ಉಜಿರೆ: ಮೊದಲಿನಿಂದಲೂ ಭಾರತ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಇದೀಗ ಉಳಿದ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರವೂ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್ ಸತೀಶ್‌ಚಂದ್ರ ಹೇಳಿದರು.
ನ.27ರಂದು ಉಜಿರೆ ಶ್ರೀ.ಧ.ಮಂ ಕಾಲೇಜು ಮತ್ತು ಕರ್ನಾಟಕ ರಾಜ್ಯ ವೇಟ್ ಲಿಫ್ಟರ್ಸ್ ಅಸೋಸಿಯೇಶನ್ ವತಿಯಿಂದ ನಡೆದ ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.
ಕ್ರೀಡಾ ಚಟುವಟುಕೆಗಳ ಪ್ರಾಮುಖ್ಯತೆಯನ್ನು ಅರಿತುಕೊಂಡು, ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಶಕ್ಕೆ ಕೀರ್ತಿ ತರುವಂತಹ ಸಾಧನೆ ಮಾಡಲು ಸಾಧ್ಯ. ಇದಕ್ಕೆ ಸಾಕ್ಷಿ ಎನ್ನುವಂತೆ ವಿವಿಧ ಅಂತರಾಷ್ಟೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಮಾಡಿರುವಂತಹ ಸಾಧನೆಗಳು. ಇದಕ್ಕೆ ಪೂರಕವಾಗಿ ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳು ಪಠ್ಯಯೊಂದಿಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡುತ್ತಿರುವುದಾಗಿದೆ ಎಂದರು.
ದಕ್ಷಿಣಕನ್ನಡ ಜಿಲ್ಲೆ ವೇಟ್‌ಲಿಫ್ಟಿಂಗ್ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು, ಇಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ, ಜೀವನ ಶೈಲಿ ಹಾಗೂ ತರಬೇತಿ ಕ್ರೀಡಾಪಟುಗಳಿಗೆ ಹೇಳಿಮಾಡಿಸಿದಂತಿದೆ. ಕ್ರೀಡಾಪಟುಗಳು ಕ್ರೀಡಾಮನೋಭಾವದಿಂದ ಭಾವಹಿಸಬೇಕೇ ವಿನಃ ಗೆಲುವಿಗಾಗಿ ಅನ್ಯಮಾರ್ಗಗಳನ್ನು ಹುಡುಕಬಾರದು ಎಂದು ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್ ಅಸೋಸಿಯೇಶನ್ ಕಾರ್ಯದರ್ಶಿಯಾದ ಎಸ್.ಎಚ್. ಆನಂದೇಗೌಡ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್. ಉದಯಚಂದ್ರ ಮಾತನಾಡಿ ಕ್ರೀಡಾಳುಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕು ಎಂದರು. ಕ್ರೀಡಾಪಟುಗಳು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ದಿನೇಶ್ ಚೌಟ, ಕಾಲೇಜಿನ ದೈಹಿಕ ಶಿಕ್ಷಣ ಮಾರ್ಗದರ್ಶಕರಾದ ರಮೇಶ್. ಹೆಚ್. ಹಾಗೂ ವಿವಿಧ ಕಾಲೇಜಿನಿಂದ ಆಗಮಿಸಿದ ಮಾರ್ಗದರ್ಶಕರು, ನಿರ್ಣಾಯಕರು ಹಾಜರಿದ್ದರು. ಮೂರು ದಿನಗಳ ಕಾಲ ನಡೆಯಲಿರುವ ಈ ಸ್ಪರ್ದೆಯಲ್ಲಿ ಒಟ್ಟು 340 ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ರಮೇಶ್ ಹೆಚ್ ಸ್ವಾಗತಿಸಿ, ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಸುವೀರ್ ಜೈನ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ