಸಹೋದರಿಯರು ಎಂದೇ ಪ್ರಸಿದ್ಧಿ ಪಡೆದ ವಿದುಷಿ ಶ್ರುತಿರಂಜನಿ ಮತ್ತು ವಿದುಷಿ ಶ್ರೀರಂಜನಿ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ತ್ಯಾಗರಾಜರ ಕೃತಿಗಳಲ್ಲೊಂದಾದ ಆಂದೋಳಿಕಾ ರಾಗ ಏಕೈರಚನೆಯ ಕೃತಿಯೊಂದನ್ನು ಆರಂಭ ಕೀರ್ತನೆಯಾಗಿ ಪ್ರಸ್ತುತಪಡಿಸಿದರು. ಬಳಿಕ ವಾಸುದೇವಚಾರ್ಯ ಹಾಗೂ ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ಹಾಡಿದರು.
ರಾಗಂ- ತಾನಂ- ಪಲ್ಲವಿಯ ಮೂಲಕ ಶ್ರೀಗುರು ನಮಸ್ತೇ ಕರುಣಾಸಾಗರ ಶ್ರೀಗುರು ರಾಘವೇಶ್ವರಭಾರತೀ ನಮಸ್ತೇ ಹಾಡಿನ ಮೂಲಕ ಭಕ್ತಿಯ ಅಲೆಯನ್ನೆಬ್ಬಿಸಿದರು. ಅಚ್ಯುತಂ ಕೇಶವಂ ಮತ್ತು ಶ್ರೀರಾಮ ರಘುನಂದನ ರಾಮ ಭಜನೆಯನ್ನು ಮಕ್ಕಳಿಗೆ ರಾಗಬದ್ಧವಾದ ಗೀತೆಯನ್ನು ಪಾಠ ಮಾಡಿದರು.
ವಿದ್ವಾನ್ ನಿತೀಶ್ ಅಮ್ಮಣ್ಣಾಯರ ಕೊಳಲು, ವಿದ್ವಾನ್ ಕೆ.ಯು.ಜಯಚಂದ್ರ ರಾವ್ ಅವರ ಮೃದಂಗ, ವಿದ್ವಾನ್ ಭಾರ್ಗವ ಹಾಲಂಬಿಯವರ ಖಂಜೀರ ಮತ್ತು ವಿದ್ವಾನ್ ಕಾರ್ತಿಕ ಕೃಷ್ಣರ ತಬಲಾ ವಾದ್ಯಗಳ ಜುಗಲ್ಬಂದಿಯು ಅತ್ಯಾಕರ್ಷಕವಾಗಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಿದಮ್ ಪ್ಯಾಡ್ ಹಾಗೂ ಖಂಜೀರವಾದ್ಯಗಳ ಪರಿಚಯವನ್ನು ಮಾಡಿಕೊಡಲಾಯಿತು. ಗುರುಕುಲದ ಕರ್ನಾಟಕ ಸಂಗೀತ ಶಿಕ್ಷಕ ರಘುನಂದನ ಬೇರ್ಕಡವು ಸ್ವಾಗತಿಸಿದರು.
ಎರಡು ಗಂಟೆಗಳ ಕಾಲದ ಆನಂದದಾಯಕ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮನೋರಂಜನೆಯ ಜತೆಗೆ ಸಂಗೀತದ ಅರಿವನ್ನೂ ಮೂಡಿಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ