ಬೆಳಗ್ಗೆ ಎದ್ದು ಕಾಲೇಜಿಗೆ ಹೋಗಲು ಹೊರಡಲು ಶುರು ಮಾಡಿದರೆ ಸಮಯ ಮೀರಿದ್ದೇ ತಿಳಿಯದು. ಮನೆಯಿಂದ ಬಸ್ ತಂಗುದಾಣಕ್ಕೆ ತೆರಳಲು ಕಡಿಮೆ ಅಂದರೂ 20 ನಿಮಿಷವಾದರು ಬೇಕೇ ಬೇಕು. ಆದರೆ ಏನು ಮಾಡುವುದು... ನನ್ನ ಸಿಂಗಾರ ಕನ್ನಡಿಯ ಎದುರು ಮುಗಿಯಬೇಕಲ್ಲವೇ? ಕ್ಲಾಸಿನಲ್ಲಿ ಕುಳಿತಾಗ ಸಮಯ ಬೇಗ ತೀರದು. ಕೈಯಲ್ಲಿದ್ದ ವಾಚನ್ನ ಅದೆಷ್ಟು ಬಾರಿ ನೋಡುತ್ತೇನೋ ಲೆಕ್ಕಾನೆ ಸಿಗದು. ಆದರೆ ಕನ್ನಡಿ ಮುಂದೆ ನಿಂತಾಗ ಅಂತೂ ಸಮಯ ಭಾರಿ ವೇಗದಲ್ಲಿ ಓಡುತ್ತದೆ ಎಂದೆನಿಸುವುದುಂಟು. ಅದೇನೆ ಆಗಲಿ ಕಾಲೇಜಿಗೆ ಹೋಗುವಾಗಂತೂ 20 ನಿಮಿಷದ ದಾರಿಯನ್ನು ನಾನು ಕೇವಲ 10 ನಿಮಿಷದಲ್ಲಿ ತಲುಪುವೆ. ಅದ್ಹೇಗೆ ಅನ್ನುತ್ತೀರಾ? ಮನೆಯಿಂದ ಮೇಕಪ್ ಆಗಿ ತಿಂಡಿಯು ತಿನ್ನದೇ ಐಶ್ವರ್ಯನ ಜೊತೆಗೆ ಹೋಗಬೇಕೆಂದು ಚಪ್ಪಲು ಹಾಕಿ ಹೈಸ್ಪೀಡ್ ನಲ್ಲಿ ರಹದಾರಿಗಳನ್ನು ದಾಟಿ ಓಡಲು ಶುರು ಮಾಡಿದರೆ ನಿಲ್ಲುವುದು ಬಸ್ ತಂಗುದಾನದಲ್ಲೇ... ಮನೆಯ ಕನ್ನಡಿಯೆದುರು ಬೆಳಗ್ಗೆ ಅಷ್ಟೊತ್ತು ಸಮಯ ಕಳೆದದ್ದು ವ್ಯರ್ಥವಾಗಿಹೋಗುತ್ತದೆ ಯಾಕಂದ್ರೆ ನಾನು ಓಡಿಕೊಂಡು ಬಂದ ರಭಸದಲ್ಲಿ ಬೆವರಿ ಕನ್ನಡಿ ಯೆದುರು ಇದ್ದ ಸ್ಥಿತಿಯಲ್ಲಿ ಇರುವುದೇ ಇಲ್ಲ. ಹೀಗಾದಾಗ ಸ್ವಲ್ಪ ಬೇಜಾರು. ಯಾಕಂದರೆ ಐಶ್ವರ್ಯನನ್ನು ನಾ ಕಂಡಾಗ ಆಕೆಯ ನಗು, ಸೌಂದರ್ಯದ ಎದುರು ನಾನು ಒಂದು ಚೂರಾದರೂ ಸರಿ ಕಾಣಿಸಬೇಕಲ್ಲವೇ..
ಇನ್ನೊಂದು ಕಡೆ ತುಂಬಾ ಖುಷಿಯ ವಿಚಾರ ಯಾಕೆಂದರೆ ಐಶ್ವರ್ಯ ನನ್ನನ್ನು ಬಿಟ್ಟು ಹೋಗಲಿಲ್ಲವಲ್ಲವೆಂದು. ಆಕೆಯು ಹಾಗೆ ಕೆಲವೊಮ್ಮೆ ನಾನು ತಡೆ ಮಾಡಿದರೆ ಬಿಟ್ಟು ಹೋಗುವ ಸಂದರ್ಭ ಅನೇಕ ಬಾರಿ ಎದುರಾಗಿದೆ. ಆದರೆ ಆಕೆ ಅದೆಷ್ಟೇ ಕಷ್ಟವಾದರೂ ಸರಿ ನನ್ನ ಹಾಗೂ ನನ್ನಂತೆ ಕಾಲೇಜಿಗೆ ಬೆಳಗ್ಗೆ ಬೇಗನೆ ಹೋಗುವ ಮಕ್ಕಳನ್ನು ಬಿಟ್ಟು ಹೋಗುವುದಿಲ್ಲ. ನಾನು ಸ್ವಲ್ಪ ಬೇಗ ತಂಗುದಾಣಕ್ಕೆ ತಲುಪಿದೆನೆಂದರೆ ಅಲ್ಲಿ ನನ್ನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಾ ಇರುವುದು ರೂಢಿ. ಪ್ರತಿದಿನ ಐಶ್ವರ್ಯನ ವಿಷಯದಲ್ಲಿ ಏನಾದರೂ ಒಂದು ಮಾತು ಯಾರಾದರೂ ಎತ್ತುತ್ತಾರೆ.
ಐಶ್ವರ್ಯಳಿಗೆ ಸರಕಾರಿ ಕೆಲಸ. ಆಕೆಯನ್ನು ನಂಬಿದವರು ಅನೇಕರು. ಇಡೀ ಜಗತ್ತನ್ನ ಹೋರುವಷ್ಟು ಭಾರ ಆಕೆಗಿದೆ. ಮಾತ್ರವಲ್ಲ ಆಕೆಯ ಜವಾಬ್ದಾರಿಯನ್ನು ಚಾಚು ತಪ್ಪದೆ ಮಾಡುತ್ತಾಳೆ. ಸಮಯ ದ ಜೊತೆ ಆಕೆಗೆ ನಂಟು ಬಹಳ. ಶಾಲಾ ಕಾಲೇಜು ಮಕ್ಕಳೆಂದರೆ ಆಕೆಗೆ ಬಹು ಪ್ರೀತಿ. ಹಾಗೆ ಮಕ್ಕಳಿಗೂ ಆಕೆ ಎಂದರೆ ಅಷ್ಟೇ ಪ್ರೀತಿ, ಗೌರವ, ಜೊತೆಗೆ ಅಪಾರ ನಂಬಿಕೆ. ಆಕೆಯ ಬರುವಿಕೆಯನ್ನು ನಂಬಿ ಅದೆಷ್ಟೋ ಮಕ್ಕಳಿದ್ದಾರೆ. ಬನ್ನಿ ಆಕೆಯನ್ನು ನೀವೆಷ್ಟು ಬಾರಿ ಭೇಟಿಯಾಗಿರುತ್ತೀರಿ. ಆದರೆ ನಿಮಗೆ ಅದು ಅರಿವಾಗದೆ ಇರಬಹುದು.
ಆಗೋ ನೋಡಲ್ಲಿ ಐಶ್ವರ್ಯ ಬಂದಳು
ನಕ್ಕು ನಲಿಯುತ ಬರುತಿಹಳು
ಕಾಡಿಗೆ ಬಳಿದು ಕಾಂತಿ ತುಂಬಿದ ಕಣ್ಣುಗಳು
ಸರಿಗೆ ಹಾಕಿದ ಅಗಲ ಬಾಯಿಯಿಂದ ನಗುತಿಹಳು
ಹೂಮಾಲೆ ಅಲಂಕಾರ ಗೊಂಡಿರುವಳು
ಹೊಳೆಯುತಿಹಳು ಆಕೆ ಪಳ ಪಳ
ರಭಸದಲ್ಲಿ ಹತ್ತಿರ ಹತ್ತಿರ ತಲುಪಿದಳು
ದೇವರಲ್ಲಿ ಮನದೊಳಗೆ ಬೇಡುತ್ತಿರುವ ನಾವುಗಳು
ಆಕೆಯೊಮ್ಮೆ ನಮ್ಮೆದುರು ನಿಲ್ಲಲು
ಗೆಳೆಯರೇ ಈ ಐಶ್ವರ್ಯ ಯಾರು ಗೊತ್ತಾ? ಐಶ್ವರ್ಯ ಎಂಬದು ನಾನಿಟ್ಟ ಸರಕಾರಿ ಬಸ್ಸಿನ ಹೆಸರು. ಒಂದು ದಿನ ಹೀಗೆ ಬಸ್ಸು ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ನನಗೆ ಹಾಗೂ ನನ್ನ ಕಣ್ಣಿಗೆ ಕಾಣಿಸಿದ್ದು ಬಸ್ಸು ಅಂದು ಹೂಮಾಲೆಯಿಂದ ಅಲಂಕಾರಗೊಂಡು ನಗುನಗುತ್ತಾ ಬರುತ್ತಿರುವುದು... ನೀವು ಒಮ್ಮೆ ಬಸ್ಸು ಬರುತ್ತಿರುವಾಗ ಅಥವಾ ನಿಂತಿರುವಾಗ ಬಸ್ಸಿನ ಎದುರು ಭಾಗವನ್ನು ಸರಿಯಾಗಿ ಗಮನಿಸಿ ಅದನ್ನು ಬಸ್ ಎಂದು ಭಾವಿಸಬೇಡಿ... ನಿಮ್ಮ ಕಲ್ಪನಾ ಶಕ್ತಿಗೆ ಕೆಲಸ ಕೊಡಿ, ಬೇರೆ ಕಲ್ಪನೆಯಲ್ಲಿ ವಿಭಿನ್ನ ರೀತಿಯಲ್ಲಿ ನೋಡಿ ಯಾರಿಗೆ ಗೊತ್ತು ಆಗ ನಿಮ್ಮ ಭಾವನೆಯಲ್ಲಿ ಆ ಬಸ್ಸಿನ ಎದುರು ಭಾಗ ಬೇರೆ ರೀತಿಯಲ್ಲಿ ವಿಭಿನ್ನವಾಗಿ ಮೂಡಿ ಬರಬಹುದೇನೋ...
-ದೀಪ್ತಿ ಅಡ್ಡಂತ್ತಡ್ಕ
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ