ಕನ್ನಡ ಸಾರಸ್ವತ ಲೋಕ ಕಂಡಂತಹ ಅತ್ಯಂತ ಅಪರೂಪದ ಮತ್ತು ಅನರ್ಘ್ಯ ರತ್ನ ಬೀಚೀ ಅಂದರೆ ಅತಿಶಯೋಕ್ತಿಯಾಗದು. ಕನ್ನಡ ಸಾಹಿತ್ಯ ಲೋಕದಲ್ಲಿ ಕರ್ನಾಟಕದ 'ಜಾರ್ಜ್ ಬರ್ನಾಡ್‌ಷಾ' ಎಂಬ ಬಿರುದನ್ನು ಅವರು ಪಡೆದಿದ್ದರು. ಅತ್ಯಂತ ಮಾರ್ಮಿಕನಾಗಿ, ಸಂವೇದನಾಶೀಲರಾಗಿ ಮತ್ತು ಚುರುಕು ಮುಟ್ಟಿಸುವ ರೀತಿಯಲ್ಲಿ ಭಾಷೆಯನ್ನು ಬಳಸಿದ ಕೆಲವೇ ಕೆಲವು ಅಗ್ರಗಣ್ಯ ಹಾಸ್ಯ ಕವಿಗಳಲ್ಲಿ ಬೀಚೀ ಯವರೂ ಒಬ್ಬರು. ಅವರ ಪೂರ್ತಿ ಹೆಸರು ರಾಯಸಂ ಭೀಮಸೇನ ರಾವ್ ಎಂಬುದಾಗಿದೆ. ಆದರೆ ಅವರ ಕಾವ್ಯ ನಾಮ ಎಷ್ಟು ಚಿರಪರಿಚಿತವಾಗಿದೆ ಎಂದರೆ ಅವರ ಮೂಲ ಹೆಸರನ್ನು ಎಲ್ಲರೂ ಮರೆತು ಹೋಗುವಷ್ಟರ ಮಟ್ಟಿಗೆ ಅವರು ಬೀಚೀ ಎಂಬ ಹೆಸರಿನಿಂದ ಪ್ರಸಿದ್ದರಾಗಿದ್ದರು.
ಕನ್ನಡದ ಬಗ್ಗೆ ಅಪರಿಮಿತವಾದ ಗೌರವ ಮತ್ತು ಪ್ರೀತಿ ಇದ್ದ ಕಾರಣದಿಂದ ತಮ್ಮ ಕಾವ್ಯನಾಮ ಬೀಚೀ ಬದಲಾಗಿ ಬೀಚೀ ಎಂದು ಬರೆದು ನಾನು ಇಂಗ್ಲೀಷಿಗಿಂತ ಕನ್ನಡಕ್ಕೇ ಆದ್ಯತೆ ನೀಡುತ್ತೇನೆ ಎಂದು ಪರೋಕ್ಷವಾಗಿ ಓದುಗರಿಗೆ ಮತ್ತು ನಾಡಿನ ಜನರಿಗೆ ಸಂದೇಶ ನೀಡಿದ್ದರು. 1913 ಏಪ್ರಿಲ್ 23 ರಂದು ಹರಪನ ಹಳ್ಳಿಯಲ್ಲಿ (ಈಗಿನ ವಿಜಯನಗರ ಜಿಲ್ಲೆ) ಜನಿಸಿ, 67 ವರ್ಷಗಳ ತುಂಬು ಜೀವನ ನಡೆಸಿ 1980, ಡಿಸೆಂಬರ್ 7 ರಂದು ಮರಣಿಸಿದರು. ಸಂಪ್ರದಾಯಸ್ಥ ಮಾಧ್ವ ಕುಟುಂಬವೊಂದರಲ್ಲಿ ಬೀಚೀ ಅವರು ಆರ್. ಶ್ರೀನಿವಾಸರಾಯರು ಮತ್ತು ಭಾರತಮ್ಮ ದಂಪತಿಗಳ ಎರಡನೇ ಮಗನಾಗಿ ಜನಿಸಿದರು. ಎಸ್.ಎಸ್.ಎಲ್.ಸಿ ವರೆಗೆ ಕಲಿತ ಅವರು ಪೊಲೀಸ್ ಇಲಾಖೆಯಲ್ಲಿ ಅಟೆಂಡರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.
ಅಪ್ರತಿಮ ವ್ಯಂಗ ಶೈಲಿಯಲ್ಲಿ ಬೀಚೀ ಯವರು ಕನ್ನಡ ಭಾಷೆಯ ಬೇರುಗಳೊಳಗೆ ನೀರಿನಂತೆ ಇಳಿದು, ಅವರ ಒಳ ಮೈಯ ಇಕ್ಕಟ್ಟಾದ ಸ್ಥಳಗಳನ್ನು ಶೋಧಿಸುವ ಕೆಲಸವನ್ನು ಅತ್ಯಂತ ಮಾರ್ಮಿಕವಾಗಿ ಮನಮುಟ್ಟುವಂತೆ ಕೈಗೊಂಡು ಕನ್ನಡಿಗರ ಜನ ಮಾನಸದಲ್ಲಿ ಅಜರಾಮರರಾದರು.
ಆರಂಭದಲ್ಲಿ ಪ್ರಸಿದ್ಧ ಇಂಗ್ಲೀಷ್ ಕಾದಂಬರಿಗಳ ನಗೆ ಚುಟುಕುಗಳ ಸಾಮಾಗ್ರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅವರ ಅನುವಾದದಲ್ಲಿ ಕನ್ನಡದ ಮತ್ತು ಭಾಷಾ ಪ್ರಜ್ಞೆಯ ಛಾಪು ಇದೆ. ತನ್ನದೇ ವಿಶಿಷ್ಟ ಶೈಲಿಯಲ್ಲಿ ಶಬ್ದಗಳ ಬೆನ್ನು ಹತ್ತಿ, ಅವರ ವಕ್ರಗತಿಗಳನ್ನು ತೋರಿಸಿಕೊಡುವುದು ಮತ್ತು ಹಾಸ್ಯದೃಷ್ಟಿಯನ್ನಿರಿಸಿಕೊಂಡು, ಶಬ್ದದ ಆಚೆ ಈಚೆಗೆ ವಿಚಾರದ ಮಗ್ಗುಲುಗಳನ್ನು ಅವರು ಬಹಳ ಸಲೀಸಾಗಿ, ಲೀಲಾಜಾಲವಾಗಿ ಮಾರ್ಮಿಕವಾಗಿ ಹೊರಹಾಕುತ್ತಿದ್ದರು. ಎಲ್ಲರಂತೆ ಬೀಚೀ ಅವರಿಗೆ ಮೊದಲು ಕನ್ನಡದ ಬಗ್ಗೆ ತಾತ್ಸರ ಮತ್ತು ಅಸಡ್ಡೆ ಇತ್ತು.
ಅವರ ಪತ್ನಿಗೆ ಕನ್ನಡ ಅಭಿಮಾನ ಮತ್ತು ಹುಚ್ಚು ಸ್ವಲ್ಪ ಹೆಚ್ಚೇ ಇತ್ತು. ಅವರ ಪತ್ನಿಯ ವತ್ತಾಯಕ್ಕೆ ಮಣಿದು ತಿರಸ್ಕಾರದ ಭಾವದಿಂದಲೇ ಪುಸ್ತಕದ ಅಂಗಡಿಗೆ ಹೋಗಿ “ಯಾವುದಾದರೂ ಕನ್ನಡ ಪುಸ್ತಕ ಕೊಡಿ, ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿ ಇಲ್ಲ ಆದರೆ ಕನ್ನಡದಲ್ಲಿ ಇರಬೇಕು ಎಂದರಂತೆ. ಪುಣ್ಯಕ್ಕೆ ಅಂಗಡಿಯವ ಕೊಟ್ಟ ಪುಸ್ತಕ ‘ಸಂಧ್ಯಾ ರಾಗ’ ಎಂಬ ಕಾದಂಬರಿ. ಅದನ್ನು ರೈಲು ಪ್ರಯಾಣದ ಸಮಯದಲ್ಲಿ ಕದ್ದು ಓದಿದ ಬೀಚೀ ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು. ಆ ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಹಾಸ್ಯ ಬರಹ ಬರೆಯಲು ಆರಂಭಿಸಿದರು. ಮುಂದೆ ನಡೆದದ್ದು ಇತಿಹಾಸ.
ಬೀಚೀ ಅವರ ಹೆಚ್ಚಿನ ಎಲ್ಲಾ ಬರಹಗಳಿಗೆ ನಾಯಕ ತಿಂಮ. ಅದೇ ತಿಂಮನ ವಿಚಾರವಾಗಿ ಅವರ ವ್ಯಾಖ್ಯಾನ ಹೀಗಿದೆ. “ಯಾವೊಬ್ಬ ತಿರುಮಲರಾಯನನ್ನಾಗಲಿ, ತಿಂಮಪ್ಪನನ್ನಾಗಲಿ ಮುಂದಿಟ್ಟುಕೊಂಡು ಇದನ್ನು ಬರೆದಿಲ್ಲ. ಮಕ್ಕಳ ಆಟದಲ್ಲಿ, ಗೆಳೆಯರ ಕೂಟದಲ್ಲಿ ಹಿರಿ ಕಿರಿಯರ, ಕಿರಿ ಹಿರಿತನಗಳಲ್ಲಿ, ಚತುರರ ಹೆಡ್ಡತನದಲ್ಲಿ, ಹೆಡ್ಡರ ದೊಡ್ಡತನದಲ್ಲಿ ಕಂಡುಕೇಳಿದ ಚೇಷ್ಟೆಗಳಿಗೆಲ್ಲ ಪಾಪ ತಿಂಮನನ್ನೆ ನಾಯಕನನ್ನಾಗಿ ಒಡ್ಡಿದ್ದೇನೆ. ತಿಂಮನ ನಗು ದೇಹವಾದರೆ, ಆ ನಗುವಿನ ಹಿಂದೆ ಹುದುಗಿ ಕೊಂಡಿರುವ ನೋವೇ ಜೀವ. ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ.
ಕೃತಿಗಳು:
ಬೀಚೀ ಯವರು ಸುಮಾರು 66 ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 35 ಕಾದಂಬರಿಗಳು ಅಂದನಾ ತಿಂಮ, ತಿಂಮ ಸತ್ತಾಗ, ತಿಂಮನ ತಲೆ, ತಿಂಮಾಯಣ, ತಿಮ್ಮಿಕ್ಷನರಿ, ತಿಂಮ ರಸಾಯನ, ಉತ್ತರ ಭೂಪ, ತೋಚಿದ್ದು ಗೀಚಿದ್ದು, ಸುಬ್ಬ ಸಾಹೂಕಾರ ಸುಬ್ಬಮ್ಮ, ಮೇಡಮ್ಮನ ಗಂಡ, ಬೀಚೀ ಬುಲೇಟಿನ್, ಅಮ್ಮಾವ್ರ ಕಾಲ್ಗುಣ, ಆರಿದ ಚಹಾ.. ಬಹಳ ಪ್ರಸಿದ್ಧ ಕಾದಂಬರಿಗಳು. ಅವರ ಅಂಕಣಬರಹಗಳಾದ ಕೆನೆಮೊಸರು (ವಿಶಾಲ ಕರ್ನಾಟಕ), ಬೇವಿನ ಕಟ್ಟಿ( ರೈತ), ನೀವು ಕೇಳಿವಿರಿ (ಸುಧಾ), ಬಹಳ ವಿಶ್ವ ವಿಖ್ಯಾತಿಯನ್ನು ಅವರಿಗೆ ತಂದುಕೊಟ್ಟಿತು. ಅವರ ಆತ್ಮ ಕತೆ ‘ನನ್ನ ಭಯಾಗ್ರಫಿ’ ಕೂಡಾ ಅವರ ಮನೋಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು.
ಭೀಮಸೇನ ಹೇಗೆ ಬೀಚೀಯಾದ್ದದು?
ಬೀಚೀಯವರ ನಿಜ ನಾಮದ್ಯೆಯದಲ್ಲಿ ಹೆದರಿಕೆ ಹುಟ್ಟಿಸುವಂತಹ ಬಲಶಾಲಿಯಾದ ಭೀಮಸೇನ ಇದ್ದಾನೆ. ಆದರೂ ತಾನು ಯಾಕೆ ಬೀಚೀಯಾದೆ ಎಂಬುದರ ಬಗ್ಗೆ, ಅವರ ಹೆಸರಿನ ಬಗ್ಗೆ ಅವರ ನೀಡಿದ ವ್ಯಾಖ್ಯಾನ ಅತ್ಯಂತ ಮಾರ್ಮಿಕವಾಗಿದೆ. “ಪಾರ್ಥಸಾರಥಿ ಪಾಚು ಆಗುತ್ತಾನೆ, ನಾರಾಯಣ ನಾಣಿ, ಅಂತೆಯೇ ಭೀಮಸೇನ ಬೀಚೀಯಾದ. ಅವರಿವರ ಬಾಯಿಯಲ್ಲಿ ಹಾಗಾದುದೇ ಒಳ್ಳೆಯದಾಯಿತು. ಸದಾ ಕರುಳಿನ ಬೇನೆಯಿಂದ ನರಳುವ ಈ ಹೊಟ್ಟೆ ರೋಗಿ ‘ಭೀಮಸೇನ ಹೇಗಾದಾನು?’” (ವಾಸ್ತವದಲ್ಲಿ ಬೀಚೀಯವರಿಗೆ ಕುಡಿತದ ಚಟವಿತ್ತು ಮತ್ತು ಯಾವತ್ತೂ ಹೊಟ್ಟೆ ನೋವು ಕಾಡುತ್ತಿತ್ತು. ನೋಡಲೂ ಕೂಡ ಕಡ್ಡಿ ಪೈಲ್ವಾನ್ ತರ ಪೀಚಲು, ಪೀಚಲಾಗಿ ಇರುತ್ತಿದ್ದರು) ಹೀಗಾಗಿ ಈ ಕಾಚಿಕಡ್ಡಿ ಪೈಲುವಾನ್ ಅವರ ಅಮ್ಮನ ಮುದ್ದಿನ ನುಡಿಗತ್ತರಿಗೆ ಸಿಲುಕಿ ಬೀಚೀಯಾದ ಎಂದು ಅವರು ಅತ್ಯಂತ ಹಾಸ್ಯಮಯವಾಗಿ ತಮ್ಮನ್ನೇ ಹಾಸ್ಯದ ವಸ್ತುವಾಗಿ ಮಾಡಿಕೊಂಡು ತಮ್ಮ ಹೆಸರಿನ ಹಿಂದಿನ ರಹಸ್ಯವನ್ನು ಜಗತ್ತಿಗೆ ತೆರೆದಿಟ್ಟಿದ್ದರು.
ಕೊನೆ ಮಾತು:
ಬೀಚಿಯವರ ಮೊದಲ ಕಾದಂಬರಿ ದಾಸರಕೂಟ, 1945 ರಲ್ಲಿ ಪ್ರಕಟಣೆಯಾಯಿತು. ಆಗ ಅವರಿಗೆ 32 ವರ್ಷ ವಯಸ್ಸು ಆಗಿತ್ತು. ಈ ಪುಸ್ತಕ ಅವರಿಗೆ ಬಹಳಷ್ಟು ಖ್ಯಾತಿ ಮತ್ತು ಹೆಸರು ತಂದು ಕೊಟ್ಟಿತು. ಆ ಬಳಿಕ ಅವರು ಅತ್ಯಂತ ಪರಿಣಾಮಕಾರಿಯಾಗಿ ಸಮಾಜದ ಜ್ವಲಂತ ಸಮಸ್ಯೆಗಳನ್ನು ಬಣ್ಣಿಸಿ ಜನಪ್ರತಿಸಿಧಿಗಳಿಗೆ ಮತ್ತು ಸರಕಾರಕ್ಕೆ ಚುರುಕು ಮುಟ್ಟಿಸುವ ಕಲೆಯನ್ನು ಕರಗತ ಮಾಡಿಕೊಂಡರು. ಸಮಾಜದ ಜನರ ಮನೋಸ್ಥಿತಿಯನ್ನು, ರಾಜಕಾರಣಿಗಳ ಎಡೆಬಿಡಂಗಿತನವನ್ನು ಅತ್ಯಂತ ಕಟುಶಬ್ದಗಳಲ್ಲಿ ವ್ಯಂಗ್ಯವಾಗಿ ಹೇಳಿ ದಾರಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದರು. ಕನ್ನಡ ಹಾಸ್ಯ ಸಾಹಿತ್ಯ ಲೋಕ ಕಂಡಂತಹಾ ಅತ್ಯಂತ ಪ್ರತಿಭಾನ್ವಿತ ಮತ್ತು ವಿಶಿಷ್ಟ ಶೈಲಿಯ ಲೇಖಕರು ಅವರಾಗಿದ್ದರು.
ಅವರ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಕವರನ್ನು ಹೊರ ತಂದು ಅವರ ಸಾಹಿತ್ಯ ಸೇವೆಯನ್ನು ಗುರುತಿಸಿತ್ತು. ಅವರ ಬರವಣಿಗೆಯಲ್ಲಿನ ಹೊಸತನ, ಅಸಾಂಪ್ರದಾಯಕವಾದ ಬರವಣಿಗೆ ಶೈಲಿ, ವ್ಯಂಗಭರಿತ ಬರವಣಿಗೆ ಮತ್ತು ತಾಜಾತನ ಅವರನ್ನು ಕನ್ನಡ ಸಾರಸ್ವತ ಲೋಕದ ಮಿನುಗುತಾರೆಯನ್ನಾಗಿಸಿತು ಎಂದರೆ ಅತಿಶಯೋಕ್ತಿಯಾಗಲಾರದು. ಯಾವ ವಿಚಾರವನ್ನು ಮುಚ್ಚಿಡದೆ, ಸಮಾಜದ ಎಲ್ಲಾ ಜನರ ಮತ್ತು ಜನನಾಯಕರ ಎಡೆ ಬಿಡಂಗಿತನವನ್ನು ಬಹಳ ಸುಲಲಿತವಾಗಿ ತೆರೆದಿಟ್ಟು, ಸಾರ್ವಜನಿಕವಾಗಿ ಅವರನ್ನು ಬೆತ್ತಲು ಮಾಡಿ ಕೆಲಸ ಮಾಡಿಸಿಕೊಳ್ಳುವ ಚಾಕಚಕ್ಯತೆ ಅವರ ಲೇಖನಿಗೆ ಇತ್ತು. ಅಂತಹಾ ಮಹಾನ್ ವ್ಯಕ್ತಿ ಬೀಚಿಯವರ ಅಗತ್ಯ, ನಮ್ಮ ಈಗಿನ ಮುಖವಾಡದ ಬದುಕು ಬದುಕುವ ಜನರನ್ನು ಮತ್ತು ಜನನಾಯಕರನ್ನು ಸರಿದಾರಿಗೆ ತರಲು ಅತೀ ಅಗತ್ಯ ಎಂದರೂ ತಪ್ಪಾಗಲಾರದು.
-ಡಾ|| ಮುರಲೀ ಮೋಹನ್ ಚೂಂತಾರು
BDS, MDS,DNB,MOSRCSEd(U.K), FPFA, M.B.A
ಮೊ : 9845135787
drmuraleechoontharu@gmail.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ