ಉಜಿರೆ: ಕನ್ನಡಿಗರು ತಮ್ಮ ನಾಡು - ನುಡಿಯ ಬಗ್ಗೆ ಅಭಿಮಾನ ಹಾಗೂ ಅರಿವನ್ನು ಹೊಂದಿರಬೇಕೆಂದು ಅಮೇರಿಕಾದ ಖ್ಯಾತ ಕನ್ನಡ ಬರಹಗಾರರಾದ ಶ್ರೀವತ್ಸ ಜೋಶಿಗಳು ಅಭಿಪ್ರಾಯ ಪಟ್ಟರು. ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಸಂಘವು ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಆಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅವರು ಮಾತನಾಡಿ ಭಾಷೆ ಕೇವಲ ಸಂವಹನದ ಸೊತ್ತು ಅಲ್ಲ. ಅದೊಂದು ನಮ್ಮೆಲ್ಲರ ಅಸ್ತಿತ್ವ ಹಾಗೂ ಅಸ್ಮಿತೆಯ ದ್ಯೋತಕ . ಕನ್ನಡ ನಾಡನ್ನು ಬಿಟ್ಟು ಪರದೇಶಗಳಿಗೆ ಹೋದಾಗ ಜನರನ್ನು ಒಂದುಗೂಡಿಸುವಲ್ಲಿ ಭಾಷೆಯ ಪಾತ್ರ ಮಹತ್ತರ. ನಾನು ಅಮೇರಿಕಾಕ್ಕೆ ಹೋದಾಗ ಅನಾಥ ಪ್ರಜ್ಞೆ ಬರದಂತೆ ಅಂಕಣ ಬರಹಕ್ಕೆ ತೊಡಗಿಸಿಕೊಂಡೆ. ಅಮೇರಿಕಾದ ಬಹಳ ಊರುಗಳಲ್ಲಿ ಕನ್ನಡ ಸಂಘಟನೆಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದ್ದು, ಅಲ್ಲಿನ ಅನಿವಾಸಿ ಕನ್ನಡಿಗರಿಗೆ ಕನ್ನಡ ನಾಡು ನುಡಿ ಸಂಸ್ಕೃತಿಯ ನಂಟಿನ ಅರಿವನ್ನು ಹೆಚ್ಚಿಸುತ್ತಲೇ ಇದೆ. ನಮ್ಮ ನಾಡು ನುಡಿ ಸಂಸ್ಕೃತಿಯ ಬಗ್ಗೆ ತಿಳಿದಾಗ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ . ಹೀಗಾಗಿ ಇಂದಿನ ಜಾಗತೀಕರಣ ಕಾಲದಲ್ಲಿ ಕನ್ನಡದ ವಿಶ್ವಾತ್ಮಕ ಪ್ರಜ್ಞೆಯನ್ನು ಹೊಂದಬೇಕಾದುದು ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎನ್. ದಿನೇಶ್ ಚೌಟರವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಮೋದ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಾಧಾಕೃಷ್ಣ ಕೆದಿಲಾಯರು ಉಪಸ್ಥಿತರಿದ್ದರು. ರಾಜ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕನ್ನಡ ಸಂಘದ ಸದಸ್ಯರುಗಳಾದ ಅನನ್ಯಾ, ಯಶಸ್ ಮೋಹನ್, ಪುನೀತ್, ಶಾಂತಿಕಾರವರು ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


