ಉಜಿರೆ: ಐದನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

Upayuktha
0

ಪ್ರಕೃತಿ ಚಿಕಿತ್ಸಾ ಪದ್ಧತಿಯಿಂದ ಆರೋಗ್ಯ ಭಾಗ್ಯ: ಡಾ.ಎಸ್. ಸತೀಶ್ಚಂದ್ರ


ಉಜಿರೆ: ಆಧುನಿಕ ಜೀವನ ಶೈಲಿ, ಆಹಾರ - ವಿಹಾರ ಪದ್ಧತಿ, ಪರಿಸರ ಮಾಲಿನ್ಯ ಇತ್ಯಾದಿ ಹತ್ತು ಹಲವು ಕಾರಣಗಳಿಂದಾಗಿ ಇಂದು ಆರೋಗ್ಯ ರಕ್ಷಣೆ ದೊಡ್ಡ ಸವಾಲಾಗಿದೆ. ಪ್ರಕೃತಿ ಚಿಕಿತ್ಸಾ ಪದ್ಧತಿಯಿಂದ ಆರೋಗ್ಯ ಭಾಗ್ಯ ರಕ್ಷಣೆ ಸುಲಭ ಸಾಧ್ಯ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ ಹೇಳಿದರು.


ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಐದನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.


ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತರೋಗ ಬರದಂತೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಆರ್ಥಿಕ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಮತ್ತು ಸುಧಾರಣೆಗಳಾದರೂ ಆರೋಗ್ಯ ರಕ್ಷಣೆ ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿದೆ. ಕೊರೊನಾ, ಕ್ಯಾನ್ಸರ್‌ನಂತಹ ಭೀಕರ ರೋಗಗಳು ವಿಶ್ವದೆಲ್ಲೆಡೆ ಭಯ ಮತ್ತು ಆತಂಕವನ್ನುಂಟು ಮಾಡಿವೆ.


ಪ್ರಕೃತಿ ಚಿಕಿತ್ಸಾ ಪದ್ಧತಿಯ ವೈದ್ಯರು ಸಂಸ್ಥೆಯ ರಾಯಭಾರಿಗಳಾಗಿ ಪ್ರೀತಿ-ವಿಶ್ವಾಸದಿಂದ ಆರೋಗ್ಯ ಸೇವೆ ನೀಡಬೇಕು ಎಂದು ಅವರು ಸಲಹೆ ನೀಡಿದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ದೇಶದಲ್ಲೆ ಪ್ರಥಮವಾಗಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದ ಪದವಿ ಶಿಕ್ಷಣ ನೀಡುವ ಕಾಲೇಜು ಆರಂಭಿಸಿ ಪ್ರಕೃತಿ ಚಿಕಿತ್ಸಾ ವಿಧಾನಕ್ಕೆ ಕಾಯಕಲ್ಪ ನೀಡುತ್ತಿರುವ ಬಗ್ಗೆ ಅವರು ಅಭಿನಂದಿಸಿದರು.


ಉಜಿರೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ತಮಿಳುನಾಡು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡಾ. ಶಿಮ್‌ಜಿ ನಾಯರ್ ಮಾತನಾಡಿ ತಾನು ಈ ಕಾಲೇಜಿನಲ್ಲಿ ಕಲಿತು ಎಸ್.ಡಿ.ಎಂ. ಸಂಸ್ಕೃತಿ ಅಳವಡಿಸಿಕೊಂಡಿದ್ದು ತನ್ನ ವೃತ್ತಿ ಮತ್ತು ಪ್ರವೃತ್ತಿಗೆ ಪ್ರೇರಕಶಕ್ತಿಯಾಗಿದೆ ಎಂದು ಕೃತಜ್ಞತೆ ವ್ಯಕ್ತ ಪಡಿಸಿದರು.


ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸೇಲಂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಆರ್. ಮಾಲತಿ ಮತ್ತು ಬೆಳ್ತಂಗಡಿ ಪ್ರಸನ್ನಆಯುರ್ವೇದ ಕಾಲೇಜಿನ ಡಾ. ವೃಂದಾ ಬೆಡೇಕರ್‌ ಅವರನ್ನು ಗೌರವಿಸಲಾಯಿತು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಸುಜಾತ, ಮಾತನಾಡಿ ವಿಚಾರ ಸಂಕಿರಣ, ಆರೋಗ್ಯ ಶಿಬಿರಗಳ ಮೂಲಕ ಜನರಿಗೆ ಪ್ರಕೃತಿಚಿಕಿತ್ಸಾ ಪದ್ಧತಿ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.


ಕಾಲೇಜಿನ ಡೀನ್‌ ಡಾ. ಗೀತಾ ಬಿ. ಶೆಟ್ಟಿ ಸ್ವಾಗತಿಸಿದರು. ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ಡಾ. ಜ್ಯೋಸ್ನಾ, ಜೆರ್ಲಿನ್ ಮತ್ತು ಮಂಜುನಾಥ್‌ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top