ಲಕ್ಷದೀಪೋತ್ಸವದಲ್ಲಿ ರಸಮಂಜರಿ; ಶ್ರದ್ಧಾಭಕ್ತಿಯೊಂದಿಗೆ ಮನರಂಜನೆಯ ರಸದೌತಣ

Upayuktha
0

ಧರ್ಮಸ್ಥಳ: ದೇವರ ಕುರಿತಾದ ಶ್ರದ್ಧೆ ಹೆಚ್ಚಿಸುವ ಭಕ್ತಿಗೀತೆಗಳೊಂದಿಗೆ ಜನಪ್ರಿಯ ಸಿನಿಮಾದ ಹಾಡುಗಳನ್ನೂ ಒಟ್ಟೊಟ್ಟಿಗೆ ಕೇಳುವ ಅವಕಾಶ ಲಭಿಸಿದರೆ ಹೇಗಿರುತ್ತದೆ? ಒಂದಷ್ಟು ಭಕ್ತಿಭಾವ. ಜೊತೆಗೊಂದಿಷ್ಟು ಮನರಂಜನೆ ಮೇಳೈಸುತ್ತದೆ.


ಇಂಥದ್ದೇ ಅನುಭವವನ್ನು ಲಕ್ಷದೀಪೋತ್ಸವದ ಪ್ರಯುಕ್ತ ಧರ್ಮಸ್ಥಳದ ವಸ್ತುಪ್ರದರ್ಶನ ಭವನದಲ್ಲಿ ಗೋಣಿಕೊಪ್ಪದ ಶ್ರೀ ದುರ್ಗಾ ಮ್ಯೂಸಿಕ್ಸ್ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಹಲವು ಪ್ರೇಕ್ಷಕರಿಗೆ ದಾಟಿಸಿತು.


ಜೀಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಅನ್ವಿತ್ ಹಾಗೂ ಕ್ಷಿತಿ ರೈ ಅವರ ಕಂಠದಲ್ಲಿ ಮೂಡಿ ಬಂದ ಹಾಡುಗಳಿಗೆ ತಬಲವಾದಕ ಗಿರೀಶ್ ಪೆರ್ಲ, ಕೀ ಬೋರ್ಡ್ನಲ್ಲಿ ಅಶ್ವಿನ್‌ಬಾಬಣ್ಣ, ರಿದಮ್‌ನಲ್ಲಿ ಸಚಿನ್ ಪುತ್ತೂರು, ಗಿಟಾರ್‌ನಲ್ಲಿ ಸಂಗೀತಾ ಪುತ್ತೂರು ತಮ್ಮ ಹಿನ್ನೆಲೆ ಸಂಗೀತದ ಮೂಲಕ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿದರು.


ಅಶ್ವಿನ್ ‘ಮಹಪ್ರಾಣ ದೀಪಂ’ ಹಾಡಿನ ಮೂಲಕ ರಸಮಂಜರಿ ಕಾರ್ಯಕ್ರಮ ಶುಭಾರಂಭಗೊಳಿಸಿದರು. ಸಂದರ್ಭಕ್ಕೆ ಸೂಕ್ತವಾಗುವಂತೆ ಮೂಡಿಬಂದ ಮಂಜುನಾಥನ ಭಕ್ತಿ ಗೀತೆ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುವಂತೆ ಮಾಡಿತ್ತು. ಇದರ ಬೆನ್ನಲ್ಲೆ ಕ್ಷಿತಿ ರೈ ಧನಿಯಲ್ಲಿ ಮೂಡಿ ಬಂದ ‘ಆನಂದ ಪರಮಾನಂದ’ ಹಾಡು ಭಾವತನ್ಮಯತೆಯನ್ನು ಸೃಷ್ಟಿಸಿತು. ವಾದ್ಯವೃಂದವು ಗಾಯಕರು ಹಾಡಿದ ಪ್ರತಿ ಹಾಡಿಗೂ ಜೀವ ತುಂಬಿತು.


ಕಾರ್ಯಕ್ರಮದಲ್ಲಿ ಗಾಯನದೊಂದಿಗೆ ನೃತ್ಯದ ಮೂಲಕವು ಜನರನ್ನು ಮನರಂಜಿಸಲಾಯಿತು. ಅನ್ವೀತ್ ಹಾಡಿದ ‘ನಟನ ವಿಶಾರದೆ ನಟಶೇಖರ’ ಹಾಡಿಗೆ ಸಿಂಚನ ಭರತ ನಾಟ್ಯಂ ಶೈಲಿಯಲ್ಲಿ ಹೆಜ್ಜೆ ಹಾಕಿದರು. ನವ ರಸಗಳನ್ನು ಒಳಗೊಂಡಂತಹ ನೃತ್ಯ ಶೈಲಿ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿತ್ತು.


ಕನ್ನಡ ಸೇರಿದಂತೆ ಹಿಂದಿ, ತುಳು ಭಾಷೆಯ ಹದಿನೈದು ಗೀತೆಗಳನ್ನು ವೇದಿಕೆಯ ಮೇಲೆ ಪ್ರಸ್ತುತ ಪಡಿಸಲಾಯಿತು. ಹಿನ್ನೆಲೆ ಸಂಗೀತಗಾರರು ಈ ಹಿಂದೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರೂ ಕೂಡ ಶ್ರೀ ದುರ್ಗಾ ಮ್ಯೂಸಿಕಲ್ ತಂಡಕ್ಕೆ ಇದು ಮೊದಲ ರಸಮಂಜರಿ ಕಾರ್ಯಕ್ರಮ.ಮೊದಲ ಪ್ರಯತ್ನವಾದರೂ ಕೇವಲ ಸಿನಿಮಾ ಹಾಡುಗಳನ್ನಷ್ಟೇ ಕೇಂದ್ರವಾಗಿಟ್ಟುಕೊಳ್ಳದೆ ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಿದ ರೀತಿ ತಂಡದ ಯಶಸ್ವಿ ಪ್ರದರ್ಶನಕ್ಕೆ ಕಾರಣವಾಯಿತು.


ವರದಿ: ಜ್ಯೋತಿ ಜಿ

ದ್ವಿತೀಯ ವರ್ಷ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ


ಚಿತ್ರ: ವಿನೋಲ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top